ಹುಳದೇನಹಳ್ಳಿ ಜನಸ್ಪಂದನ ಸಭೆ
ಟೇಕಲ್: ಹುಳದೇನಹಳ್ಳಿಯಲ್ಲಿ ಜನಸ್ಪಂದನ ಸಭೆ ಇದೇ ಜು.6 ರಂದು ಬೆಳಿಗ್ಗೆ 11 ಘಂಟೆಗೆ ಹುಳದೇನಹಳ್ಳಿ ಗ್ರಾ.ಪಂ. ನ ಆವರಣದಲ್ಲಿ ವಿವಿಧ ಇಲಾಖೆಗಳ ಸಂಬಂದಿಸಿದಂತೆ ಜನಸ್ಪಂದನ ಸಭೆಯನ್ನು ಶಾಸಕ ಕೆ.ಎಸ್.ಮಂಜುನಾಥಗೌಡರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ತಮ್ಮ ಕುಂದು ಕೊರತೆಗಳ ಅರ್ಜಿಗಳನ್ನು ಸಲ್ಲಿಸಬೇಕೆಂದು ಇಲಾಖೆ ಮೂಲಗಳು ತಿಳಿಸಿವೆ.
ಮಳ್ಳೂರು ವಿವೇಕಾನಂದ ಶಾಲೆಯಲ್ಲಿ ಅಂಚೆ ಚೀಟಿ ಪ್ರದರ್ಶನ
ಶಿಡ್ಲಘಟ್ಟ: ಸಮಾಜಸೇವೆ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ಗುರಿಯಾಗಿಟ್ಟುಕೊಂಡು ಪ್ರದರ್ಶನ ಕೊಡುತ್ತಿದ್ದೇನೆ ಎಂದು ಮಳ್ಳೂರು ಗ್ರಾಮದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಅಂಚೆ ಚೀಟಿ ಪ್ರದರ್ಶನದಲ್ಲಿ ಸಂಗ್ರಹಕಾರ ಎಂ.ಆರ್.ಪ್ರಭಾಕರ್ ತಿಳಿಸಿದರು. ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಅಂಚೆ ಚೀಟಿ, ಎಲ್ಲ ದೇಶಗಳ ನಾಣ್ಯಗಳು, ನೋಟುಗಳ ಪ್ರದರ್ಶನ ಏರ್ಪಡಿಸಿದ್ದು ಶಾಲೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳು ಅದನ್ನು ವೀಕ್ಷಿಸಿದರು. ವಿವಿಧ ದೇಶಗಳ ಚಲಾಯಿತ ನೋಟುಗಳು, ನಮ್ಮ ದೇಶದಲ್ಲಿ ಮುದ್ರಿತವಾಗಿರುವ ಎಲ್ಲ ರೀತಿಯ ಅಂಚೆ ಚೀಟಿಗಳ ಸಂಗ್ರಹ ಮನಸೊರೆಗೊಳುವಂತಿತ್ತು. ಹವ್ಯಾಸಿ ಅಂಚೆ ಚೀಟಿ ಸಂಗ್ರಹಕಾರ ಎಂ.ಆರ್ ಪ್ರಭಾಕರ್ರವರು ಇದುವರೆಗೂ 1850 ಮೇಲ್ಪಟ್ಟು ಪ್ರದರ್ಶನಗಳನ್ನು ನೀಡಿದ್ದು ಅವರಿಗೆ ಹಲವು ರಾಷ್ರ್ಟೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರೆತಿವೆ.
ಇಂದು ಉಚಿತ ತಪಾಸಣಾ ಶಿಬಿರ
ಮಾಲೂರು: ಬೆಂಗಳೂರಿನ ಟ್ರೆನಿಟಿ ಕೇರ್ ಫೌಂಡೇಶನ್ ಸಂಸ್ಥೆಯು ಸ್ಥಳೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ವತ್ರೆಯಲ್ಲಿ ಜು.6 ರಂದು ಉಚಿತ ಸೀಳು ತುಟಿ, ಮುಖದ ವಿಕಲಾಂಗತೆ ಹಾಗೂ ದವಡೆ ವಿಕೃತ ತಪಸಣಾ ಶಿಬಿರ ಆಯೋಜಿಸಲಾಗಿದೆ. ಇಲ್ಲಿನ ಸರ್ಕಾರಿ ಆಸ್ವತ್ರೆಯಲ್ಲಿ ಜು.6 ರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ರವರೆಗೆ ನಡೆಯಲಿದ್ದು, ನುರಿತ ವೈದ್ಯರ ತಂಡವು ಮುಖದ ವಿಕಲಾಂಗತೆಯನ್ನು ಪರೀಕ್ಷಿಸಲಿದ್ದಾರೆ. ಸೀಳು ತುಟಿ ಮತ್ತು ಸೀಳು ಅಂಗಳದ ಶಸ್ತ್ರ ಚಿಕಿತ್ಸೆ, ಹಿಂದಿನ ಸೀಳು ತುಟಿಯ ಶಸ್ತ್ರ ಚಿಕಿತ್ಸೆ ಪರಿಣಾಮವಾಗಿ ಉಳಿದ ತುಟಿಯ ಕಲೆಯನ್ನು ಸರಿ ಪಡಿಸುವ ಶಸ್ತ್ರ ಚಿಕಿತ್ಸೆ ಸೇರಿದಂತೆ ಇತರೆ ಮುಖಂಡ ವಿಕಲಾಂತೆ ತೊಂದರೆಗಳಿಗೆ ಸರಿ ಪಡಿಸಲಾಗುವುದು. ಚಿಕಿತ್ಸೆ ಅಗತ್ಯವಿರುವ ಮಕ್ಕಳು ಹಾಗೂ ವಯಸ್ಕರಿಗೆ ಶಸ್ತ್ರ ಚಿಕಿತ್ಸೆ ಬೆಂಗಳೂರಿನ ಹೆಚ್.ಸಿ.ಜೆ.ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ-9035525974 ನ್ನು ಸಂಪರ್ಕಿಸಲು ಕೋರಲಾಗಿದೆ.
ಮೊಬೈಲ್ ರಿಪೇರಿ ತರಬೇತಿ
ಕೆಜಿಎಫ್: ವಿದ್ಯಾರ್ಥಿಗಳು, ಯುವಕರು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ರೆಸಿಡೆಂಟ್ಸ್ ವೆಲ್ಫೆರ್ ಅಸೋಷಿಯೇಷನ್, ಕನ್ನಡ ಸಂಘ, ರೋಟರಿಕ್ಲಬ್ ಮತ್ತು ಸರಸ್ವತಿ ಫೌಂಡೇಷನ್ ಫಾರ್ ರೂರಲ್ ಆರ್ಗನೈಜೇಷನ್ ಸಂಯುಕ್ತ ಆಶ್ರಯದಲ್ಲಿ ಉಚಿತ ಮೊಬೈಲ್ ರಿಪೇರಿ ತರಬೇತಿ ಮತ್ತು ಬ್ಯೂಟಿ ಪಾರ್ಲರ್ ತರಬೇತಿ ಮತ್ತು ಕಂಪ್ಯೂಟರ್ ಹಾರ್ಡ್ವೇರ್ ತರಬೇತಿ ನೀಡುವ ಶಿಬಿರವನ್ನು ಕೆಜಿಎಫ್ನಲ್ಲಿ ಹಮ್ಮಿಕೊಳ್ಳಲಾಗಿದೆ. 21 ದಿನಗಳ ವರೆಗೆ ನೀಡಲಾಗುವ ಈ ಉಚಿತ ತರಬೇತಿಗಳಿಗೆ ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ತಕ್ಕಂತೆ ಬ್ಯಾಚ್ ಮಾಡಲಾಗುವುದು, ಅರ್ಜಿಗಳನ್ನು ಜು.5 ರಿಂದ 12 ರವರೆಗೆ ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ವಿತರಿಸುವಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. 98447-19173 ಮತ್ತು 99646-19344 ಸಂಪರ್ಕಿಸಬಹುದು.
ಹುಳದೇನಹಳ್ಳಿಯಲ್ಲಿ ಆಸ್ಪತ್ರೆಗೆ ಗುದ್ದಲಿ ಪೂಜೆ ಇಂದು
ಟೇಕಲ್: ಟೇಕಲ್ನ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹುಳದೇನಹಳ್ಳಿ ಗ್ರಾಮದಲ್ಲಿ ಜುಲೈ 6 ಶನಿವಾರ ಬೆಳಗ್ಗೆ 11 ಗಂಟೆಗೆ ಜಿ.ಪಂ. ವತಿಯಿಂದ ಹುಳದೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಂ. ರವಿಂದ್ರ ಅಧ್ಯಕ್ಷತೆಯಲ್ಲಿ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಶಾಸಕ ಕೆ.ಎಸ್. ಮಂಜುನಾಥಗೌಡ ನೆರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಹೆಚ್. ಮುನಿಯಪ್ಪ, ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಹಾಗೂ ಜಿ.ಪಂ. ಅಧ್ಯಕ್ಷೆ ಚೌಡೇಶ್ವರಿ ರಾಮು, ಟೇಕಲ್ ಜಿ.ಪಂ. ಸದಸ್ಯೆ ರತ್ನಮ್ಮ ನಂಜೇಗೌಡ, ತಾ.ಪಂ. ಅಧ್ಯಕ್ಷ ಕೆ. ಚಂದ್ರಪ್ಪ, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಮುಳಬಾಗಲು ಶಾಸಕರ ಕಚೇರಿ ಪ್ರಾರಂಭ
ಮುಳಬಾಗಲು: ತಾಲೂಕಿನ ಎಲ್ಲಾ ಜನರ ಸಮಸ್ಯೆಗಳನ್ನು ಪಕ್ಷಭೇದ ಮಾಡದೆ ಪರಿಹರಿಸುವ ಸಲುವಾಗಿ ತಾವು ತಮ್ಮ ಕಚೇರಿ ಪ್ರಾರಂಭಿಸಿರುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ಪಟ್ಟಣದ ತಾಪಂ ವಸತಿ ನಿಲಯದಲ್ಲಿ ಶಾಸಕರ ಕೊಠಡಿಗೆ ಶುಕ್ರವಾರ ಪೂಜೆ ಮಾಡುವುದರ ಮೂಲಕ ಕಚೇರಿ ಪ್ರಾರಂಭಿಸಿದರು. ಅವಣೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ಮುಖಂಡ ಆರ್.ಎಸ್.ಕೃಷ್ಣಯ್ಯಶೆಟ್ಟಿ, ಮೆಕಾನಿಕ್ ಶ್ರೀನಿವಾಸ್, ಜಮ್ಮನಹಳ್ಳಿ ಕೃಷ್ಣ ಮುಂತಾದವರು ಭಾಗವಹಿಸಿದ್ದರು.
ಸಂಕೀರ್ಣ ಸ್ಥಾಪನೆಗೆ ಗುದ್ದಲಿಪೂಜೆ
ಶಿಡ್ಲಘಟ್ಟ: ನ್ಯಾಯಾಲಯದ ಸಂಕೀರ್ಣದ ಶಂಕುಸ್ಥಾಪನೆ ಮುಖ್ಯ ಸತ್ರ ನ್ಯಾಯಾಧೀಶ ವೀರಣ್ಣನವರ್ ಹಾಗೂ ಶಾಸಕ ರಾಜಣ್ಣ ಅವರಿಂದ ನೆರವೇರಿಸಲಾಯಿತು. ಶಿಡ್ಲಘಟ್ಟ-ದಿಬ್ಬೂರಹಳ್ಳಿ ರಸ್ತೆಯಲ್ಲಿ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳ ಮಂಜೂರಾಗಿದ್ದು, ಗುತ್ತಿಗೆಯನ್ನು ಶಿವರಾಜ್ ಅವರಿಗೆ ಟೆಂಡರ್ ಮೂಲಕ ಒಪ್ಪಿಸಲಾಗಿದ್ದು ಟೆಂಡರ್ ಮೊತ್ತ ರು. 943 ಲಕ್ಷ. ನ್ಯಾಯಾಲಯದ ಶಂಕುಸ್ಥಾಪನೆಯನ್ನು ಸತ್ರ ನ್ಯಾಯಾದೀಶ ವೀರಣ್ಣನವರ್, ಹಾಗೂ ಶಾಸಕ ರಾಜಣ್ಣ ನೇರವೇರಿಸಿದರು. ನ್ಯಾಯಾಧೀಶ ಎಸ್. ಮಹೇಶ್, ಹೆಚ್ಚುವರಿ ಸಿವಿಲ್ನ್ಯಾಯಾಧೀಶ ವಿಜಯ ದೇವರಾಜ ಅರಸ್, ವಕೀಲರ ಸಂಘದ ಅದ್ಯಕ್ಷ ಪಾಪಿರೆಡ್ಡಿ, ಅಪ್ಸರ್ಪಾಷ, ಡಾ.ಧನಂಜಯರೆಡ್ಡಿ, ಬಂಕ್ ಮುನಿಯಪ್ಪ, ಪಿ.ವಿ.ನಾಗರಾಜ್, ಮಳ್ಳೂರು ಹರೀಶ್, ಎಲ್ಲ ವಕೀಲರು, ಮತ್ತಿತರರು ಹಾಜರಿದ್ದರು.
ಮಾರಿಕಾಂಬ ದೇವಾಲಯ ಹುಂಡಿ ತೆರವು
ಮಾಲೂರು: ಇಲ್ಲಿನ ಗ್ರಾಮದೇವತೆ ಮಾರಿಕಾಂಬ ದೇವಾಲಯದ ಹುಂಡಿಯನ್ನು ದೇವಾಲಯದ ಸಮತಿ ಸಮಕ್ಷಮದಲ್ಲಿ ಗುರುವಾರ ತೆರೆಯಲಾಗಿದ್ದು, ಹುಂಡಿಯಲ್ಲಿ ಸಂಗ್ರಹವಾಗಿದ್ದ 24 ಗ್ರಾಂ ಚಿನ್ನ ಸೇರಿದಂತೆ 12 ಲಕ್ಷ ರು. ನಗದು ಎಣಿಕೆ ಮಾಡಲಾಯಿತು. ಕಳೆದ ಮೂರು ತಿಂಗಳಾವಧಿಯಲ್ಲಿ ಭರ್ತಿಯಾಗಿದ್ದ ಹುಂಡಿಯನ್ನು ದೇವಾಲಯ ಸಮಿತಿ ಅಧ್ಯಕ್ಷ ಪಿ.ವೆಂಕಟೇಶ್ ಸಮ್ಮುಖದಲ್ಲಿ ಸಮಿತಿ ಪಧಾಧಿಕಾರಿಗಳು ಹಾಗೂ ಸ್ವಯಂ ಸೇವಕರ ಸಹಕಾರದಿಂದ ಬೆಳಗ್ಗೆ ತರೆಯಲಾದ ಹುಂಡಿಯನ್ನು ಸಂಜೆವರೆಗೆ ಎಣಿಸಲಾಯಿತು. ಹುಂಡಿಯಲ್ಲಿದ್ದ 1.5 ಲಕ್ಷ ಚಿಲ್ಲರೆ ಹಾಗೂ 10.59 ಲಕ್ಷ ನಗದು ಸೇರಿದಂತೆ 24 ಗ್ರಾಂ.ಚಿನ್ನ,165 ಗ್ರಾಂ ಬೆಳ್ಳಿ ಹಾಗೂ 350 ಗ್ರಾಂ ವೈಟ್ ಮೆಟಲ್ಗಳನ್ನು ಲೆಕ್ಕ ಹಾಕಲಾಯಿತು. ಹುಂಡಿಯ ಸಂಗ್ರಹದಲ್ಲಿ ವಿದೇಶಿ ಹಣಗಳು ಸಹ ಪತ್ತೆಯಾಗಿದ್ದವು ಎಂದು ದೇವಾಲಯ ಸಮಿತಿ ಕೃಷ್ಣಪ್ಪ ತಿಳಿಸಿದ್ದಾರೆ.