ಚಿನ್ನಾಭರಣ ದೋಚಿದ ನಕಲಿ ಪೊಲೀಸರು!
ಚಿಂತಾಮಣಿ: ತಾವು ಪೊಲೀಸರೆಂದು ನಂಬಿಸಿದ ಇಬ್ಬರು ಯುವಕರು ವೃದ್ಧೆಯೊಬ್ಬಳಿಗೆ ಮಂಕು ಬೂದಿ ಮುಖಕ್ಕೆ ಎರಚಿ ಅವಳ ಬಳಿ ಇದ್ದ 1.70 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಹಾಡಹಗಲೇ ಆದರ್ಶ ಚಿತ್ರ ಮಂದಿರದ ಬಳಿ ಗುರುವಾರ ನಡೆದಿದೆ.
ಪಟ್ಟಣದ ವೆಂಕಟಗಿರಿಕೋಟೆ ತಿರುವಿನಲ್ಲಿರುವ ನಿವಾಸಿ ನೀಲಮ್ಮ ಚಿನ್ನಾಭರಣ ಕಳೆದುಕೊಂಡವರು. ನೀಲಮ್ಮ ಅವರು ತಮ್ಮ ಮೊಮ್ಮಗ ಭಾರ್ಗವ ಅವರ ಜತೆ ಗುರುವಾರ ಮಧ್ಯಾಹ್ನ ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ಗ್ರಾಮದ ತನ್ನ ಮಗಳಾದ ಸುಜಾತಮ್ಮ ಮನೆಗೆ ಹೊರಟಿದ್ದರು. ಆಗ ಇಬ್ಬರೂ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಈ ವೇಳೆ ಬಂದ ಯುವಕರಿಬ್ಬರು ತಾವು ಪೊಲೀಸರು. ಬರು ಹೇಳಿದ್ದಾರೆ, ಚಿನ್ನದ ಒಡವೆಗಳನ್ನು ಹೀಗೆಲ್ಲ ಸಾರ್ವಜನಿಕವಾಗಿ ಹಾಕಿಕೊಳ್ಳಬಾರದು. ಜೋಪಾನವಾಗಿ ಬ್ಯಾಗಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಆಗ ಬ್ಯಾಗಿನಲ್ಲಿ ಇಟ್ಟುಕೊಳ್ಳುವಾಗ ಈ ಯುವಕರಿಬ್ಬರು ಆಕೆಗೆ ಬೂದಿಯನ್ನು ಮುಖಕ್ಕೆ ಎರಚಿದ್ದಾರೆ. ಆಗ ಭಾರ್ಗವ ಹಾಗೂ ನೀಲಮ್ಮ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಇದನ್ನು ಕಂಡ ನೆರೆಹೊರೆಯದವರು ಕೂಡಲೇ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಆಗ ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡ ಇಬ್ಬರು ಮೈಮೇಲಿದ್ದ ಬಂಗಾರದ ಒಡವೆಯನ್ನು ನೋಡಿಕೊಂಡಾಗ ಅವು ಮಾಯವಾಗಿದ್ದವು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಶೋಧ ನಡೆಸುತ್ತಿದ್ದಾರೆ.