ಚುಚ್ಚುಮದ್ದು ಕೊರತೆ: ದಸಂಸ ಪ್ರತಿಭಟನೆ
ಚಿಕ್ಕಬಳ್ಳಾಪುರ: ನಾಯಿ ಕಚ್ಚಿದ ಔಷಧಿ ಆಸ್ಪತ್ರೆಯಲ್ಲಿದ್ದರೂ ಸಹ ಹೊರಗಡೆ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಂದ ತರುವಂತೆ ಚೀಟಿ ಬರೆದುಕೊಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ತಾಲೂಕಿನ 70 ವರ್ಷದ ವೃದ್ಧರೊಬ್ಬರಿಗೆ ಬುಧವಾರ ನಾಯಿ ಕಚ್ಚಿತ್ತು. ಇದರಿಂದ ಚುಚ್ಚುಮದ್ದನ್ನು ಪಡೆದುಕೊಳ್ಳಲು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಆದರೆ, ಆಸ್ಪತ್ರೆಯ ವೈದ್ಯರು ರೇಬಿಸ್ ಚುಚ್ಚುಮದ್ದು ಆಸ್ಪತ್ರೆಯಲಿಲ್ಲ. ಹೊರಗಡೆ ಮೆಡಿಕಲ್ ಸ್ಟೋರ್‌ನಿಂದ ತರುವಂತೆ ತಿಳಿಸಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಚುಚ್ಚುಮದ್ದು ಕೊಂಡು ತರಲು ಸಾಧ್ಯವಾಗದೇ ವಾಪಸ್ಸಾಗುತ್ತಿದ್ದ ವೃದ್ಧರ ಅಳಲು ಅರಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರ ಬಳಿಗೆ ತೆರಳಿ ವಿಚಾರಿಸಿದ್ದಾರೆ. ತಾ.ಪಂ. ಜಿ.ಪಂ. ಸಾಮಾನ್ಯ ಸಭೆಗಳಲ್ಲಿ ಹಾವು, ನಾಯಿ ಕಡಿತಕ್ಕೆ ಔಷಧಿಗಳನ್ನು ಆಸ್ಪತ್ರೆಯಲ್ಲಿ ಸಮರ್ಪಕವಾಗಿ ದಾಸ್ತಾನು ಮಾಡಿಕೊಡಲಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸುವ ಆರೋಗ್ಯ ಇಲಾಖೆ ಅಧಿಕಾರಿಗಳು, ರೋಗಿಗಳು ಆಸ್ಪತ್ರೆಗೆ ಬಂದಾಗ ಮಾತ್ರ ಚುಚ್ಚುಮದ್ದು ದಾಸ್ತಾನಿಲ್ಲ ಎಂದು ಹೇಳುವುದು ಯಾವ ರೀತಿ ನ್ಯಾಯ. ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಡ ರೋಗಿಗಳನ್ನು ಪರದಾಡಿಸುವಂತಹ ಕೇಂದ್ರವಾಗಿದೆ. ಇಲ್ಲಿ ಪ್ರತಿಯೊಂದಕ್ಕೂ ಸಮಸ್ಯೆ. ಬೇಕಂತಲೇ ಔಷಧಿ ಮತ್ತು ಚುಚ್ಚುಮದ್ದನ್ನು ಬೇರೆ ಕಡೆಯಿಂದ ತೆಗೆದುಕೊಂಡು ಬರುವಂತೆ ಚೀಟಿ ಬರೆದುಕೊಡಲಾಗುತ್ತಿದೆ ಎಂದರು.
ಸುದ್ದಿ ತಿಳಿದು ತಾಲೂಕು ಆರೋಗ್ಯಾಧಿಕಾರಿ ಮಂಜುಳಾ, ಆಸ್ಪತ್ರೆಯಲ್ಲಿ ನಾಯಿ ಕಡಿತದ ಔಷಧಿಯ ಸಮಸ್ಯೆಯಿದೆ ಎಂದು ಒಪ್ಪಿಕೊಂಡು, ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ, ಜನರನ್ನು ಸಮಾಧಾನಪಡಿಸಿದರು.