ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶೈಕ್ಷಣಿಕಾಭಿವೃದ್ಧಿಗೆ ನೆರವು ಅಗತ್ಯ

Srinivasa Murthy VN
Updated On : 23 Jul 2013, 12:01 pm

ಕೋಲಾರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡಿದಾಗ ಅವರ ಶೈಕ್ಷಣಿಕ ಅಭ್ಯುದಯವನ್ನು ಕಾಣಬಹುದಾಗಿದ್ದು, ಜಿಲ್ಲೆಗೆ ಹತ್ತು ಹಲವು ಉತ್ತೇಜಕಗಳು ದಾನದ ರೂಪದಲ್ಲಿ ಹರಿದು ಬರಲಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಝುಲ್ಫಿಖಾರ್ ಉಲ್ಲಾ ತಿಳಿಸಿದರು.  ಅವರು ತಾಲೂಕಿನ ಛತ್ರಕೋಡಿಹಳ್ಳಿ ಶಾಲಾ ಆವರಣದಲ್ಲಿ ಶನಿವಾರ ಬೆಂಗಳೂರು ಪ್ಯೂಚರ್ ಇಂಡಿಯಾ ಟ್ರಸ್ಟ್ ವತಿಯಿಂದ 116 ಸರ್ಕಾರಿ ಶಾಲೆಗಳ ಸುಮಾರು 5 ಸಾವಿರ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು. ಬಿ.ಆರ್.ಸಿ ಸಮನ್ವಯಾಧಿಕಾರಿ ಸಿ. ಶ್ರೀನಿವಾಸ್,ತಾ.ಪಂ ನಿರ್ಮಲ ಭಾರತ ಅಭಿಯಾನ ಸಂಯೋಜಕ ಜಿ.ಶ್ರೀನಿವಾಸ್ ಮಾತನಾಡಿ ದಾನಗಳಲ್ಲಿ ಹಲವಾರು ವಿಧಗಳಿದ್ದು, ವಿದ್ಯಾರ್ಥಿಗಳಿಗೆ ನೀಡುವ ನೆರವನ್ನು ಸ್ವೀಕರಿಸಿ, ತಂದೆ-ತಾಯಿ ಶಿಕ್ಷಕ ಮತ್ತು ದಾನಿಗಳ ಪ್ರೀತಿಗೆ ಪಾತ್ರರಾಗಬೇಕೆಂದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆರ್. ವೀರಣ್ಣಗೌಡ, ಚಂದ್ರಪ್ಪ, ಸುಬ್ರಮಣಿ, ಮುನಿಶಾಮಿರೆಡ್ಡಿ ಹಾಗೂ ಶಿಕ್ಷಕರಾದ ಬೈರೇಗೌಡ, ಎಸ್.ನಾರಾಯಣಸ್ವಾಮಿ ಹಾಗೂ ಎಸ್.ಬಿ.ವೆಂಕಟಾಚಲಪತಿಗೌಡ ಇದ್ದರು.

ರಾಯಲ್ ವಿದ್ಯಾಸಂಸ್ಥೆಯಲ್ಲಿ ಬಣ್ಣದ ಹಬ್ಬ
ಚಿಂತಾಮಣಿ:
ಇಲ್ಲಿನ ಅಂಜಣಿ ಬಡಾವಣೆಯ ರಾಯಲ್ ವಿದ್ಯಾ ಸಂಸ್ಥೆಯಿಂದ ಚಿಣ್ಣರಿಂದ ಬಣ್ಣದ ಹಬ್ಬ ಆಚರಿಸಿ ಕನ್ನಡಾಂಬೆ ಧ್ವಜದಲ್ಲಿರುವ ಹಳದಿ ಹಾಗೂ ಕೆಂಪು ಬಣ್ಣಗಳ ಬಗ್ಗೆ ಪರಿಚಯಿಸಲು ಒತ್ತು ನೀಡಲಾಯಿತು. ಶಿಶು ವಿಹಾರ ಮಕ್ಕಳಿಗೆ ಕನ್ನಡ ಧ್ವಜದಲ್ಲಿನ ಬಣ್ಣಗಳನ್ನು ಪರಿಚಯಿಸುವ ಸಲುವಾಗಿ ಪ್ರತಿವರ್ಷ ಮಕ್ಕಳಿಂದ ಬಣ್ಣದ ಹಬ್ಬ ಆಚರಿಸಲಾಗುತ್ತದೆ. ಈ ವರ್ಷವೂ ಕನ್ನಡಾಂಬೆ ಧ್ವಜದಲ್ಲಿರುವ ಹಳದಿ ಹಾಗೂ ಕೆಂಪು ಬಣ್ಣಗಳ ಬಗ್ಗೆ ಪರಿಚಯಿಸಲು ಎಲ್‌ಕೆಜಿ ಮಕ್ಕಳಿಗೆ ಹಳದಿ ಬಟ್ಟೆ ಧರಿಸಿ, ಯು.ಕೆ.ಜಿ ಮಕ್ಕಳಿಗೆ ಕೆಂಪು ಬಟ್ಟೆ ಧರಿಸಿ ದಿನನಿತ್ಯ ಉಪಯೋಗಿಸುವ ಎಲ್ಲಾ ವಸ್ತುಗಳನ್ನು ಈ ಹಬ್ಬದಲ್ಲಿ ಪ್ರದರ್ಶನಕ್ಕಿಟ್ಟಿದ್ದು ವಿಶೇಷ. ಬಣ್ಣದ ಹಬ್ಬದಲ್ಲಿ ಹಳದಿ ಬಣ್ಣದ ವಿಶೇಷತೆಯಾದ ಸ್ನೇಹಪರತೆ ಹಾಗೂ ಕೆಂಪು ಬಣ್ಣದ ವಿಶೇಷತೆಯಾದ ಪ್ರೀತಿ, ಪ್ರೇಮದ ಬಗ್ಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಷಕರು ಸಹ ತಮ್ಮ ಮಕ್ಕಳೊಂದಿಗೆ ಹಳದಿ ಹಾಗೂ ಕೆಂಪುವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಸ್ಥೆ ಅಧ್ಯಕ್ಷ ರಾಮಕೃಷ್ಣ ಕೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕಿ ಪ್ರೇಮಲತಾ, ಶಿ.ಮ. ಮಂಜುನಾಥ್, ಅಮರಾವತಿ, ಉಪನ್ಯಾಸಕ ನಾಗಾರ್ಜುನ ರೆಡ್ಡಿ, ಕೆ.ಪಿ ಭಾಗವಹಿಸಿದ್ದರು.

ಬೋಧನೆಯಲ್ಲಿ ಗುಣಮಟ್ಟದ ಶಿಕ್ಷಣ
ಕೋಲಾರ:
ಮಕ್ಕಳ ಕಲಿಕೆಯಗುಣಮಟ್ಟ ಆ ಶಾಲೆಯ ಪರಿಸರವನ್ನು ಅವಲಂಬಿಸಿರುತ್ತದೆ. ಶಿಕ್ಷಕರು ಬೋಧನೆಯಲ್ಲಿ ಪ್ರಬುದ್ಧತೆ ಹೊಂದಿದಾಗ ಮಾತ್ರ ಗುಣಮಟ್ಟ ಶಿಕ್ಷಣ ನೀಡಲು ಸಾಧ್ಯವೆಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್. ಶ್ರೀನಿವಾಸ ತಿಳಿಸಿದರು. ಅವರು ಇತ್ತೀಚೆಗೆ ಬಂಗಾರಪೇಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತುಮಟಗೆರೆ ಶಾಲೆಯಲ್ಲಿ ದಾನಿಗಳಿಂದ ಸಂಗ್ರಹಿಸಿದ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿ, ಶಾಲೆಯಲ್ಲಿ ಉತ್ತಮ ಪರಿಸರ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಆಟದ ಮೈದಾನ, ಗ್ರಂಥಾಲಯ, ಅಗತ್ಯ ಶಿಕ್ಷಕರು ಹಾಗೂ ಕೊಠಡಿಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯ ಗುಣಮಟ್ಟ ಎತ್ತರದಲ್ಲಿದೆ ಎಂದರು. ಎಲ್ಲಿ ಬೋಧನಾ ವ್ಯವಸ್ಥೆ ಉತ್ತಮವಾಗಿರುತ್ತದೋ ಅಲ್ಲಿ ಶಿಕ್ಷಣ ಇಲಾಖೆಯು ಆಯೋಜಿಸಿರುವ ಶೈಕ್ಷಣಿಕ ಕಾರ್ಯಕ್ರಮಗಳು ಅನುಷ್ಠಾನವಾಗುವಲ್ಲಿ ಯಶಸ್ವಿಯನ್ನು ಕಾಣಬಹುದಾಗಿದೆ. ಇಂತಹ ಪೂರಕ ವಾತಾವರಣದಲ್ಲಿ ಶಿಕ್ಷಕರು ಸಮುದಾಯದ ಸಹಭಾಗಿತ್ವ ಮೂಲಕ ಶಾಲಾಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕೆಂದರು. ಕೋರಗಂಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್. ನಾರಾಯಣಸ್ವಾಮಿ ಮಾತನಾಡುತ್ತಾ, ಇಲಾಖೆ ನಾವು -ನೀವು ಕಾರ್ಯಕ್ರಮದ ಅಡಿಯಲ್ಲಿ ಸಮುದಾಯ, ಸಂಘ ಸಂಸ್ಥೆಗಳನ್ನು ಒಳಗೊಂಡಂತೆ ಅವರ ನೆರವು ಪಡೆಯುವುದರ ಮುಖಾಂತರ ನಮ್ಮ ಶಾಲೆಗಳನ್ನು ಇನ್ನೂ ಅಭಿವೃದ್ಧಿಯತ್ತಕೊಂಡೊಯ್ಯಬಹುದೆಂದು ಹೇಳಿದರು. ಕಾರ್ಯಕ್ರಮದಲ್ಲಿ ಕೋಲಾರ ಚಲಪತಿ, ಮುಖ್ಯ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಇದ್ದರು.

'ಶಾಶ್ವತ ನೀರಾವರಿ ಜಾರಿಯಾಗಲಿ'
ಮಾಲೂರು: 
ಬಯಲುಸೀಮೆ ರೈತರಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಮೂಲಕ ಪೊಲೀಸರ ಗುಂಡಿಗೆ ಬಲಿಯಾದ ಹುತಾತ್ಮ ರೈತರಿಗೆ ಗೌರವ ಸಲ್ಲಿಸಬೇಕೆಂದು ಜಿಲ್ಲಾ ರೈತ ಸಂಘದ ಮುಖಂಡ ಎ.ಅಶ್ವತ್ಥ್‌ರೆಡ್ಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಾಲೂಕಿನ ಗುಡ್ನಹಳ್ಳಿ ಗ್ರಾಮದ ಪ್ರಗತಿಪರ ರೈತ ವೆಂಕಟೇಶಪ್ಪ ಅವರ ಸಾವಯವ ರಾಗಿ ಕೃಷಿ ತೋಟದಲ್ಲಿ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  1980ರಲ್ಲಿ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಮಲಪ್ರಭ ನದಿ ನೀರಿನ ನ್ಯಾಯಕ್ಕಾಗಿ ನಡೆದ ಹೋರಾಟದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಈರಪ್ಪ, ಬಸಪ್ಪ ಕಾಲಕ್ಕೊಪ್ಪ ಹಾಗೂ ಬಸಪ್ಪ ಶಿವಪ್ಪ ಲಕ್ಕುಂಡಿ ಅವರ ನೆನಪಿನಲ್ಲಿ ರಾಜ್ಯದ ರೈತರು ಪ್ರತಿವರ್ಷ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ, ಹುತಾತ್ಮ ರೈತರಿಗೆ ಗೌರವ ಅರ್ಪಿಸುವಂತಹ ಕಾರ್ಯ ರಾಜ್ಯ ಸರ್ಕಾರಗಳು ಮಾಡದಿರುವುದು ಖೇದಕರ ಎಂದರು.

ನೌಕರರ ಚುನಾವಣೆ:25 ಮಂದಿಅವಿರೋಧ ಆಯ್ಕೆ
ಗುಡಿಬಂಡೆ:
ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆಗೆ ನಡೆದ ಚುನಾವಣೆಯಲ್ಲಿ 25 ಜನ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಳಿದ ಇಬ್ಬರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗಂಗರೆಡ್ಡಿ ತಿಳಿದ್ದಾರೆ. ಭೂ ಮಾಪನ ಇಲಾಖೆಯಿಂದ ನಂದಾರೆಡ್ಡಿ, ಉಪನೊಂದಣಿ ಇಲಾಖೆಯಿಂದ ಮುನಿರಾಜು, ಪಂ.ರಾ ಇಲಾಖೆಯಿಂದ ಕೆ.ಜ್ಯೋತಿಪ್ರಕಾಶ್, ತಾ.ಪಂನಿಂದ ಮದ್ದರೆಡ್ಡಿ, ಪ್ರೌಢಶಿಕ್ಷಣ ಇಲಾಖೆಯಿಂದ ಜಿ.ಆರ್.ಮಂಜುನಾಥ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಲಕ್ಷ್ಮೀಪತಿರೆಡ್ಡಿ ಸಿ.ವಿ, ತೋಟಗಾರಿಕೆ ಇಲಾಖೆಯಿಂದ ಡಿ. ದೇವಪ್ರಸಾದ್, ಶಿಶು ಇಲಾಖೆಯಿಂದ ಸರೋಜಮ್ಮ, ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಅಶೋಕ, ಆಹಾರ ಇಲಾಖೆಯಿಂದ ದೇವರಾಜ್, ಪಪೂ ಶಿಕ್ಷಣ ಇಲಾಖೆಯಿಂದ ಶೇಷಕುಮಾರ್, ನ್ಯಾಯಾಂಗ ಇಲಾಖೆಯಿಂದ ಕೆ.ಎಸ್.ಪಾರಿಜಾತ, ಉಪಖಜಾನೆಯಿಂದ ನರಸಿಂಹರೆಡ್ಡಿ, ಜಲಾನಯನ ಇಲಾಕೆಯಿಂದ ರಾಮಚಂದ್ರಪ್ಪ, ಆರೋಗ್ಯ ಇಲಾಕೆಯಿಂದ ಎಸ್.ಪುಷ್ಪರಾಜ್, ಇ. ಮಂಜುನಾತ್, ನಿರ್ಮಲಾ ದೇವಿ, ಆದಿಲಕ್ಷ್ಮಮ್ಮ, ಅರಣ್ಯ ಇಲಾಖೆಯಿಂದೆಸ್.ಮಂಜುನಾಥ್, ಕೃಷಿ ಇಲಾಖೆಯಿಂದ ಶಂಕರಯ್ಯ, ರೇಷ್ಮೆ ಇಲಾಖೆಯಿಂದ ಮ.ಗ. ಹೆಗಡೆ, ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಕೆ.ವಿ. ನಾರಾಯಣಸ್ವಾಮಿ, ಮುನಿಕೃಷ್ಣ, ಎ. ಕೃಷ್ಣಪ್ಪ, ಪಶು ವೈದ್ಯ ಇಲಾಕೆಯಿಂದ ಲಕ್ಷ್ಮೀನಾರಾಯಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಕಂದಾಯ ಇಲಾಖೆಯಿಂದ ಸಿ.ಎ. ಚಂದ್ರಮೌಳಿ, ಜಿ.ಟಿ.ಶ್ರೀನಿವಾಸ್ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆನಾಳೆ ರಕ್ತದಾನ ಶಿಬಿರ
ಚಿಕ್ಕಬಳ್ಳಾಪುರ: ಶ್ರೀ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಯ 17 ನೇ ದತ್ತಿ ದಿನಾಚರಣೆ ಹಾಗೂ ಶ್ರೀ ಸಿವಿವಿ ಜಯಂತಿಯ ಪ್ರಯುಕ್ತ ಜು.24 ರಂದು ನಗರದ ಹೊರ ವಲಯದಲ್ಲಿರುವ (ಸಿವಿವಿ ಕ್ಯಾಂಪಸ್‌ನಲ್ಲಿನ) ಶ್ರೀ ಕೆ.ವಿ. ಇಂಗ್ಲಿಷ್ ಶಾಲೆ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಶ್ರೀ ಕೆ.ವಿ. ಶಿಕ್ಷಣ ದತ್ತಿಯ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ತಿಳಿಸಿದ್ದಾರೆ.

ಮುಳಬಾಗಲಲ್ಲಿ ಎಸ್ಬಿಎಂ ಕೃಷಿ ಮೇಳ
ಮುಳಬಾಗಲು:
ಎಸ್ಬಿಎಂ ಬ್ಯಾಂಕ್‌ನಲ್ಲಿ ಹಣಕಾಸು ಸಂಸ್ಧೆಗಳು ಹಾಗೂ ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೊರತು ಪಡಿಸಿ ರೈತರಿಗೆ ಅತಿ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ ನೀಡುತ್ತಿದ್ದು ಇದರ ಉಪಯೋಗ ಪಡೆದು ಕೊಳ್ಳಲು ಕೋಲಾರ ವಿಭಾಗ ಎಸ್ಬಿಎಂ ಅಸಿಸ್ಟೆಂಟ್ ಮ್ಯಾನೇಜರ್ ವಾಸು  ಕರೆ ನೀಡಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ವತಿಯಿಂದ  ಸೋಮವಾರ ನಡೆದ ಕೃಷಿ ಮೇಳವನ್ನು  ಉದ್ಘಾಟಿಸಿ ಮಾತನಾಡಿದ ಅವರು ಬ್ಯಾಂಕ್‌ಗಳಲ್ಲಿ ಸಿಗುವ ಹಲವಾರು ಸೌಲಭ್ಯಗಳು ಗ್ರಾಹಕರಿಗೆ ಸಿಗುತ್ತಿಲ್ಲವೆಂದು ಕಳವಳ ವ್ಯಕ್ತಪಡಿಸಿದರು. ಬ್ಯಾಂಕ್ ವತಿಯಿಂದ ಸಿಗುವ ಎಲ್ಲಾ ಸೌಲಭ್ಯಗಳ ಕುರಿತು  ಬ್ಯಾಂಕ್‌ಗಳು ಪಾರದರ್ಶಕತೆಯಿಂದ ವ್ಯವಹರಿಸಬೇಕು. ಯಾವುದೇ ನೂತನ ಯೋಜನೆಗಳಿಗೆ ಬ್ಯಾಂಕ ವತಿಯಿಂದ ಹೆಚ್ಚಿನ ಪ್ರಚಾರ ಸಿಗಬೇಕು  ಎಂದರು. ಬ್ಯಾಂಕ್‌ಮಖ್ಯಾಧಿಕಾರಿ ಆನಂದ್ ಸೇಲ್ವಮ್ ಮಾತನಾಡಿ ರೈತಾಪಿಗಳು ಕೃಷಿ ಸಾಲ ಪಡೆಯಲು ಹೆಚ್ಚಿನ ಅಸಕ್ತಿ ತೋರಿಸುತ್ತಿಲ್ಲ ಬ್ಯಾಂಕ್ ಕೃಷಿ ಮತ್ತು  ಶಿಕ್ಷಣ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಅದರ ಸದುಪಯೋಗಪಡೆದುಕೊಳ್ಳಲು ಕರೆ ನೀಡಿದರು.  ಹಲವಾರು ವರ್ಷಗಳಿಂದ ಬ್ಯಾಂಕ್‌ನಿಂದ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದ ಉತ್ತಮ ಗ್ರಾಹಕರನ್ನು ಸನ್ಮಾನಿಸಯಿತು, ಗ್ರಾಹಕರ ಪರವಾಗಿ ಬಲ್ಲ ರಾಮಕೃಷ್ಣಪ್ಪ, ನಾರಾಯಣರೆಡ್ಡಿ, ಶಂಕರಸಿಂಗ್.ಅಮರನಾರಾಯಣ್ ಮಾತನಾಡಿದರು. ಮುಳಬಾಗಲು ಶಾಖೆಯ ವ್ಯವಸ್ಥಾಪಕ ಟೆ.ಎಂ. ರವಿ, ಯಶಸ್ವಿನಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲ ಇಲಿಯಾಜ್, ಪ್ರಬೋಧ ಭಾಗವಹಿಸಿದ್ದರು.

ಪತ್ರಕರ್ತರಿಗೆ ಕೂಟ
ಚಿಕ್ಕಬಳ್ಳಾಪುರ:
ಪ್ರತಿ ವರ್ಷದಂತೆ ಈ ವರ್ಷವೂ ಜು.30 ರಂದು ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಗಳ ದತ್ತಿ ದಿನಾಚರಣೆ ಮತ್ತು ಮಾಜಿ ಶಾಸಕ, ಶಿಕ್ಷಣ ದತ್ತಿಯ ಸಂಸ್ಥಾಪಕ ಅಧ್ಯಕ್ಷ ದಿ. ಸಿ. ವಿ. ವೆಂಕಟರಾಯಪ್ಪನವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪ್ರಯುಕ್ತ ಜು.23 ರಂದು ಬೆಳಿಗ್ಗೆ 10.30ಕ್ಕೆ ಶ್ರೀ ಕೆ. ವಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಪತ್ರಕರ್ತರಿಗಾಗಿ ಕೀಡಾಕೂಟವನ್ನು ಕೈಗೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement