'ಏನು ಬಿತ್ತಬೇಕೆಂಬುದು ಮೂರೇ ದಿನದಲ್ಲಿ ಹೇಳುತ್ತೇವೆ'
ಕ.ಪ್ರ.ವಾರ್ತೆ ಮಂಡ್ಯ ಜು. 23
ಸಮೃದ್ಧ ಮಳೆಯಾಗಿ ಕೆ.ಆರ್.ಎಸ್. ಅಣೆಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಬಂದಿದೆ. ನಾಲೆಗಳಲ್ಲಿ ನೀರು ಬಿಡಲಾಗುತ್ತಿದ್ದರೂ ನಿದ್ರಾವಸ್ಥೆಯಲ್ಲಿರುವ ಕೃಷಿ ಇಲಾಖೆ ಮಾತ್ರ ಈಗ ಮೈಕೊಡವಿಕೊಂಡು ಎದ್ದಿದೆ.
ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗುವುದೇ ಜು.15ರ ನಂತರ. ಅಲ್ಲದೇ ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ವಿವಿಧೆಡೆ ಬಿದ್ದ ಮಳೆಯಿಂದ ರೈತರು ಖುಷ್ಕಿ ಬೆಳೆ ಬಿತ್ತನೆ ಮಾಡಿದ್ದಾರೆ. ಈಗ ನೀರಾವರಿ ಪ್ರದೇಶದ ರೈತರ ಕಬ್ಬು ಅಥವಾ ಬತ್ತ ಬಿತ್ತನೆ ಮಾಡಬೇಕೆ ಎಂಬುದರ ಬಗ್ಗೆ ಎರಡು- ಮೂರು ದಿನದಲ್ಲಿ ಹೇಳುವುದಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಂಗಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಕೆ.ಆರ್.ಎಸ್. ಅಣೆಕಟ್ಟೆಗೆ ನೀರು ಭರ್ತಿಯಾದರೂ ಜಿಲ್ಲೆಯ ರೈತರು ಯಾವ ಬೆಳೆ ಹಾಕಬೇಕು, ನೀರನ್ನು ಯಾವ, ಯಾವ ಸಮಯದಲ್ಲಿ ಕೊಡುತ್ತೀರಿ ಎಂಬುದರ ಬಗ್ಗೆ ಯಾವುದೇ ಪೂರ್ವ ನಿರ್ಧಾರ ಅಥವಾ ಯೋಜನೆ ಇಲ್ಲ. ಕೃಷಿ ಇಲಾಖೆ ಯಾಕೆ ಇಂತಹ ಧೋರಣೆಗಳನ್ನು ಹೊಂದಿದೆ ಎಂದು ಕೇಳಲಾದ ಪ್ರಶ್ನೆಗೆ ತತ್ತರಿಸಿ ಮಾತನಾಡಿದ ಜಂಟಿ ನಿರ್ದೇಶಕ ಸಂಗಯ್ಯ ಜಿಲ್ಲಾಧಿಕಾರಿ ಹಾಗೂ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ 3 ದಿನದೊಳಗೆ ರೈತರ ಕಬ್ಬು ಅಥವಾ ಭತ್ತ ಬಿತ್ತನೆ ಮಾಡಬೇಕು ಎಂಬ ನಿರ್ದಿಷ್ಟವಾಗಿ ಹೇಳಲಾಗುವುದು ಎಂದು ಹಾರಿಕೆ ಉತ್ತರ ನೀಡಿದರು.
ಜಿಲ್ಲೆಯ ಯಾವುದೇ ತಾಲೂಕಿನ ಕೃಷಿ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಕೃಷಿ ಪ್ರಗತಿ ಬಗ್ಗೆ ಸರಿಯಾದ ಕ್ರಮ ವಹಿಸದೇ ಹೋದರೆ ರೈತರ ಗತಿ ಏನು ಮಳೆ ಬರದೆ ಹೋದರೆ ಮುಂದಿನ ಕ್ರಮಗಳು ಹೇಗೆ ಇರಬೇಕು ಎಂದ ಚಿಂತನೆ ಮಾಡುತ್ತೀರಿ. ಅದೇ ಸಾಕಷ್ಟು ಮಳೆ ಬಂದರೆ ಕೃಷಿ ಚಟುವಟಿಕೆಗಳು ಹೇಗೆ ಇರಬೇಕು ಎಂಬ ಬಗ್ಗೆ ಪೂರ್ವಸಿದ್ಧತೆ ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗೂ ಕೂಡ ಜಂಟಿ ನಿರ್ದೇಶಕರು ಕಕ್ಕಾಬಿಕ್ಕಿಯಾಗಿ ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂಬ ಉತ್ತರ ನೀಡಿ ಸರಳವಾಗಿ ಜಾರಿಕೊಂಡರು.
175250 ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬಿತ್ತನೆ
ಮಂಡ್ಯ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1,75,250 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯಲಿದೆ. ಇದಕ್ಕೆ ಅಗತ್ಯವಿರುವ ಬಿತ್ತನೆಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಂಗಯ್ಯ ಗುರುವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಯ್ಯ, ಜಿಲ್ಲೆಯಲ್ಲಿ 39,091 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜದ ಬೇಡಿಕೆ ಇದೆ. ಇದರಲ್ಲಿ ರಾಜ್ಯ ಬೀಜ ನಿಗಮದಿಂದ 30,300 ಕ್ವಿಂಟಾಲ್ ಹಾಗೂ ರಾಷ್ಟ್ರೀಯ ಬೀಜ ನಿಗಮದಿಂದ 10,300 ಕ್ವಿಂಟಾಲ್, ಖಾಸಗಿ ಸಂಸ್ಥೆಗಳಿಂದ 5000 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಶೇಖರಣೆ ಮಾಡಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರ ವ್ಯವಸಾಯ ಸೇವಾ ಸಹಕಾರ ಸಂಘ ಒಳಗೊಂಡಂತೆ 105 ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ 25,326 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಜು. 24 ರವರೆಗೆ 16,356 ಕ್ವಿಂಟಾಲ್ ಬಿತ್ತನೆ ಬೀಜವನ್ನು 28,062 ರೈತರಿಗೆ ವಿತರಿಸಲಾಗಿದೆ. ಮುಂದಿನ ಆಗಸ್ಟ್ ತಿಂಗಳಲ್ಲಿ ಬಿತ್ತನೆ ಬೀಜವನ್ನು ವಿತರಿಸಲಾಗುವುದು ಎಂದರು.
ಯಾವ ಬಿತ್ತನೆ ಎಷ್ಟು?: ಮುಂಗಾರು ಮುಂಗಾಮಿನಲ್ಲಿ 2,05,800 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ರಾಗಿ 1492 ಹೆಕ್ಟೇರ್, ಜೋಳ- 3689 ಹೆಕ್ಟೇರ್, ಮುಸುಕಿನ ಜೋಳ 139 ಹೆಕ್ಟೇರ್, ಅಲಸಂದೆ 6793 ಹೆಕ್ಟೇರ್, ಎಳ್ಳು 8695 ಹೆಕ್ಟೇರ್, ತೊಗರಿ 1077 ಹೆಕ್ಟೇರ್, ಉದ್ದು 509 ಹೆಕ್ಟೇರ್, ಹೆಸರು 353 ಹೆಕ್ಟೇರ್, ಹರಳು 559 ಹೆಕ್ಟೇರ್, ನೆಲಗಡಲೆ 390 ಹೆಕ್ಟೇರ್, ಹುಚ್ಚೆಳ್ಳು 22 ಹೆಕ್ಟೇರ್, ಕಬ್ಬು 6690 ಹೆಕ್ಟೇರ್ ಒಟ್ಟು .30, 489 ಹೆಕ್ಟೇರ್‌ನಲ್ಲಿ (ಶೇ.14.8) ಬಿತ್ತನೆಯಾಗಿದೆ ಎಂದರು.
ರಸಗೊಬ್ಬರ ದಾಸ್ತಾನು: ಮುಂಗಾರು ಹಂಗಾಮಿಗೆ 1,36,140 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದೆ. ಜುಲೈ ಅಂತ್ಯಕ್ಕೆ 70,330 ಮೆಟ್ರಿಕ್ ಟನ್ ಬೇಡಿಕೆ ಇದೆ. 2013ರ ಮಾರ್ಚ್ ಅಂತ್ಯಕ್ಕೆ ಕಾಪು ದಾಸ್ತಾನು 34,462 ಮೆಟ್ರಿಕ್ ಟನ್ ಹಾಗೂ ಇದುವರೆಗೆ 45,076 ಮೆಟ್ರಿಕ್ ಟನ್ ಸರಬರಾಜಾಗಿದ್ದು, ಒಟ್ಟು 79,538 ಮೆಟ್ರಿಕ್ ಟನ್ ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರ ಮುಖಾಂತರ ಇದುವರೆವಿಗೆ 35395 ಮೆಟ್ರಿಕ್ ಟನ್ ವಿತರಿಸಲಾಗಿದೆ. ಈಗ 44,143 ಮೆಟ್ರಿಕ್ ಟನ್ ದಾಸ್ತಾನು ಇದೆ. ಮುಂದಿನ ತಿಂಗಳಲ್ಲಿ ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ 2ನೇ ಹಂತದ ಭೂಚೇತನ ಕಾರ್ಯಕ್ರಮ ಜಾರಿಯಲ್ಲಿದೆ. ಖುಷ್ಕಿ ಮತ್ತು ನೀರಾವರಿಯ 1,47,000 ಹೆಕ್ಟೇರ್ ಪ್ರದೇಶದಲ್ಲಿ ಕೊರತೆಯಿರುವ ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್, ಜಿಪ್ಸಂ ಹಾಗೂ ಜೈವಿಕ ಗೊಬ್ಬರಗಳನ್ನು 178 ಗುಚ್ಛ ಗ್ರಾಮಗಳ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದೆ. ರೈತ ಅನುವುಗಾರರ ಮುಖೇನ ಕೃಷಿ ಪರಿಕರಗಳನ್ನು ಪ್ಯಾಕೇಜಜ್ಮುಖೇನ ಶೇ.50 ರಷ್ಟು ರಿಯಾಯಿತಿಯಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಬ್ಬು, ಬತ್ತ ಬಿತ್ತನೆಗೆ ಆತಂಕ ಬೇಡ
ಮಂಡ್ಯ: ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರು ಯಥೇಚ್ಛವಾಗಿದೆ. ಜಿಲ್ಲೆಯ ರೈತರು ಕಬ್ಬು ಮತ್ತು ಬತ್ತ ಬಿತ್ತನೆ ಮಾಡಲು ಯಾವುದೇ ಆತಂಕವಿಲ್ಲ ಎಂದು ಜಲಸಂಪನ್ಮೂಲ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಶಂಕರೇಗೌಡ ಗುರುವಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಕೃಷಿ ಅಧಿಕಾರಿಗಳ ಜೊತೆ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡು ಮಾತನಾಡಿದ ಶಂಕರೇಗೌಡರು, ನ್ಯಾಯ ಮಂಡಳಿ ಆದೇಶದಂತೆ ಜಿಲ್ಲೆಯ 2.50 ಲಕ್ಷ ಎಕರೆ ನೀರಾವರಿ ಪ್ರದೇಶದಲ್ಲಿ ಕೇವಲ 40 ಸಾವಿರ ಎಕರೆ ಮಾತ್ರ ಕಬ್ಬು ಬೆಳೆಯಲು ಅವಕಾಶವಿದೆ. ಆದರೆ, ಜಿಲ್ಲೆಯ ರೈತರ ಇದುವರೆಗಿನ ಕೃಷಿ ಕ್ರಮವೇ ಬೇರೆ ಆಗಿದೆ. ಹೀಗಾಗಿ, ನೀರಾವರಿ ಇಲಾಖೆ ರೈತರು ಕೇಳುವ ನೀರನ್ನು ಕೊಡುತ್ತಲೇ ಬಂದಿದೆ. ಮುಂದೆಯೂ ನೀರು ಕೊಡಲಾಗುವುದು ಎಂದರು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 192 ಕೆರೆಗಳಿವೆ. ಈ ಕೆರೆಗಳಿಗೆ ಈಗ ಶೇ.10ರಷ್ಟು ಮಾತ್ರ ಹೋಗುತ್ತಿದೆ. ನಾಲೆಗಳಿಂದ ಗದ್ದೆಗಳಿಗೆ ನೀರು ಹೋಗುತ್ತದೆ ನಂತರ ಗದ್ದೆಗಳ ಮೂಲಕವೇ ನೀರು ಕೆರೆಗಳಿಗೆ ಹೋಗುವುದರಿಂದ ಕೆರೆಗಳು ತುಂಬುವುದು ಸ್ಪಷ್ಟ ನಿಧಾನವಾಗುತ್ತದೆ. ಆದರೂ ಮುಂದಿನ 10 ದಿನದೊಳಗೆ ಜಿಲ್ಲೆಯ ಪ್ರಮುಖ ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡಲಾಗುವದು ಎಂದರು.
ಕನ್ನಂಬಾಡಿ ಅಣೆಕಟ್ಟೆಯಿಂದ ಈಗ 33 ಸಾವಿರ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಹೇಮಾವತಿಯಿಂದ ಗುರುವಾರ ಬೆಳಿಗ್ಗೆ 15 ಸಾವಿರ ಕ್ಯುಸೆಕ್ ನೀರು ನದಿ ಬಿಡಲಾಗುತ್ತದೆ. ಆ ನೀರು ಸಂಜೆ ಅಥವಾ ಶುಕ್ರವಾರ ಬೆಳಿಗ್ಗೆ ಕೆ.ಆರ್.ಎಸ್. ಅಣೆಕಟ್ಟೆಗೆ ಬರುವ ಸಾಧ್ಯತೆ ಇದೆ. ಅಣೆಕಟ್ಟೆಯ ಗರಿಷ್ಠ ಮಟ್ಟವನ್ನು ಗಮನದಲ್ಲಿ ಇಟ್ಟುಕೊಂಡು ಹೆಚ್ಚುವರಿ ನೀರು ನಾಲೆ ಮತ್ತು ನದಿಗೆ ಬಿಡಲಾಗುವುದು ಎಂದರು.
ತೀರ್ಪಿನಂತೆ ನೀರು ಬಿಡುಗಡೆ: ಕಾವೇರಿ ನ್ಯಾಯ ಮಂಡಳಿ ಆದೇಶದಂತೆ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಜೂನ್‌ನಲ್ಲಿ 10 ಟಿಎಂಸಿ, ಜುಲೈನಲ್ಲಿ 34 ಟಿಎಂಸಿ ನಂತರ ಆಗಸ್‌ನಲ್ಲಿ 50 ಟಿಎಂಸಿ ನೀರು ಬಿಡಬೇಕು. ಈ ಪ್ರಕಾರವಾಗಿ ನಾವು ನೀರು ಬಿಟ್ಟಿದ್ದೇವೆ. ಹೆಚ್ಚುವರಿಯಾಗಿಯೂ ನೀರು ಅಲ್ಲಿಗೆ ಹೋಗಿದೆ. ಹೀಗಾಗಿ ಈ ವರ್ಷ ನೀರಿನ ಹಂಚಿಕೆ ವಿವಾದ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.
ಸಣ್ಣ, ಪುಟ್ಟ ನಾಲೆಗಳ ಆಧುನೀಕರಣ: ಮುಖ್ಯ ನಾಲೆಗಳನ್ನು ಹೊರತುಪಡಿಸಿ ಸಣ್ಣ, ಪುಟ್ಟ ನಾಲೆಗಳಲ್ಲಿ ಈಗ ಶೇ.15ರಷ್ಟು ಕಾಮಗಾರಿಗಳು ಮಾತ್ರ ಅಂತ್ಯ ಕೊಂಡಿವೆ. ಉಳಿದ ಶೇ.85ರಷ್ಟು ಕಾಮಗಾರಿಗಳನ್ನು ನೀರು ಆಫ್ ಆಂಡ್ ಆನ್ ಸೀಜನ್ ಮಾಡಿದ ಸಂದರ್ಭ ಆಧುನೀಕರಣಗೊಳಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಕಲ ತಯಾರಿ ಮಾಡಿಕೊಂಡಿದ್ದಾರೆ. ನೀರು ಬಿಡುವ ತರಾತುರಿಯಲ್ಲಿ ಯಾವುದೇ ಕಾಮಗಾರಿಗಳನ್ನು ಮಾಡಿಸಿಲ್ಲ. ಬರುವ ಡಿಸೆಂಬರ್ ಅಂತ್ಯದ ನಂತರ ಮುಖ್ಯ ನಾಲೆಗಳ ಸಮಗ್ರ ಆಧುನೀಕರಣಕ್ಕೆ ಈಗನಿಂದಲೇ ತಯಾರಿ ಮಾಡಲಾಗುವುದು ಎಂದು ಶಂಕರೇಗೌಡರು ತಿಳಿಸಿದರು.