ಕಾನೂನು ಅರಿವಿನಿಂದ ಅಪರಾಧ ನಿಯಂತ್ರಣ: ನ್ಯಾ.ರೇಣುಕಾ
ಕ.ಪ್ರ.ವಾರ್ತೆ ಕೋಲಾರ ಜು.25
ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳ ಬಗ್ಗೆ ಅರಿವು ಮೂಡಿಸಿ ಮುಕ್ತವಾದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯವಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ವಿ.ರೇಣುಕಾ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಾಗೃತಿ ಸೇವಾ ಸಂಸ್ಥೆ, ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಪ್ರವಾಸದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಡತನದಿಂದಾಗಿ ಆಮಿಷಗಳಿಗೆ ಒಳಗಾಗಿ ತಂದೆ, ತಾಯಿ, ಪೋಷಕರೇ ಮಕ್ಕಳನ್ನು ಮಾರುತ್ತಿರುವ ಅಘಾತಕಾರಿ ಪ್ರಕರಣಗಳು ಬಯಲಿಗೆ ಬಂದಿವೆ. ಇಂತಹ ಮಕ್ಕಳನ್ನು ಭಿಕ್ಷಾಟನೆ, ಮಾದಕ ದ್ರವ್ಯಗಳ ಮಾರಾಟಕ್ಕೆ ಬಳಸಿಕೊಳ್ಳುವ ಮೂಲಕ ಅವರ ಭವಿಷ್ಯವನ್ನು ಬಲಿ ಕೊಡುತ್ತಿದ್ದಾರೆ ಎಂದು ಎಚ್ಚರಿಸಿದರು.
ತಮ್ಮ ಸುತ್ತಮುತ್ತಲು ಇಂತಹ ಪ್ರಕರಣಗಳು, ಜೀತ ಪದ್ಧತಿ, ಶಿಕ್ಷಣದಿಂದ ವಂಚಿಸಿ ದುಡಿಮೆಗೆ ಹಾಕಿರುವುದು ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ, ಕಾನೂನು ಪ್ರಾಧಿಕಾರಕ್ಕೆ ತಿಳಿಸಿ ಎಂದು ಕರೆ ನೀಡಿದರು.
ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು, ಅಪಹರಣಗಳು, ಅಪ್ರಾಪ್ತತರ ಮೇಲಿನ ಅತ್ಯಾಚಾರ, ಕೌಟುಂಬಿಕ ಕಲಹಗಳು ನಡೆಯುತ್ತಿವೆ ಇಂತಹ ಸಮಸ್ಯೆಗಳಲ್ಲಿ ಇರುವವರಿಗೆ ಪ್ರಾಧಿಕಾರ ಉಚಿತ ಕಾನೂನಿನ ನೆರವು ನೀಡಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವಿ. ಪದ್ಮನಾಭ್, ಕಡ್ಡಾಯ ಶಿಕ್ಷಣ ನೀಡಿಕೆಯೂ ಕಾನೂನಾಗಿದೆ. ಶಿಕ್ಷಣದಿಂದ ವಂಚಿತರನ್ನು ಹುಡುಕಿ ಅವರನ್ನು ಶಾಲೆಗೆ ಕರೆತರುವ ಕೆಲಸ ನಡೆದಿದೆ. ಪಠ್ಯಕ್ರಮದಲ್ಲೂ ದೈನಂದಿನ ಕಾನೂನುಗಳ ಬಗ್ಗೆ ತಿಳಿಸುವ ಕೆಲಸ ನಡೆಯಬೇಕೆಂದ ಅವರು, ಶಿಕ್ಷಕರು ಮಕ್ಕಳಿಗೆ ಪಠ್ಯದೊಂದಿಗೆ ಕಾನೂನು ಶಿಕ್ಷಣವನ್ನು ಒದಗಿಸಬೇಕೆಂದರು.
ವಕೀಲರ ಸಂಘದ ಅಧ್ಯಕ್ಷ ಟಿ.ಎಂ. ಶಿವಣ್ಣ, ಹಿರಿಯ ವಕೀಲ ಕೆ.ವಿ.ಸುರೇಂದ್ರಕುಮಾರ್, ಬಸವರಾಜ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪಿ. ನಾರಾಯಣಸ್ವಾಮಿ, ಶಿಕ್ಷಕಿ ಆಶಾ ಅವರು ಕಾನೂನು ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಅರಾಭಿಕೊತ್ತನೂರು ಗ್ರಾಪಂ ಮಾಜಿ ಅಧ್ಯಕ್ಷ ಸೊಣ್ಣೇಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಂಜುಂಡೇಗೌಡ, ಶಿಕ್ಷಕರಾದ ಎಸ್.ರಘುನಾಥ್, ಪ್ರಕಾಶ್, ಶ್ವೇತಾ ಇದ್ದರು. ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜಜ್ಸ್ವಾಗತಿಸಿ, ಶಿಕ್ಷಕ ಸಿ.ಎಲ್.ಶ್ರೀನಿವಾಸಲು ನಿರೂಪಿಸಿ, ಲೋಕೇಶಪ್ಪ ದಟ್ಟೇರ್ ವಂದಿಸಿದರು.
ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
ಕೋಲಾರ: ಜನತೆಯಲ್ಲಿ ಕಾನೂನು ಸಾಕ್ಷರತೆ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ ಕಾನೂನು ರಥಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ರೇಣುಕಾಪ್ರಸಾದ್ ಚಾಲನೆ ನೀಡಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ಅವರು ರಥ ಚಾಲನೆಗೆ ಹಸಿರು ನಿಶಾನೆ ತೋರಿಸಿದರು.
2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಕಿಣಿಕೇರಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ವಿ. ರೇಣುಕಾ, 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂಗಣ್ಣ ಬಿ.ಪಾಟೀಲ್, ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶರಾದ ಮನಗೋಳಿ ಪ್ರೇಮಾವತಿ ಮಲ್ಲಿಕಾರ್ಜುನ್, 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಕೆಂಗಬಾಲಯ್ಯ, 2ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ಕೆ.ಜಿ. ಚಿಂತಾ, ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿಯ ಜಿ.ಕುಮಾರ್, ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಆರ್.ನಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮನಿವಾಸ್ ಸಪೆಟ್, ಟಿ.ಎಂ.ಶಿವಣ್ಣ ಇದ್ದರು.
ಕಾನೂನು ಅರಿವು-ನೆರವು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೋಲಾರ ಆಶ್ರಯದಲ್ಲಿ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಪ್ರವಾಸದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಜು.27 ಬೆಳಿಗ್ಗೆ 9.30ಕ್ಕೆ ತಾಲೂಕಿನ ನಡುಪಲ್ಲಿ ಜ್ಞಾನ ಭೋದ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಿಣಿಕೇರಿ ರವರು ನೆರವೇರಿಸಲಿದ್ದಾರೆ. ಜ್ಞಾನಬೋಧ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎ.ಸದಾನಂದ ಅಧ್ಯಕ್ಷತೆ ವಹಿಸುವರು. ಅದೇ ದಿನ ಮಧ್ಯಾಹ್ನ 2 ಗಂಟೆಗೆ ನಗರದ ಅಪೆರೆಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್ನಲ್ಲಿ, ಸಂಜೆ 6.30ಕ್ಕೆ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ.