ಸಮಸ್ಯೆ ಧೈರ್ಯದಿಂದ ಎದುರಿಸಿ: ರಮೇಶ್
ಕೋಲಾರ: ವಿದ್ಯಾರ್ಥಿನಿಯರು ಏನೇ ಸಮಸ್ಯೆ ಎದುರಾದರು ದೃತಿಗೆಡದೆ ಧೈರ್ಯದಿಂದ ಸಮಸ್ಯೆ ಎದುರಿಸಲು ಬೇಕಾದ ಅತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂದು ಕೋಲಾರ ನಗರದ ಪೊಲೀಸ್ ಸರ್ಕಲ್ ಇನ್ಸೆಪೆಕ್ಟರ್ ರಮೇಶ್ ಕರೆ ನೀಡಿದರು.
ಅವರು ಸೋಮವಾರ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವ್ಯಕ್ತಿ ವಿಕಸನಕ್ಕೆ ಸಂಬಂಧಿಸಿದಂತೆ ಉಪನ್ಯಾಸ ನೀಡಿ, ಸಂಕಟ ಬಂದಾಗ ಅದನ್ನು ಸಮರ್ಥವಾಗಿ ಎದುರಿಸುವ ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳಬೇಕು, ಕೇವಲ ಪಠ್ಯದ ಕಡೆ ಆಸಕ್ತಿ ತೋರುವುದರಿಂದ ಸಮಾಜದಲ್ಲಿ ಧೈರ್ಯದಿಂದ ಬದುಕುವುದಕ್ಕೆ ಸಾಧ್ಯವಿಲ್ಲ, ಓದಿನ ಜತೆಗೆ ಪಠ್ಯೇತರ ಚಟುವಟಿಕೆ ಮೂಲಕ ವ್ಯಕ್ತಿತ್ವ ವಿಕಸನದತ್ತ ವೃದ್ಧಿಗೆ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.
ಹೆಣ್ಣು ಮಕ್ಕಳು ದಿನನಿತ್ಯ ಒಂದಲ್ಲ ಒಂದು ಸಮಸ್ಯೆಗಳಿಗೆ ಒಳಗಾಗುತ್ತಿದ್ದು ತಮಗೆ ಏನೇ ಸಮಸ್ಯೆ ಬಂದರೂ ಅದನ್ನು ಪೊಲೀಸರಿಗೆ ಇಲ್ಲವೇ ಪೋಷಕರಿಗೆ ತಿಳಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದರು.
ಮೊದಲು ನಿಮ್ಮಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಪ್ಪುಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಿ ಹೇಳಿದ ಅವರು ನಿಮ್ಮಿಂದ ಉತ್ತಮ ವ್ಯಕ್ತಿತ್ವ, ಸಮಾಜ ಹಾಗೂ ರಾಷ್ಟ್ರ ನಿರ್ಮಾಣವಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ನಂದವಾಡಗಿ, ಪ್ರೊ. ಕೇಶವರೆಡ್ಡಿ, ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಿ. ಸುರೇಶ್ಗೌಡ, ವಿದ್ಯಾರ್ಥಿ ಮುಖಂಡರಾದ ಶ್ರೀವಿದ್ಯಾ, ಎಸ್. ಪ್ರತಿಭ, ರೇಣುಕಾ, ಗೀತ ಹಾಗೂ ಆಮನಿ ಮತ್ತಿತರರು ಇದ್ದರು.