ಹಳ್ಳಿ, ಹಳ್ಳಿಗೂ ಭೇಟಿ ನೀಡಿ ಸಮಸ್ಯೆ ಆಲಿಸುವೆ: ಶಾಸಕ
ಕ.ಪ್ರ. ವಾರ್ತೆ ಟೇಕಲ್ ಜು.5
ಮಾಲೂರು ತಾಲೂಕಿನ ಪ್ರತಿ ಹಳ್ಳಿಗೂ ಭೇಟಿ ನೀಡಿ, ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಕೆ.ಎಸ್.ಮಂಜುನಾಥಗೌಡ ಹೇಳಿದರು.ಟೇಕಲ್ ಹೋಬಳಿಯ ಕೊಂಡಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಯ ಕಾರಂಗುಟ್ಟೆ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ರು. 10 ಲಕ್ಷ ವೆಚ್ಚದಲ್ಲಿ ನೂತನವಾಗಿ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನ ಜನತೆ ತಮ್ಮ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಅತಿ ಹೆಚ್ಚಿನ ಮತಗಳಿಂದ ಶಾಸಕನನ್ನಾಗಿ ಆಯ್ಕೆ ಮಾಡಿದ್ದು, ಜನತೆ ಋಣ ತೀರಿಸುವ ನಿಟ್ಟಿನಲ್ಲಿ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಹೆಚ್ಚಿನ ರೀತಿಯಲ್ಲಿ ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಿ ಜನತೆ ಋಣ ತೀರಿಸುವುದಾಗಿ ಹೇಳಿದರು.ಟೇಕಲ್ ಹೋಬಳಿಯ ಕಾರಂಗುಟ್ಟೆ ಗ್ರಾಮಕ್ಕೆ ರು. 10 ಲಕ್ಷ ಚಿನಪ್ಪಗಾನಹಳ್ಳಿ ಸಿಮೆಂಟ್ ರಸ್ತೆ ರು. 10 ಲಕ್ಷ ನಕ್ಕನಹಳ್ಳಿ ಸಿಮೆಂಟ್ ರಸ್ತೆ 10 ಲಕ್ಷ, ಕುಂಟನಹಳ್ಳಿ ಗ್ರಾಮಕ್ಕೆ ಸಿಮೆಂಟ್ ರಸ್ತೆಗಾಗಿ 10 ಲಕ್ಷ ಸೇರಿದಂತೆ ಒಟ್ಟು ರು. 50 ಲಕ್ಷ ಹಾಗೂ ಚಿನಪ್ಪಗಾನಹಳ್ಳಿ ಗ್ರಾಮದಿಂದ ಆನೇಪುರ ಗ್ರಾಮದ ಮುಖ್ಯರಸ್ತೆಯನ್ನು ರು. 1 ಕೋಟಿ ವೆಚ್ಚದಲ್ಲಿ ಶಾಸಕರ ನಿಧಿಯಿಂದ ನೂತನವಾಗಿ ಡಾಂಬರೀಕರಣ ರಸ್ತೆ, ಹಾಗೂ ಸಿಮೆಂಟ್ ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದ ಅವರು ಕಾಮಗಾರಿ ಅನುಷ್ಠಾನದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಇಲ್ಲ, ಸಾರ್ವಜನಿಕರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಕಾಪಾಡಬೇಕೆಂದು ಕೋರಿದರು.ಜಿ.ಪಂ.ಸದಸ್ಯೆ ರತ್ನಮ್ಮ ನಂಜೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ, ಮಾಜಿ ಸದಸ್ಯ ಆನೇಪುರ ಹನುಮಂತಪ್ಪ, ಪುರಸಭಾ ಸದಸ್ಯ ಪಚ್ಚಪ್ಪ, ಮುಖಂಡರಾದ ಟೇಕಲ್ ಮುನಿಸ್ವಾಮಿಗೌಡ, ಚಿನ್ನಸ್ವಾಮಿಗೌಡ, ಮುಖಂಡ ಕ್ಷೇತ್ರೇನಹಳ್ಳಿ ವೆಂಕಟೇಶ್, ಗ್ರಾಪಂ ಸದಸ್ಯ ವೆಂಕಟೇಶ್ ಇನ್ನಿತರರು ಹಾಜರಿದ್ದರು.
ನಾಳೆಯಿಂದ ಶಾಲಾ ಮಕ್ಕಳ ಸಂಕೀರ್ತನೆ
ಕೋಲಾರ: ನಗರದ ಚಿನ್ಮಯ ಮಿಷನ್ ಹಾಗೂ ಚಿನ್ಮಯ ವಿದ್ಯಾಲಯದ ವತಿಯಿಂದ ಇದೇ ಜು.7 ರಿಂದ 13ರವರೆಗೂ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಗೀತಾ ಜ್ಞಾನಯಜ್ಞ ಕಾರ್ಯಕ್ರಮದ ಅಂಗವಾಗಿ ಪ್ರಚಾರ ನೀಡುವ ಉದ್ದೇಶದಿಂದ ಗುವಾರ ಚಿನ್ಮಯ ಶಾಲೆಯ ಮಕ್ಕಳು ಸಂಕೀರ್ತನೆ ನಡೆಸಿದರು.ನೂರಾರು ಶಾಲಾ ಮಕ್ಕಳು ನಗರದ ವಿವಿಧ ಕಡೆ ಮದ್ಭಗವದ್ಗೀತೆಯ ಶ್ಲೋಕಗಳನ್ನು ಪಠಣ ಮಾಡುತ್ತಾ ಪ್ರಚಾರ ಕೈಗೊಂಡರು. ಭಗವದ್ಗೀತೆಯ 7ನೇ ಅಧ್ಯಾಯದ ಪ್ರವಚನ ಜು.7ರಿಂದ 13 ರವರೆಗೆ ಪ್ರತಿ ದಿನ ಸಂಜೆ 6.30ರಿಂದ ರಾತ್ರಿ 8 ಗಂಟೆವರೆಗೆ ನಡೆಯಲಿದ್ದು ಚಿನ್ಮಯ ಮಿಷನ್ ರಾಜ್ಯ ಮುಖ್ಯಸ್ಥರಾದ ಸ್ವಾಮಿ ಬ್ರಹ್ಮಾನಂದ ನಡೆಸಿಕೊಡಲಿದ್ದಾರೆ. ಚಿನ್ಮಯ ಶಾಲೆ ಶಿಕ್ಷಕರಾದ ಭವಾನಿ, ಬಸವರಾಜ್ ಮತ್ತಿತರರಿದ್ದರು.