ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಲೆ ಮರೆಸಿಕೊಂಡಿದ್ದ 5 ಡಕಾಯಿತರ ಬಂಧನ

Srinivasa Murthy VN
Updated On : 24 Jul 2013, 11:56 am

24 ಪ್ರಕರಣಗಳಿಗೆ ಸಂಬಂಧಿಸಿದ 23 ಲಕ್ಷ ಮೌಲ್ಯದ ಕಳವು ಮಾಲು ವಶ
ಕ.ಪ್ರ.ವಾರ್ತೆ ಕೋಲಾರ ಜು.24
ಗ್ರಾಮಾಂತರ ಪೊಲೀಸರು ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಐದು ಮಂದಿ ಡಕಾಯಿತರನ್ನು ಬಂಧಿಸಿ, 24 ಪ್ರಕರಣಗಳಿಗೆ ಸಂಬಂಧಿಸಿದ ಸುಮಾರು 23 ಲಕ್ಷ ರು. ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಗಾರಪೇಟೆ ತಾಲೂಕಿನ ಬಲಿಗಾನಹಳ್ಳಿಯ ಗಣೇಶ, ಮರದಗಟ್ಟ ಗ್ರಾಮದ ಮುನಿಯಪ್ಪ , ಗಂಗಾಧರ ,   ಬೈರಗಾನಹಳ್ಳಿಯ ಅರುಣ್ ಮತ್ತು ಕೋಲಾರ ತಾಲೂಕಿನ ಬೆಟ್ಟಬೆಣಜೇನಹಳ್ಳಿಯ ವಾಸಿ ಹಾಲಿ ಕಾಡುಗೋಡಿಯಲ್ಲಿರುವ ಅಲೀಂ ಬೇಗ್ ಬಂಧಿತರಾಗಿದ್ದಾರೆ.
ಆರೋಪಿಗಳಿಂದ ಕೋಲಾರ ಗ್ರಾಮಾಂತರ, ವೇಮಗಲ್,  ಶ್ರೀನಿವಾಸಪುರ, ಮುಳಬಾಗಲು ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ, ಮೊಬೈಲ್ ಟವರ್‌ಗಳಲ್ಲಿ ಕಳವು ಮಾಡಿರುವ 12 ಬ್ಯಾಟರಿಗಳು, ಬಾರ್‌ಗಳಲ್ಲಿ ಕಳವು ಮಾಡಿದ ನಗದು, ಮದ್ಯದ ಬಾಟಲಿಗಳು, ವಿವಿಧ ಗ್ರಾಮಗಳಲ್ಲಿ ಕಳವು ಮಾಡಿದ ಕುರಿಗಳು ಹಾಗೂ 6 ಹಾಲಿನ ಕ್ಯಾನ್‌ಗಳು, 1ಸಿಲಿಂಡರ್, 1 ಟಿವಿ ಹಾಗೂ 12 ವಿವಿಧ ವಾಹನಗಳ ಚಕ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ನಗರದ ಕೆ.ಆರ್. ಪುರಂ, ರಾಮಮೂರ್ತಿ ನಗರ, ಮಹದೇವಪುರ, ವೈಟ್‌ಫೀಲ್ಡ್ ಇತರೆ ಕಡೆಗಳಲ್ಲಿ ಕಳವು ಮಾಡಿದ್ದ 3ಟಾಟಾ ಸುಮೋ,  1 ಟಾಟಾ ಇಂಡಿಕಾ, 5 ಹೊಸ ದ್ವಿಚಕ್ರ ವಾಹನಗಳು ಮತ್ತು 1.60 ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ರಾಮ ನಿವಾಸ್ ಸಪಟ್ ತಿಳಿಸಿದ್ದಾರೆ.
ಆರೋಪಿಗಳು ಜು.22ರಂದು ಮಹದೇವಪುದಲ್ಲಿ ಕಳವು ಮಾಡಿದ್ದ ಟಾಟಾ ಸುಮೋ ವಾಹನವನ್ನು ತಾಲೂಕಿನ ಕೋಂಡರಾಜನಹಳ್ಳಿಯ ದರ್ಗಾ ಬಳಿ ಮಾರಾಟ ಮಾಡಲು ವ್ಯವಹಾರ ಕುದುರಿಸುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ಅನುಮಾನಗೊಂಡು ಇವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ 24 ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲು ಎಎಸ್ಪಿ ಎಂ.ಐ. ಜಮೀಲ್, ಡಿವೈಎಸ್ಪಿ ಶ್ರೀಹರಿ ಬರಗೂರು, ಗ್ರಾಮಾಂತರ ವೃತ್ತ ನಿರೀಕ್ಷಕ ಎ.ಬಿ. ಸುಧಾಕರ್, ಸಬ್‌ಇನ್ಸ್‌ಪೆಕ್ಟರ್‌ಗಳಾದ ಗ್ರಾಮಾಂತರ ಠಾಣೆಯ ಕೆ.ಎಸ್. ದೇವೇಂದ್ರಪ್ಪ, ಅಪರಾಧ ವಿಭಾಗದ ಜಗದೀಶ್, ಗಲ್‌ಪೇಟೆ ಠಾಣೆಯ ರವಿಪ್ರಕಾಶ್ ನೇತೃತ್ವದ ತಂಡಗಳನ್ನು ರಚಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement