ಅಭಿವೃದ್ಧಿ ಕೆಲಸಕ್ಕೆ ಅಡ್ಡಿಪಡಿಸಿದರೆ ಸಹಿಸುವುದಿಲ್ಲ
ಬಾಗೇಪಲ್ಲಿ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಾಜಿ ಶಾಸಕರು ಸೇರಿದಂತೆ ಯಾರೇ ಆಗಲಿ ಪಕ್ಷಭೇದವಿಲ್ಲದೇ ಸೂಕ್ತ ಸಲಹೆ ನೀಡಲಿ ಸ್ವೀಕರಿಸುತ್ತೇನೆ. ಆದರೆ, ನಾನು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುವುದನ್ನು ಸಹಿಸುವುದಿಲ್ಲ. ಸೂಕ್ತ ದಾಖಲೆಗಳಿಲ್ಲದೇ ಇಲ್ಲಸಲ್ಲದ ಆರೋಪಗಳನ್ನು ಹಾಗೂ ಟೀಕೆ ಮಾಡಿದರೆ ಅವರ ಜಾತಕಗಳನ್ನು ಜಾಲಾಡುತ್ತೇನೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಿಪಿಐ(ಎಂ) ಮತ್ತು ಮಾಜಿ ಶಾಸಕ ಎನ್.ಸಂಪಂಗಿ ಅವರ ವಿರುದ್ಧ ಗುಡುಗಿದರು.
ಪಟ್ಟಣದಲ್ಲಿ ನಡೆದ ಜನತಾ ದರ್ಶನದಲ್ಲಿ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆಗಲೀ ಸೂಕ್ತ ದಾಖಲೆ ಇಲ್ಲದೆ ಹಾಗೂ ನಾಲಿಗೆಯ ಹಿಡಿತವಿಲ್ಲದೆ ಇನ್ನೊಬ್ಬರ ಬಗ್ಗೆ ಟೀಕೆ, ಆರೋಪ ಮಾಡಿ ಮಾತನಾಡುವುದು ಸರಿಯಲ್ಲ. ನನ್ನ 5 ವರ್ಷಗಳ ಅಧಿಕಾರದ ಅವಧಿಯಲ್ಲಿ ನಾನು ಏನಾದರೂ ತಪ್ಪು ಮಾಡಿದರೆ, ಕ್ಷೇತ್ರದ ಜನತೆಗೆ ವಂಚನೆ ಮಾಡಿ ಹಣವನ್ನು ಕಬಳಿಸಿದರೆ ಸೂಕ್ತ ದಾಖಲೆಗಳೊಂದಿಗೆ ಆರೋಪ ಮಾಡಲಿ. ಆಗ ತಲೆಬಾಗುತ್ತೇನೆ. ಆದರೆ, ವಿನಾಕಾರಣ ಆರೋಪ ಮತ್ತು ಟೀಕೆಗಳನ್ನು ಮಾಡುವ ಮೂಲಕ ನನ್ನನ್ನು ಕೆಣಿಕಿದರೆ ಅವರ ಅಧಿಕಾರದ ಅವಧಿಯಲ್ಲಿ ಯಾವ ಯಾವ ಶಾಸಕರು ಕ್ಷೇತ್ರದಲ್ಲಿ ಎಲ್ಲೇಲ್ಲಿ ಕಾಮಗಾರಿಗಳನ್ನೇ ಮಾಡದೇ ಬಿಲ್ ಮಾಡಿರುವುದು ಸೇರಿದಂತೆ ವಿವಿಧ ರೀತಿಯಲ್ಲಿ ಹಣವನ್ನು ಗುಳುಂ ಮಾಡಿರುವುದನ್ನು ದಾಖಲೆಗಳ ಸಮೇತ ಬಯಲಿಗೆ ತರುವುದಾಗಿ ಎಚ್ಚರಿಕೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ, ರೇಷನ್ ಕಾರ್ಡ್ ಸೇರಿದಂತೆ ವಿವಿಧ ರೀತಿಯಲ್ಲಿ ಸಮಸ್ಯೆ ಕ್ಷೇತ್ರದಲ್ಲಿ ತಾಂಡವಾಡುತ್ತಿದೆ. ಆದರೆ, ಜನರಿದ ಆಯ್ಕೆಯಾಗಿರುವ ಶಾಸಕರು ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದಾರೆ. ಕ್ಷೇತ್ರದ ಕಡೆ ಬರುತ್ತಿಲ್ಲ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಿಪಿಐ(ಎಂ) ಪಕ್ಷದವರು ಆರೋಪಿಸಿದ್ದಾರೆ. ನನ್ನ 2 ತಿಂಗಳ ಅವಧಿಯಲ್ಲಿ ಸರ್ಕಾರದಿಂದ ಕುಡಿಯುವ ನೀರಿಗಾಗಿ ಕೇವಲ 14 ಲಕ್ಷ ಅನುದಾನ ಬಂದಿದೆ. ನಾನು ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡುವ ಸಲುವಾಗಿ ಸ್ವಂತವಾಗ 1 ಕೋಟಿಗೂ ಅಧಿಕ ಹಣದಿಂದ 118 ಕೊಳೆವೆಬಾವಿ ಕೊರೆಸಿದ್ದೇನೆ. 2 ತಿಂಗಳ ನನ್ನ ಅಧಿಕಾರದ ಅವಧಿಯಲ್ಲಿ ಶಾಸಕನಾಗಿ ನಾನು ಇನ್ನು ಏನು ಮಾಡಬೇಕು. ಈ ಹಿಂದಿನ ಶಾಸಕರು ಅವರ ಅಧಿಕಾರದ ಅವಧಿಯಲ್ಲಿ ಎಷ್ಟು ಕೊಳವೆ ಬಾವಿಗಳನ್ನು ಕೊರಿಸಿದ್ದಾರೆ ಎಂದು ಪ್ರಶ್ನಿಸಿದರು. ಕುಡಿಯುವ ನೀರಿನ ವಿಚಾರದಲ್ಲಿ ನಾನು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ.
ಈಗ ಸದನ ನಡೆಯುತ್ತಿರುವ ಸಮಯದಲ್ಲಿ ನಾನು ಅವರ ಹಾಗೆ ಕ್ಷೇತ್ರದ ಗ್ರಾಮಗಳಿಗೆ ಬಂದು ಬಾಡೂಟ ಸವಿದು ಗಿಮ್ಮಿಕ್ ಮಾಡುವುದಿಲ್ಲ. ಆ ಸಂಸ್ಕೃತಿ ನನ್ನದಲ್ಲ. ಕೆಲವರು ಶಾಸಕರು ಕ್ಷೇತ್ರಕ್ಕೆ ಬರುತ್ತಿಲ್ಲವೆಂದು ಆರೋಪಿಸುತ್ತಾರೆ. ನಾನು ಕ್ಷೇತ್ರಕ್ಕೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಅದರೂ ನಾನು ಕ್ಷೇತ್ರಕ್ಕೆ ಬರುವುದು ಇವರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.