ಮೇಲುಕೋಟೆ ಕಳವು ಪ್ರಕರಣ; ದಾಖಲೆ ಸಲ್ಲಿಸಲು 'ಹೈ' ಸೂಚನೆ
ಬೆಂಗಳೂರು: ಮೇಲುಕೋಟೆ ಚಲುವ ನಾರಾಯಣ ಸ್ವಾಮಿ ದೇಗುಲಕ್ಕೆ ಭಕ್ತರೊಬ್ಬರು ನೀಡಿದ ವಜ್ರದ ಅಂಗಿಯಲ್ಲಿನ 800 ಗ್ರಾಂ ತೂಕದ ಚಿನ್ನ ಕಳುವಾದ ಪ್ರಕರಣ ಸಂಬಂಧ ಸಮಗ್ರ ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಕಳ್ಳತನದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ ರದ್ದತಿ, ನಿರೀಕ್ಷಣಾ ಜಾಮೀನು ಕೋರಿ ದೇಗುಲದ ಪ್ರಧಾನ ಅರ್ಚಕ ನರಸರಾಜ ಭಟ್ಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಮೋಹನದಾಸ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಮುರಳಿ ಎಂಬುವರು ನೀಡಿದ್ದ ವಜ್ರದ ಅಂಗಿಯನ್ನು 1,200 ಗ್ರಾಂ ಚಿನ್ನ, 30 ಕೆಜಿ ಬೆಳ್ಳಿ, ವಜ್ರ ಬಳಸಿ ತಯಾರಿಸಲಾಗಿರುತ್ತದೆ. ಇದರಲ್ಲಿ ಸುಮಾರು 800 ಗ್ರಾಂ ಚಿನ್ನವನ್ನು ಅರ್ಚಕರು ಕಳವು ಮಾಡಿದ್ದಾರೆ ಎಂದು ಇಲಾಖೆಗೆ ದೂರು ನೀಡಲಾಗಿದೆ. ಇಲಾಖೆ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಭಟ್ಟರ ಮೇಲಿನ ಆರೋಪ ಸತ್ಯ ಎಂದು ಸಾಬೀತಾಗಿದೆ. ಈ ಹಿನ್ನೆಲೆ ಅರ್ಚಕರ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಧನ ಭೀತಿಯಿಂದ ನರಸರಾಜ ಭಟ್ಟ ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.