ಅಸಮರ್ಪಕ ನೀರು ಪೂರೈಕೆ: ಪುರಸಭೆ ವಿರುದ್ಧ ಪ್ರತಿಭಟನೆ
ಕ.ಪ್ರ.ವಾರ್ತೆ ಮಾಲೂರು ಜು. 24
ಮೂರು ತಿಂಗಳಿಂದಲೂ ಕುಡಿಯುವ ನೀರಿಲ್ಲದಿದ್ದರೂ ಸಮಸ್ಯೆ ತೀರಿಸಲು ನಿರ್ಲಕ್ಷ ತೋರುತ್ತಿರುವ ಇಲ್ಲಿನ ಪುರಸಭೆಯ ಕಾರ್ಯವೈಖರಿ ಖಂಡಿಸಿ ಪಟ್ಟಣದ 4ನೇ ವಾರ್ಡ್ನ ಅಂಬೇಡ್ಕರ್ ಕಾಲೋನಿ ಮಹಿಳೆಯರು ಖಾಲಿ ಕೊಡದೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.
ಪ್ರತಿಭಟನೆ ನೇತೃತ್ವ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪಾಪಣ್ಣ ಅವರು, ಕಳೆದೆ 3 ತಿಂಗಳಿಂದ ಕೆಟ್ಟಿರುವ ಕೊಳವೆಬಾವಿಯಿಂದ ಬಡಾವಣೆಯಲ್ಲಿ ನೀರಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸ್ಥಳೀಯ ಪುರಸಭೆ ಸದಸ್ಯೆಯಾಗಲಿ, ಪುರಸಭೆ ಅಧಿಕಾರಿಗಳು ಆಗಲಿ ಸ್ಪಂದಿಸುತ್ತಿಲ್ಲ. ದಲಿತರೇ ಇರುವ ಈ ಕಾಲೋನಿಯಲ್ಲಿ ಕುಡಿಯುವ ನೀರಿನ ಬಗೆ ಪುರಸಭೆ ನಿರ್ಲಕ್ಷ ಸಲ್ಲ ಎಂದರು.
ಪುರಸಭೆ ಹಿರಿಯ ಸದಸ್ಯ ಸಿ.ಪಿ.ನಾಗರಾಜ್ ಮಾತನಾಡಿ ಕಾಲೋನಿಯಲ್ಲಿ ಕೆಟ್ಟಿರುವ ಕೊಳವೆಬಾವಿ ರಿಪೇರಿ ಮಾಡಿಸಲು ಪುರಸಭೆಯಿಂದ ವಿಳಂಬವಾದ ಹಿನ್ನೆಲೆಯಲ್ಲಿ 4ನೇ ವಾರ್ಡ್ ಸದಸ್ಯೆ ಮೀನಾ ರವರು ತಮ್ಮ 70000 ಗಳನ್ನು ಸ್ವಂತ ಹಣ ಖರ್ಚು ಮಾಡಿ ರೀಬೋರಿಂಗ್ ಮಾಡಿಸಿದ್ದಾರೆ. 2.4 ಇಂಚು ನೀರು ಸಿಕ್ಕಿದೆ.ಪುರಸಭೆ ಪಂಪು ಮೋಟಾರ್ ನೀಡದಿದ್ದರೆ ಸ್ವಂತ ಹಣದಲ್ಲಿ ಪಂಪು ಮೋಟಾರ್ ಹಾಕಿಸಲು ಸಿದ್ಧವಿದ್ದು, ಇನ್ನೊಂದು ದಿನದಲ್ಲಿ ಬಡಾವಣೆಗೆ ನೀರು ವಿತರಣೆ ಮಾಡಲಿದ್ದಾರೆ ಎಂದರು. ಮುಖ್ಯಾಧಿಕಾರಿ ಗೈರು ಹಾಜರಿಯಲ್ಲಿ ಸ್ಥಳದಲ್ಲಿದ್ದ ಅಭಿಯಂತರ ವಿಶ್ವನಾಥ್ ಮಾತನಾಡಿ, ಪುರಸಭೆ ವತಿಯಿಂದ ಈಗಾಗಲೇ ಪಂಪು- ಮೋಟಾರ್ ನೀಡುತ್ತಿದ್ದು, ಸಂಜೆಯೊಳಗೆ ನೀರು ವಿತರಣೆಗೆ ಕೊಳವೆಬಾವಿ ಸಿದ್ಧವಾಗಲಿದೆ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಕಾರರು ಪ್ರತಿಭಟನೆ ಕೈ ಬಿಟ್ಟರು. ಅಂಬೇಡ್ಕರ್ ಕಾಲೋನಿಯ ಜಯಮ್ಮ, ಕನಕಮ್ಮ, ಶೋಭಾ, ಮಾಲಾ ಪ್ರತಿಭಟನೆ ನೇತೃತ್ವ ವಹಿಸಿದ್ದರು.