ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ: ಪ್ರತಿಭಟನೆ

Srinivasa Murthy VN
Updated On : 24 Jul 2013, 11:54 am

ಆರೋಪಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧನಕ್ಕೆ ಒತ್ತಾಯ
ಮಾಲೂರು:  ತಾಲೂಕಿನ ಚಿಕ್ಕತಿರುಪತಿ ಪಂಚಾಯ್ತಿಯ ಕಂಪ್ಯೂಟರ್ ಆಪರೇಟರ್ ಕೆ.ಮುಂಜುನಾಥ್ ಮೇಲೆ ಹಲ್ಲೆ ಮಾಡಿದವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆಗ್ರಹಿಸಿ ತಾಲೂಕು ಅಕೌಂಟೆಂಟ್ ಕಂ ಡೆಟಾ ಎಂಟ್ರಿ ಆಪರೇಟರ್ಸ್ ಹಾಗೂ ಪಿಡಿಒ ಅವರು ತಾಲೂಕು ಪಂಚಾಯ್ತಿ ಮುಂಭಾಗ ಧರಣಿ ಕುಳಿತ ಘಟನೆ ಬುಧವಾರ ನಡೆದಿದೆ.
ಚಿಕ್ಕ ತಿರುಪತಿ ಪಂಚಾಯ್ತಿಗೆ ಸೇರಿದ ಅಂಚೆ ಮುಸ್ಕೂರು ಗ್ರಾಮದ ವಿ.ದೇವರಾಜ್ ಮಂಗಳವಾರ ಮಧ್ಯಾಹ್ನ ಪಂಚಾಯ್ತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣಕ ಯಂತ್ರ ನಿರ್ವಾಹಕ ಕೆ.ಮಂಜುನಾಥ್ ಮೇಲೆ ವಿನಾಕಾರಣ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ಪಂಚಾಯ್ತಿ ಕಾರ್ಯದರ್ಶಿ ಚೌಡಪ್ಪ ಗ್ರಾಮ ಪಂಚಾಯ್ತಿಗಳಲ್ಲಿ ಗಣಕಯಂತ್ರ ನಿರ್ವಾಹಕರು ಪಂಚಾಯ್ತಿ ಕೆಲಸಗಳಾದ ಪಂಚತಂತ್ರ, ಎಂ.ಜಿ.ಎನ್.ಆರ್.ಜಿ.ಎ, ವಸತಿ ಯೋಜನೆ, ಕಚೇರಿ ಕೆಲಸಗಳನ್ನು ಹಾಗೂ ಇತ್ತೀಚೆಗೆ ಪಡಿತರ ಚೀಟಿಗಳ ಪ್ರಕ್ರಿಯೆಗೂ ಸಹಕರಿಸುತ್ತಿದ್ದಾರೆ. ಆದರೆ, ಈ ರೀತಿಯ ಹಲ್ಲೆಗಳಿಂದ ಅವರಿಗೆ ಜೀವ ಭದ್ರತೆ ಇಲ್ಲದಂತಾಗಿದೆ ಎಂದರು.
ಬುಧವಾರ ಚಿಕ್ಕತಿರುಪತಿ ಪಂಚಾಯ್ತಿಯ ಗಣಕ ಯಂತ್ರ ನಿರ್ವಾಹಕ ಮಂಜುನಾಥ್ ಮೇಲೆ ಹಲ್ಲೆ ಮಾಡಿದ ದೇವರಾಜ್ ಅವರನ್ನು ತಕ್ಷಣ ಬಂಧಿಸಿ ನಮ್ಮಲ್ಲಿ ಕಾಡುತ್ತಿರುವ ಅಭದ್ರತೆ ಹೋಗಲಾಡಿಸಬೇಕು ಎಂದು ಒತ್ತಾಯಿಸಿದರು.
ಆಹಾರ ಇಲಾಖೆಯಿಂದ ಗ್ರಾಮ ಪಂಚಾಯ್ತಿಗಳಿಗೆ ಪ್ರತಿ ವಿಷಯದಲ್ಲೂ ಹಾಗೂ ಸೂಕ್ತ ಕಾಲದಲ್ಲಿ ಸೂಕ್ತ ಮಾಹಿತಿ ಮತ್ತು ತರಬೇತಿ ನೀಡಬೇಕು ಎಂದು ಆಗ್ರಹಿಸಿದ ಚೌಡಪ್ಪ ಅವರು ಪಡಿತರ ಚೀಟಿಗಳ ಪ್ರಕ್ರಿಯೆ ಮುಂದುವರಿಸಬೇಕಾದರೆ ಆರೋಪಿಯನ್ನು ಬಂಧಿಸಲೇಬೇಕು ಎಂದು ಬೇಡಿಕೆಯನ್ನಿಟ್ಟರು.
ತಾ.ಪಂ. ಸದಸ್ಯರಾದ ಪುಟ್ಟಸ್ವಾಮಿ ಹಾಗೂ ಎಸ್.ವಿ.ಲೋಕೇಶ್ ಧರಣಿ ನಿರತರ ಬೇಡಿಕೆಗಳ ಬಗ್ಗೆ ಅಧಿಕಾರಿಗಳೊಡನೆ ಚರ್ಚಿಸಿ ನ್ಯಾಯ ದೊರಕಿಸುವುದಾಗಿ ಭರವಸೆ ನೀಡಿದರು.
ಧರಣಿಯಲ್ಲಿ ತಾಲೂಕಿನ ಎಲ್ಲ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗಣಕ ಯಂತ್ರ ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement