ಪರಿಸರ ಸ್ವಚ್ಛವಾಗಿಡಿ ಮಲೇರಿಯಾ ದೂರವಿಡಿ'
ಕೋಲಾರ: ಮಲೇರಿಯಾದಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಸಾವು-ನೋವು ಸಂಭವಿಸುವುದರಿಂದ ಸಾರ್ಜಜನಿಕರು ಪರಿಸರ ಸ್ವಚ್ಛವಾಗಿಡುವುದಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೌಡೇಶ್ವರಿ ಕರೆ ನೀಡಿದರು. ಅವರು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ಕೋಲಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಶುದ್ಧವಾದ ನೀರು ಸೇವನೆ, ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡದೆ ನಿರ್ಲಕ್ಷಿಸುವುದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗ ರೋಜಿನಗಳಿಗೆ ಕಾರಣವಾಗುತ್ತಿದೆ. ಜನತೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಮಲೇರಿಯಾ ಬಗ್ಗೆ ಜಾಗೃತರಾಗಬೇಕೆಂದರು. ತಾ.ಪಂ ಅಧ್ಯಕ್ಷೆ ಭಾಗ್ಯಮ್ಮ ನಾರಾಯಣಮೂರ್ತಿ, ಉಪಾಧ್ಯಕ್ಷೆ ಸರಸ್ವತಿ, ಡಿಹೆಚ್ಓ ಡಾ.ಪ್ರಕಾಶ್ಕುಮಾರ್, ತಾಲೂಕು ಆರೋಗ್ಯಾದಿಕಾರಿ ಡಾ.ಲತಾ, ಆರೋಗ್ಯ ಶಿಕ್ಷಣಾಧಿಕಾರಿ ಜಯಣ್ಣ ಮುಂತಾದವರು ಇದ್ದರು.
ಮಲ್ಲನಾಯಕನಹಳ್ಳಿ ಹಾಸ್ಟೆಲ್ ಅವ್ಯವಸ್ಥೆಗೆ ಹಿಂದೂ ಯುವ ಶಕ್ತಿ ಕಿಡಿ
ಮುಳಬಾಗಲು: ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಹಿಂದೂ ಯುವ ಶಕ್ತಿ ಕಾರ್ಯಕರ್ತರು ಶುಕ್ರವಾರ ಸಂಜೆ ಭೇಟಿ ನೀಡಿ ಬಾಲಕಿಯರಿಂದ ಮಾಹಿತಿ ಪಡೆದರು. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ಸೌಲಭ್ಯಗಳು ಇಲ್ಲದ ಕೊಠಡಿಗಳು ಎಂಟು, ಒಂಭತ್ತು ಮತ್ತು ಹತ್ತು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪಾಲಿಗೆ ನಕರ ಸದೃಶ್ಯವಾಗಿದೆ. ಮಕ್ಕಳಿಗೆ ಜ್ವರ ಬಂದರೆ ಕೇಳುವರು ಇರುವುದಿಲ್ಲ. ಇದೇ ಪರಿಸ್ಥಿತಿ ಬಾಲಕರ ವಿದ್ಯಾರ್ಥಿ ನಿಲಯದಲ್ಲೂ ಇದೆ.
ಇವುಗಳ ಕುರಿತು ಮಾಹಿತಿ ಪಡೆದ ಕಾರ್ಯಕರ್ತರು ತಕ್ಷಣ ಕ್ರಮ ತೆಗೆದುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದರು. ತಾಲೂಕು ಹಿಂದೂ ಯುವ ಶಕ್ತಿ ಅಧ್ಯಕ್ಷ ಐಡಿಯಾ ಮಂಜುನಾಥ್, ದೊಮ್ಮಸಂದ್ರ ನಾರಾಯಣಸ್ವಾಮಿ, ಹರಿ, ಹರಿನಾಥರೆಡ್ಡಿ, ಬಾಲಾಜಿ, ವಿನೋದ್, ರಘು, ಸತೀಶ್, ಪ್ರಶಾಂತ್, ಮತ್ತು ಹಿಂದೂ ಯುವಶಕ್ತಿ ಕಾರ್ಯಕರ್ತರು ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರ 30 ನೇ ವಾರ್ಡಿಗೆ ಚುನಾವಣಾ ವೇಳಾಪಟ್ಟಿ ಪ್ರಕಟ
ಚಿಕ್ಕಬಳ್ಳಾಪುರ: ರೇಲ್ವೆ ಹಳಿ ನಿರ್ಮಾಣಕ್ಕಾಗಿ ದಲಿತರನ್ನು ಒಕ್ಕಲೆಬ್ಬಿಸಲಾಗುತ್ತಿದೆ, ನಿವಾಸಿಗಳಿಗೆ ಪುನರ್ ವಸತಿ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ನಗರಸಭಾ ಚುನಾವಣೆ ಬಹಿಷ್ಕರಿಸಲಾಗಿದ್ದ ನಗರದ 30 ನೇ ವಾರ್ಡಿನ (ಅಂಬೇಡ್ಕರ್ ಕಾಲೋನಿ) ನಗರಸಭಾ ಸದಸ್ಯರ ಆಯ್ಕೆಗೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜುಲೈ 10 ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಜು.17 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಜು.18 ಸ್ವೀಕಾರಗೊಂಡ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆದುಕೊಳ್ಳಲು ಜು.20 ಕೊನೆಯ ದಿನವಾಗಿದ್ದು, ಜು.28 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಅವಶ್ಯವಿದ್ದಲ್ಲಿ ಜು.30 ರಂದು ಮರು ಮತದಾನ ನಡೆಯಲಿದ್ದು ಜು.31 ರಂದು ಮತ ಎಣಿಕೆ ಕಾರ್ಯ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಜು.10 ರಿಂದ ಜು.31 ರವರೆಗೂ ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ವೀರಭದ್ರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ನಗರಸಭೆಯ 31 ವಾರ್ಡುಗಳಿಗೆ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನಗರದ 30 ನೇ ವಾರ್ಡಿನ ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ಚುನಾವಣೆಯಿಂದ ದೂರ ಉಳಿದಿದ್ದರು. ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳು ನಿವಾಸಿಗಳ ಒತ್ತಾಯದಂತೆ ಕೊನೆಯ ಕ್ಷಣದಲ್ಲಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದರು. ಈ ಹಿನ್ನೆಲೆಯಲ್ಲಿ 30ನೆ ವಾರ್ಡಿಗೆ ಚುನಾವಣೆಯನ್ನು ಮುಂದೂಡಲಾಗಿತ್ತು.