'ಅಮೂಲ್ಯ ಜೀವಗಳನ್ನು ಉಳಿಸಲು ರಕ್ತದಾನ ಮಾಡಿ'
ಚಿಕ್ಕಬಳ್ಳಾಪುರ: ಅಮೂಲ್ಯವಾದ ಜೀವಗಳನ್ನು ಉಳಿಸಲು ಪ್ರತಿಯೊಬ್ಬರು ರಕ್ತದಾನ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಸತ್ಯಭಾಮ ಕರೆ ನೀಡಿದರು.
ಅವರು ನಗರದ ಹೊರವಲಯದ ಸಿವಿವಿ ಕ್ಯಾಂಪಸ್‌ನ ಕೆ.ವಿ. ಆಂಗ್ಲಶಾಲೆಯಲ್ಲಿ ಕೆ ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ವತಿಯಿಂದ 17ನೇ ದತ್ತಿ ದಿನಾಚರಣೆ ಹಾಗೂ ಸಿವಿವಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಹಾದಾನ. ಇದನ್ನರಿತುಕೊಂಡು ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ಈ ಮೂಲಕ ಅಮೂಲ್ಯವಾದ ಪ್ರಾಣವನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಾಗ ದಾನಿಗಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕು. ಅಲ್ಲದೇ ಇತರರಿಗೂ ರಕ್ತದಾನ ಮಾಡಲು ಪ್ರೋತ್ಸಾಹಿಸಬೇಕೆಂದರು.
ಕೆ.ವಿ. ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಮಾತನಾಡಿ, ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಸಹಕರಿಸಬೇಕು. ಆಗ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಕ್ಕೆ ನಿಜವಾದ ಸಾರ್ಥಕತೆ ಬರುತ್ತದೆ ಎಂದರು. ರಕ್ತದಾನದಿಂದ ಅಮೂಲ್ಯವಾದ ಜೀವಗಳನ್ನು ಉಳಿಸಬಹುದಲ್ಲದೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಪ್ರತಿ ನಾಲ್ಕೈದು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಉತ್ತಮ ಎಂದರು.
ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಆಚಾರ್ ಮತ್ತು ಡಾ.ಕಾರ್ತಿಕ್, ಕೆ ವಿ ಮತ್ತು ಪಂಚಗಿರಿ ದತ್ತಿಗಳ ಸದಸ್ಯರಾದ ಲೀಲಾ ದೇವರಾಜ್, ಬಿ ಮುನಿಯಪ್ಪ, ಎ ಕೊಂಡಪ್ಪ, ಕೆ.ವಿ. ಆಂಗ್ಲಶಾಲೆಯ ಪ್ರಾಂಶುಪಾಲ ತ್ಯಾಗರಾಜ್, ಕೆ. ವಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್. ವೆಂಕಟೇಶ, ಕೆ ವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಅರ್. ನಾಗಭೂಷಣ್, ಕೆ ವಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಜಿ ನರಸಿಂಹಯ್ಯ ಭಾಗವಹಿಸಿದ್ದರು.
ರಕ್ತದಾನ ಶಿಬಿರದ ನಿರ್ವಹಣೆಯನ್ನು ಕೆ ವಿ ಆಂಗ್ಲಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಸಿಬ್ಬಂದಿ ಕೈಗೊಂಡರು. ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿ ಕೇಂದ್ರಕ್ಕೆ ಚಿಂತಾಮಣಿಯ ಪ್ರಗತಿ ವಿದ್ಯಾಸಂಸ್ಥೆಯವರು 220 ಯೂನಿಟ್ ರಕ್ತದಾನ ಮಾಡಿದ್ದು ಈ ವರೆಗಿನ ಜಿಲ್ಲೆಯಲ್ಲಿ ಹೆಚ್ಚಿನ ದಾಖಲೆಯಾಗಿತ್ತು. ಆ ದಾಖಲೆಯನ್ನು ಮುರಿದು ಈ ಸಂಸ್ಥೆಯವರು ಸುಮಾರು 265 ಯುನಿಟ್‌ಗಳಿಗೂ ಹೆಚ್ಚು ರಕ್ತದಾನ ಮಾಡಿ ಪ್ರಶಂಸೆಗೆ ಪಾತ್ರರಾದರು.