ಐಟಿ ದಾಳಿ: ಒಕ್ಕಲಿಗರ ಸಂಘದ ಪ್ರತಿಭಟನೆ
ಮಾಲೂರು: ಆದಿಚುಂಚನಗಿರಿಯ ಬೆಂಗಳೂರು ಶಾಖಾಮಠದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಖಂಡಿಸಿ ಸ್ಥಳೀಯ ಒಕ್ಕಲಿಗರ ಸಂಘವು ಪಟ್ಟಣದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು.
ಇಲ್ಲಿನ ರೇಲ್ವೆ ನಿಲ್ದಾಣ ಬಳಿಯ ಬಿಜಿಎಸ್ ವಿದ್ಯಾ ಸಂಸ್ಥೆಯಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ಪ್ರತಿಭಟನಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸ್ ನಿಲ್ದಾಣ ಬಳಿಯ ಮಾರಿಕಾಂಬ ಮಹಾದ್ವಾರದ ವೃತ್ತದ ಬಳಿ ರಸ್ತೆ ತಡೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಬಿಜಿಎಸ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಪಿ.ರಾಮಕೃಷ್ಣಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕುತಂತ್ರದ ಭಾಗವಾಗಿ ಈ ದಾಳಿ ನಡೆದಿದೆ. ಇದು ಒಂದು ಮಠದ ಮೇಲೆ ನಡೆದ ದಾಳಿ ಅಲ್ಲ. ಒಂದು ಸಮುದಾಯದ ಮೇಲೆ ನಡೆದಿರುವ ಹಲ್ಲೆ. ಒಂದು ಶಿಕ್ಷಣ ವ್ಯವಸ್ಥೆ ಮೇಲೆ ನಡೆದಿರುವ ಹಲ್ಲೆ ಎಂದು ರಾಮಕೃಷ್ಣಪ್ಪ ಆರೋಪಿಸಿದರು.
ಈ ಬಾರಿ ಅದಿಚುಂಚನಗಿರಿ ಸಂಸ್ಥೆಗೆ ಒಂದು ವೈದ್ಯಕೀಯ ಹಾಗೂ ಎಂಜಿನಿಯರ್ ಕಾಲೇಜು ಮಂಜೂರಾಗಿದ್ದು,ಅನುಮತಿಗೆ ಬೇಕಾದ ದಾಖಲೆಗಳನ್ನು ಸಿಐಟಿಯು ಹಾಗೂ ಎಂಐಎ ಗಳಿಗೆ ನೀಡಲಾಗಿತ್ತು. ಪರಿಸ್ಥಿತಿ ಹೀಗಿರುವಾಗ ಎಂಐಎ ಹಾಗೂ ಸಿಐಟಿಯು ಆದಾಯ ತೆರೆಗೆ ಇಲಾಖೆಗೆ ದಾಳಿ ನಡೆಯುವಂತೆ ನಿರ್ದೇಶನ ನೀಡಿತ್ತಾ ಎಂಬುಂದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು. ಒಂದು ವೇಳೆ ರಾಜ್ಯ ಸರ್ಕಾರವು ಮಠದ ಶಿಕ್ಷಣ ಸಂಸ್ಥಗಳ ಮೇಲೆ ದಾಳಿ ಮುಂದುವರಿಸಿದ್ದರೆ ಸಮುದಾಯದ ಸಂಘಟನೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಎದುರಿಸಬೇಕಾಗತ್ತದೆ ಎಂದು ಎಚ್ಚರಿಸಿದರು.
ಜಿ.ಪಂ. ಮಾಜಿ ಸದಸ್ಯ ನಂಜೇಗೌಡ, ಕೃಷಿ ಸಮಾಜದ ಉಪಾಧ್ಯಕ್ಷ ಪಾಪಣ್ಣ, ಕರವೇ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿದರು.
ಪರಮೇಶ್, ಗ್ಯಾಸ್ ರಾಘವೇಂದ್ರ, ನಾರಾಯಣಸ್ವಾಮಿ, ಎಲ್.ಕೆ. ಸುರೇಶ್, ಬಿ.ಪಿ.ಭೈಯಣ್ಣ, ಡಿ.ಕೆ.ನಾರಾಯಣಸ್ವಾಮಿ, ಬಿ.ನಾರಾಯಣಸ್ವಾಮಿ, ಚಿಚ್ಚಗುಂಟ್ರಹಳ್ಳಿ ವೆಂಕಟೇಶ್, ಬಚ್ಚೇಗೌಡ, ಸೋಮ ಸೇರಿದಂತೆ ಒಕ್ಕಲಿಗ ಸಮುದಾಯದ ನೂರಾರು ಮುಖಂಡರು ಹಾಗೂ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.