'ಜನರ ಕುಂದುಕೊರತೆ ಅರ್ಜಿಗೆ ಸ್ಪಂದಿಸಿ'
ಅಧಿಕಾರಿಗಳಿಗೆ ಜಿಲ್ಲಾ ಲೋಕಾಯುಕ್ತ ವೃತ್ತ ನಿರೀಕ್ಷಕ ಲೋಕೇಶ್ ಸಲಹೆ
ಟೇಕಲ್: ಅಧಿಕಾರಿಗಳು ಜನರ ಬಳಿ ಸೌಜನ್ಯದಿಂದ ವರ್ತಿಸಬೇಕು. ಕುಂದುಕೊರತೆ ಬಗ್ಗೆ ಯಾವುದೇ ಸಮಸ್ಯೆ ಉದ್ಭವಿಸಿದರೆ ಅದಕ್ಕೆ ಸ್ಪಂದಿಸಬೇಕೆಂದು ಕೋಲಾರ ಜಿಲ್ಲಾ ಲೋಕಾಯುಕ್ತ ವೃತ್ತ ನಿರೀಕ್ಷಕರಾದ ಲೋಕೇಶ್ ತಿಳಿಸಿದರು.
ಇಲ್ಲಿನ ರೈತ ಭವನದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಲೋಕ್ ಅದಾಲತ್‌ನ ಅಧ್ಯಕ್ಷತೆ ವಹಿಸಿ, ಕುಂದುಕೊರತೆ ಅರ್ಜಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಸಭೆಯಲ್ಲಿ 13ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅತೀ ಹೆಚ್ಚು ಆಹಾರ ಇಲಾಖೆ ವಿರುದ್ಧ ದೂರುಗಳಾಗಿತ್ತು.
ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರ ಮಾಲೀಕತ್ವದಲ್ಲಿ ಎಸ್.ಎನ್. ಸ್ಟೋನ್ ಕ್ರಷರ್ ಟೇಕಲ್‌ನ ಮಾಕಾರಹಳ್ಳಿಯಲ್ಲಿ ಜಲ್ಲಿ ಪುಡಿ ಮಾಡುತ್ತಿದೆ. ಗ್ರಾಮದ ಅತಿ ಸಮೀಪವೇ ಬಂಡೆಗಳನ್ನು ಸಿಡಿಸುತ್ತಿದೆ. ಈ ಬಗ್ಗೆ ಗ್ರಾಮದ ಮುಖಂಡ ಪಾಷ ಸಾಬಿ ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿ, ತಹಶೀಲ್ದಾರರು ಹಾಗೂ ಟೇಕಲ್ ನಾಡಕಚೇರಿಗೆ ಸುಮಾರು ತಿಂಗಳುಗಳಿಂದ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಬಗ್ಗೆ ಪ್ರಯೋಜನವಾಗದೆ ಲೋಕ್ ಅದಾಲತ್‌ನಲ್ಲಿ ದೂರು ಸ್ವೀಕರಿಸಿದ ಲೋಕೇಶ್ ಅವರು ನಿಯಮ ಉಲ್ಲಂಘಿಸಿ ಕ್ರಷರ್ ನಡೆಸುತ್ತಿದ್ದರೆ, ಈ ಬಗ್ಗೆ ತನಿಖೆ ನಡೆಸಿ ಸ್ಥಗಿತಗೊಳಿಸುವುದಾಗಿ ತಿಳಿಸಿದರು.
ಅದರಂತೆ ಕಂದಾಯ ಇಲಾಖೆಯಲ್ಲಿ ವಿಳಂಬ ಧೋರಣೆ ಮಾಡುತ್ತಿರುವ ದೂರಿನ ಹಿನ್ನಲೆಯಲ್ಲಿ ಈ ಬಗ್ಗೆ 11 ಮಂದಿ ಗ್ರಾಮ ಲೆಕ್ಕಿಗರಿಗೆ ಇರುವುದೇ 4 ಮಂದಿಯಾಗಿದ್ದು, ಸಿಬ್ಬಂದಿ ಕೊರತೆ ಉಂಟಾಗಿದೆ ಎಂದು ಸಭೆಯಲ್ಲಿ ಉಪತಹಸೀಲ್ದಾರ್ ರವಿಶಂಕರ್ ತಿಳಿಸಿದರು.
ಯಲುಗುಳಿಯ ಪ್ರಶಾಂತ್ ಅವರು ತೋಟಗಾರಿಕೆ ಇಲಾಖೆ ತಾಲೂಕು ಅಧಿಕಾರಿ ಆನಂದ್ ಅವರು ಯಾವುದೇ ಸಭೆಗಳಿಗೆ ಬಾರದೆ ತಿಂಗಳಿಗೆ 10 ದಿನ ಮಾತ್ರ ಕಚೇರಿಗೆ ಬರುತ್ತಿದ್ದಾರೆ. ರೈತರ ಹಸಿರು ಮನೆ ಯೋಜನೆಯಲ್ಲಿ ಬಹುತೇಕ ಲಕ್ಷಾಂತರ ರು. ದುರುಪಯೋಗಪಡಿಸಲಾಗಿದೆ ಎಂದು ದೂರಿದರು. ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಈಗ ನಡೆಯುತ್ತಿರುವ ಪಡಿತರ ಚೀಟಿಯ ಪೋಟೋ ತೆಗೆಯುವ ಕಾರ್ಯಕ್ರಮದ ಬಗ್ಗೆ ಬಹುತೇಕ ದೂರುಗಳು ಬಂದಿವೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿ ಲೋಕೇಶ್ ಅವರು ಜಿಲ್ಲಾ ಆಹಾರ ಇಲಾಖಾ ಅಧಿಕಾರಿಗೆ ಪೋನಾಯಿಸಿ ಲೋಪದೋಷಗಳ ಸರಿಪಡಿಸುವ ಬಗ್ಗೆ ತಿಳಿಸಿದರು.
ಇನ್ನು ಸಭೆಯಲ್ಲಿ ಬಡವರು ಮನೆ ಕಟ್ಟಿಕೊಳ್ಳಲು ಗ್ರಾಮಗಳಲ್ಲಿ ಇರುವ ಸರ್ಕಾರಿ ಜಮೀನುಗಳನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಸ್ಥಳಗಳನ್ನು ನೀಡಬೇಕೆಂದು ಮಾಜಿ ಜಿ.ಪಂ. ಸದಸ್ಯ ಆರ್.ರಾಜಣ್ಣ ಒತ್ತಾಯಿಸಿದರು.
ಬನಹಳ್ಳಿ ಮತ್ತು ಟೇಕಲ್ ಅಂಗನವಾಡಿ ಕಾರ್ಯಕರ್ತೆ ಆಯ್ಕೆಯಲ್ಲಿ ಆಗಿರುವ ಲೋಪದೋಷದ ಬಗ್ಗೆ ತನಿಖೆ ನಡೆಸಿ ನಂತರ ಮಾಹಿತಿ ತಿಳಿಸುವುದಾಗಿ ಸಭೆಯಲ್ಲಿ ಲೋಕಾಯುಕ್ತರು ತಿಳಿಸಿದರು.
ಸಭೆಯಲ್ಲಿ ಲೋಕಾಯುಕ್ತ ಸಿಬ್ಬಂದಿ ಪ್ರಸಾದ್, ಸುನಿಲ್‌ಕುಮಾರ್, ಟೇಕಲ್ ಗ್ರಾಪಂ ಅಧ್ಯಕ್ಷೆ ಮಂಜುಳ ಶಿವಣ್ಣ, ಉಪತಹಸೀಲ್ದಾರ್ ರವಿಶಂಕರ್, ಮಾಜಿ ಅಧ್ಯಕ್ಷರಾದ ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಮುಖಂಡ ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.