ನಾಮಪತ್ರ ಸಲ್ಲಿಕೆ
ಟೇಕಲ್: ಇಲ್ಲಿನ ಕೊಂಡಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ತೆರವಾಗಿದ್ದ ಕುಂಟನಹಳ್ಳಿ ಗ್ರಾಪಂ ಕ್ಷೇತ್ರದ ಪರಿಶಿಷ್ಟ ಜಾತಿ ಮಹಿಳಾ ಮೀಸಲಿಗೆ ಕೆ.ಅರುಣ, ಗಿರಿಜಾ, ಮಾಲ, ಕೆಂಪಮ್ಮ, ಹಾಗೂ ನಕ್ಕನಹಳ್ಳಿ ಗ್ರಾ.ಪಂ. ಕ್ಷೇತ್ರಕ್ಕೆ ಹಿಂದುಳಿದ ವರ್ಗ 'ಅ'ಗೆ ಶಿವರಾಜು, ಡಿ.ವೆಂಕಟರಮಣಪ್ಪ, ಸಾಧಿಕ್ ಪಾಷ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಬುಧವಾರ ಕೊನೆ ದಿನವಾಗಿತ್ತು. ಎರಡೂ ಕ್ಷೇತ್ರಕ್ಕೆ ಸೇರಿ 7 ಮಂದಿ ನಾಮಪತ್ರ ಸಲ್ಲಿಸಿದ್ದಾರೆ, 25ರಂದು ನಾಮಪತ್ರ ಪರಿಶೀಲನೆ, 27 ನಾಪತ್ರ ಹಿಂಪಡೆಯಲು ಕಡೇ ದಿನ ಎಂದು ಚುನಾವಣಾ ಅಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣ್ಯಂ ತಿಳಿಸಿದ್ದಾರೆ.
ವೆಂಕಟೇಶ್ಗೆ ಚಿನ್ನದ ಪದಕ: ಸನ್ಮಾನ
ಗೌರಿಬಿನೂರು: ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಪಿಇಡಿನಲ್ಲಿ ಮೊದಲನೇ ರ್ಯಾಂಕ್ ಪಡೆದಿದ್ದ, ಚಿಕ್ಕಬಳ್ಳಾಪುರದ ವೆಂಕಟಪಾತೇಪ್ಪ ದೈಹಿಕ ಶಿಕ್ಷಣ ಕಾಲೇಜಿನ ವಿದ್ಯಾರ್ಥಿ, ಗೌರಿಬಿದನೂರು ನದಿದಡದ ವೆಂಕಟೇಶ್ ಅವರನ್ನು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. ಘಟಿಕೋತ್ಸವದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ನಾಸಾದ ವಿಜ್ಞಾನಿ ಡಾ.ರಾಧಾಕೃಷ್ಣನ್ ಇತರ ಗಣ್ಯರು ಇದ್ದರು. ವೆಂಕಟೇಶ್ ಅವರನ್ನು ಕಾಲೇಜು ಆಡಳಿತ ಮಂಡಳಿ, ಸ್ನೇಹಿತರು ಅಭಿನಂಧಿಸಿದ್ದಾರೆ.
ಶಿಕ್ಷಕಿ ವಿರುದ್ಧ ಬಿಇಒಗೆ ದೂರು
ಚಿಂತಾಮಣಿ: ಖಾಸಗಿ ಶಾಲೆ ಮುಖ್ಯಶಿಕ್ಷಕಿ ಧೋರಣೆ ವಿರುದ್ಧ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಂಜನಿ ಬಡಾವಣೆ ಬಳಿಯ ಮಾಂಟೆಸ್ಸೊರಿ ಖಾಸಗಿ ಶಾಲೆಯ 1ನೇ ತರಗತಿಯ ವಿದ್ಯಾರ್ಥಿ ಆಶಾರಾಣಿ ಯೋಗಕ್ಷೇವು ವಿಚಾರಿಸಲು ಬಂದ ಪೋಷಕರಾದ ನಾಗರತ್ನ ಜೊತೆ ಶಾಲೆ ಮುಖ್ಯ ಶಿಕ್ಷಕಿ ಅನುಚಿತವಾಗಿ ವರ್ತಿಸಿದ್ದಾರೆ. ದರ್ಪದ ಮಾತುಗಳಿಂದ ಅವಮಾನಿಸಿರುವುದಾಗಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಯ್ಯ ಅವರಿಗೆ ಬುಧವಾರ ಶಾಲೆ ಮುಖ್ಯಶಿಕ್ಷಕಿ ವರ್ತನೆ ಬಗ್ಗೆ ದೂರು ನೀಡಿದ್ದಾರೆ.
ವೆಬ್ಸೈಟಿನಲ್ಲಿ ಮಾಹಿತಿ
ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ತನ್ನ ಕಾರ್ಯಚಟುವಟಿಕೆಗಳ ಮಾಹಿತಿಯನ್ನು www.jeevavedaiva.weebly.com ವೆಬ್ಸೈಟಿನಲ್ಲಿ ಇನ್ನು ಮುಂದೆ ಪಡೆಯಬಹುದಾಗಿದೆ ಎಂದು ಚುಸಾಪ ಪ್ರಧಾನ ಕಾರ್ಯದರ್ಶಿ ರಾಯಲ್ ಶಿ.ಮ. ಮಂಜುನಾಥ್ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ. 9449466788 ಇಲ್ಲಿಗೆ ಸಂಪರ್ಕಿಸಲು ಕೋರಿದ್ದಾರೆ.
ವಿಜೃಂಭಣೆಯ ಗುರುಪೂರ್ಣಿಮೆ ಕಾರ್ಯಕ್ರಮ
ಚಿಂತಾಮಣಿ: ತಾಲೂಕಿನ ಬಡಗವಾರ ಹಳ್ಳಿಯ ಶ್ರೀಮುನೇಶ್ವರಸ್ವಾಮಿ ದೇಗುಲದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು ಪೂಜಾ ಕೈಂಕರ್ಯಗಳ ಜೊತೆಗೆ ರಾತ್ರಿಯಿಡೀ ಭಜನೆ, ತತ್ವಪದ ಹಾಗೂ ಕೀರ್ತನೆಗಳನ್ನು ಕೈಗೊಂಡು ಭಕ್ತಿ ಸಮರ್ಪಿಸಿದರು.
ಈ ಸಂದರ್ಭ ದೇಗುಲದ ಧರ್ಮದರ್ಶಿಗಳಾದ ಕಾಗತಿ ವೆ.ವೆಂಕಟರತ್ನಂ ಮಾತನಾಡಿ, ಮನುಷ್ಯರಲ್ಲಿರುವ ಅಂಧಕಾರ ಜ್ಞಾನವೆಂಬ ಉಪದೇಶದಿಂದ ಹೊರದೂಡುವವನೆ ಗುರು. ಸದ್ಗುರುಗಳ ಸಾಂಗತ್ಯದಿಂದ ಮುಕ್ತಿ ಪಡೆಯಲು ಸಾಧ್ಯ. ಸಮಾಜದ ಒಳತಿಗಾಗಿ ಸನ್ಮಾರ್ಗ ತೋರಿದ ಗುರುಗಳನ್ನು ಸ್ಮರಿಸುವ ಪವಿತ್ರ ಹುಣ್ಣಿಮೆಯು ಬಹಳ ವೈಶಿಷ್ಟ್ಯತೆ ಹೊಂದಿದೆ ಎಂದು ಹೇಳಿದರು. ಗುರುಪೂರ್ಣಿಮೆ ಅಂಗವಾಗಿ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಪ್ರಕೃತಿ ದೈವ ಎನಿಸಿರುವ ಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ಮತ್ತು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡಿದರು. ದೇವಾಲಯದ ಕಾರ್ಯದರ್ಶಿ ಸುಬ್ರಮಣಿ ಕುಟುಂಬದವರಿಂದ ಭಕ್ತರಿಗೆ ಊಟದ ವ್ಯಸವ್ಥೆ ಮಾಡಲಾಗಿತ್ತು.
ಸಿಲಿಂಡರ್ ಸೋರಿಕೆ: ಮಾರುತಿಗೆ ಬೆಂಕಿ
ಹಾಸನ: ಸಿಲೆಂಡರ್ ಸೋರಿಕೆಯಿಂದ ಮಾರುತಿ ವ್ಯಾನ್ ಬೆಂಕಿಗೆ ಆಹುತಿಯಾದ ಘಟನೆ ನಗರದಲ್ಲಿ ಬುಧವಾರ ಸಂಜೆ ನಡೆದಿದೆ. ನಗರದ ಕೆ.ಆರ್. ಪುರಂ 5ನೇ ಕ್ರಾಸ್ ಬಳಿ ಮಾರುತಿ ಕಾರಿನ ಸಿಲೆಂಡರ್ಗೆ ಗ್ಯಾಸ್ ತುಂಬುವ ವೇಳೆ ಸೋರಿಕೆಯಿಂದ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಷಯ ತಿಳಿದ ಆಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರಾದರೂ, ಅಷ್ಟು ಹೊತ್ತಿಗೆ ವ್ಯಾನಿನ ಪೂರ್ಣ ಭಾಗ ಸುಟ್ಟು ಕರಕಲು ಆಗಿತ್ತು. ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಮಾಡುವಾಗ ಈ ದುರಂತ ಸಂಭವಿಸಿದೆ ಎಂದು ದೂರಲಾಗಿದೆ.
ವಿದೇಶಿ ಕಂಪನಿಗಳತ್ತ ಹರಿದಿದೆ ವಂಚನೆ ಹಣ
ಮಂಡ್ಯ: ಕೆಬ್ಬಳ್ಳಿ ಆನಂದ್ ಹಾಗೂ ಸಹಚರರು ರಾಮನಗರ ಮತ್ತು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಂಚಿಸಿ, ದೋಚಿರುವ ಕೋಟ್ಯಂತರ ಹಣದ ವಂಚನೆಯ ಜಾಲ ವಿದೇಶಗಳಲ್ಲಿರುವ ಕೆಲವು ಕಂಪನಿಗಳನ್ನೂ ಸುತ್ತಿ ಹಾಕಿಕೊಂಡಿದೆ. ಮಂಡ್ಯ ಮತ್ತು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಿಗಳಲ್ಲಿ 30 ಕೋಟಿಗೂ ಅಧಿಕವಾಗಿ ವಂಚಿಸಿರುವ ಹಣವನ್ನು ಕೆಬ್ಬಳ್ಳಿ ಆನಂದ್ ವಿದೇಶದ ವಿವಿಧ ಕಂಪನಿಗಳಲ್ಲಿ ಬಂಡಾವಳ ರೂಪದಲ್ಲಿ ತೊಡಗಿಸಿದ್ದಾನೆಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.