ಮಳೆ ಅಭಾವ: ಕಂಗಾಲಾದ ರೈತರು
ಮಾಲೂರು: ಮುಂಗಾರು ನಂಬಿ ವಾಡಿಕೆಯಂತೆ ಕೃಷಿ ಚಟುವಟಿಕೆ ಪ್ರಾರಂಭಿಸಿರುವ ತಾಲೂಕಿನ ರೈತರು ಜೂನ್ ತಿಂಗಳ ಮಳೆಯ ಹಿನ್ನಡೆಯಿಂದ ಬಿತ್ತನೆ ಮಾಡಿರುವ ಬೆಳೆ ಬಾಡುತ್ತಿರುವುದರಿಂದ ಕಂಗಾಲಾಗಿದ್ದಾರೆ.ಪ್ರತಿ ವರ್ಷ ಜೂನ್ನಲ್ಲಿ ಉತ್ತಮವಾಗಿ ಬರುತ್ತಿದ್ದ ಮುಂಗಾರು ಮಳೆ ಈ ಬಾರಿ ಕಡಿಮೆಯಾಗಿದೆ. ರೈತರ ಕೃಷಿ ಚಟುಟಿಕೆಗಳಿಗೆ ಬ್ರೇಕ್ ಬಿದ್ದಂತಾಗಿದೆ. ಜೂನ್ ಅಂತ್ಯಕ್ಕೆ ವಾಡಿಕೆ ಮಳೆ 213 ಮಿ.ಮೀ. ಇದ್ದು, 50 ಮಿ.ಮೀ. ಕೊರತೆಯ ನಡುವೆ 159 ಮಿ.ಮೀ. ಮಳೆಯಾಗಿದೆ. ಅದರಲ್ಲೂ ಕಳೆದ 15 ದಿನಗಳಿಂದ ಮಳೆ ಬಾರದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ತಾಲೂಕಿನ ಟೇಕಲ್ ಹಾಗೂ ಮಾಸ್ತಿ ಪ್ರದೇಶಗಳಲ್ಲಿ ಸ್ವಲ್ಪ ಉತ್ತಮ ಮಳೆ ಬಂದಿದ್ದು ಕೆರೆಗಳಲ್ಲಿ ನೀರು ಬಂದಿದೆ. ಆದರೆ ಲಕ್ಕೂರು-ಕಸಬಾ ಹೋಬಳಿಯಲ್ಲಿ ಮಳೆಯ ಕೊರತೆ ಎದುರಾಗಿದೆ. ತಾಲೂಕಿನ ಕೆಲವಡೆ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು ಇನ್ನೂ ಹಲವೆಡೆ ಬಿತ್ತನೆಯೇ ಪ್ರಾರಂಭವಾಗಿಲ್ಲ. ಜು.15ರವರೆಗೆ ರಾಗಿ ಬಿತ್ತನೆ ಮಾಡಬಹುದಾಗಿರುವುದರಿಂದ ರೈತರು ಉತ್ತಮ ಮಳೆಯಾಗಿ ಕಾಯುತ್ತಿದ್ದಾರೆ. ತಾಲೂಕಿನಲ್ಲಿ ಈಗಾಗಲೇ 275 ಹೆಕ್ಟೇರ್ನಲ್ಲಿ ಎಳ್ಳು, 30 ಹೆಕ್ಟೇರ್ನಲ್ಲಿ ನೆಲಗಡಲೆ ಹಾಗೂ ತೊಗರಿ, 15 ಹೆಕ್ಟೇರ್ನಲ್ಲಿ ಮೇವಿನ ಜೋಳ ಬಿತ್ತನೆ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ರೈತ ಹಾಕಿದ ಬಂಡಾವಳಕ್ಕೆ ಮೋಸವಾಗಲಿದೆ. ಟೇಕಲ್ ಹೋಬಳಿಯ ತಿಮ್ಮನಾಯಕನಹಳ್ಳಿ, ಸಂತೇಹಳ್ಳಿ ಸೇರಿದಂತೆ ತಾಲೂಕಿನ ಬಹುತೇಕ ಭಾಗದ ರೈತರು ಬಿತ್ತನೆ ಬೀಜವನ್ನು ಸಿದ್ಧವಾಗಿಟ್ಟುಕೊಂಡು ಮಳೆಗಾಗಿ ಮುಗಿಲು ಕಡೆ ನೋಡುತ್ತಿದ್ದಾರೆ.
ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹಾಗಂತ ರೈತರು ಕಂಗಾಲಾಗುವ ಅಗತ್ಯವಿಲ್ಲ. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಅಗತ್ಯ ಬೀಜ, ಗೊಬ್ಬರ ಪೂರೈಕೆ ಮಾಡಲಾಗಿದೆ.
- 7 ಕ್ಷೇತ್ರ ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ