ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಶ್ವತ ನೀರಾವರಿ ಯೋಜನೆಗೆ ಬೇಕಿದೆ ಗಟ್ಟಿ ಧ್ವನಿ

Srinivasa Murthy VN
Updated On : 26 Jul 2013, 12:35 pm

-ಎನ್.ಬಾಬು
ಚಿಂತಾಮಣಿ:
ಚಿಂತಾಮಣಿ ತಾಲೂಕು ವ್ಯಾಪ್ತಿಯಲ್ಲಿ ವರುಣ ಕೈಕೊಟ್ಟಿದ್ದರಿಂದ ಕೆರೆ, ಕುಂಟೆಗಳು ಖಾಲಿಯಾಗಿವೆ. ಇದರಿಂದಾಗಿ ಬರಿ ರೈತರು ಮಾತ್ರವಲ್ಲ, ದನಕರುಗಳು ಕೂಡ ಕಂಗಾಲಾಗಿವೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಶಾಶ್ವತ ನೀರಾವರಿ ಯೋಜನೆ ಶೀಘ್ರ ಜಾರಿಯಾಗಿಬೇಕಿದೆ.
ಜಿಲ್ಲೆಯ 5 ತಾಲ್ಲೂಕು ಕೇಂದ್ರಗಳ ಪೈಕಿ ಚಿಂತಾಮಣಿ ತಾಲ್ಲೂಕು ದೊಡ್ಡ ಜನಸಂಖ್ಯೆಯುಳ್ಳ ಕೇಂದ್ರವಾಗಿದ್ದು,ಬಹುತೇಕ ಕೆರೆಗಳು ಕಳೆದ 3 ವರ್ಷಗಳಿಂದ ವರುಣನ ಅವಕೃಪೆಯಿಂದ ಸಂಪೂರ್ಣವಾಗಿ ಬತ್ತಿ ಹೋಗಿವೆ.
ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಯಿಲ್ಲದೆ, ದನುಕರುಗಳಿಗೆ ಮೇವಿಲ್ಲದೆ ಕಂಗಾಲಾಗಿವೆ. ಜನರು ವರುಣನ ಕೃಪೆಗಾಗಿ ಕತ್ತೆಗಳ ಮದುವೆ, ದೇವರ ಹರಕೆ, ಪೂಜೆ ಪುನಸ್ಕಾರಗಳು ನಡೆಸುತ್ತಿದ್ದರೂ ಮಳೆ ಆಗಮಿಸಿಲ್ಲ. ಕೆರೆಗಳು ಖಾಲಿಯಾದ ಪರಿಣಾಮ 1000 ದಿಂದ 1200 ಅಡಿಯವರೆಗೆ ಕೊಳವೆ ಬಾವಿಗಳನ್ನು ಕೊರೆದರೂ ನೀರು ದೊರೆಯದೆ ರೈತ ಆಕಾಶದತ್ತ ಎದುರು ನೋಡುವಂತಾಗಿದೆ.
ಹಳ್ಳಿಗಳಲ್ಲಿ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ನೀರಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ಉದ್ಭವವಾಗಿದೆ. ಮತ್ತೊಂಗೆಡೆ ರಾತ್ರಿ ಹಗಲು ಬೆವರು ಸುರಿಸಿ ಬೆಳೆದಂತಹ ಬೆಳೆಗೆ ಸರಿಯಾದ ಬೆಲೆಯೂ ದೊರೆಯದೆ ಮಧ್ಯವರ್ತಿಗಳ ಹಾವಳಿಯಿಂದ ರೈತರು ಮೋಸಹೋಗಿ ಹಾಕಿದ ಬಂಡವಾಳಕ್ಕೆ ನ್ಯಾಯ ದೊರೆಯುತ್ತಿಲ್ಲ. ಇದರಿಂದಾಗಿ ಸಾಲದ ಶೂಲಕ್ಕೆ ಒಳಗಾಗಿರುವ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ.
ಕುಡಿಯುವ ನೀರಿನ ಅಭಾವ: ಪಟ್ಟಣದಲ್ಲಿ ಸುಮಾರು 1 ಲಕ್ಷಕ್ಕಿಂತ ಮೇಲ್ಪಟ್ಟು ಜನಸಂಖ್ಯೆಯಿದ್ದು, ಪಟ್ಟಣದ 31 ವಾರ್ಡ್‌ಗಳಲ್ಲಿ ಬಹುತೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಮಿನಿ ಕಾವೇರಿ ಎಂದೇ ಪ್ರಸಿದ್ಧಿ ಹೊಂದಿದ ಕನಂಪಲ್ಲಿ ಕೆರೆ ನೀರಿಲ್ಲದೆ ಒಣಗಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಕಳೆದ ವರ್ಷಗಳಿಂದ ಭೂಮಿ ತೇವಾಂಶ ಇಲ್ಲದ ಕಾರಣ ಅಲ್ಲಲ್ಲಿ ಕೊಳವೆ ಬಾವಿಗಳು ಹಾಕಿದರೂ ಬಹುತೇಕ ಕೊಳವೆ ಬಾವಿಗಳು ನೀರಿಲ್ಲದೆ ವಿಫಲಗೊಂಡಿವೆ.
ಇಲ್ಲಿನ ಜನರು ನೀರಿಗಾಗಿ ಪಟ್ಟಣದ ಕಿಶೋರ್ ವಿದ್ಯಾ ಸಂಸ್ಥೆ ಮುಂಭಾಗದ ನಗರಸಭೆಯ ಪಂಪ್ ಹೌಸ್‌ನಿಂದ ಹಾಗೂ ಮಾಳಪ್ಪಲ್ಲಿ ಟ್ರ್ಯಾಕ್ಟರ್‌ಗಳ ಮುಖಾಂತರ ಬಿಂದಿಗೆ 5 ಮತ್ತು ಟ್ಯಾಂಕರ್ ನೀರಿಗೆ 300 ರಿಂದ 400 ತನಕ ಕೊಟ್ಟು ಕೊಳ್ಳುವ ದುಸ್ಥಿತಿ ಉದ್ಭವವಾಗಿದೆ.
ಹಾಲಿ ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಬದಲು ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇದರ ಈ ನಡುವೆ ವಿದ್ಯುತ್ ಕಿರಿ ಕಿರಿಯಿಂದ ಸರಿಯಾದ ಸಮಯಕ್ಕೆ ನೀರು ದೊರೆಯದೆ ನಿತ್ಯ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆಯಾಗುತ್ತಿದೆಯೆಂದು ಹೇಳುತಿದ್ದಾರೆ.
ಶಾಶ್ವತ ನೀರಾವರಿ ಯೋಜನೆ ಬೇಕು: ಇಲ್ಲಿನ ಜನರು ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಹಲವು ಹೋರಾಟ ಮಾಡಿದರೂ ಫಲ ದೊರೆತಿಲ್ಲ. ಕೋಲಾರ, ಚಿಕ್ಕಬಳ್ಳಾಪುರ ನೀರಿನ ಹೋರಾಟಕ್ಕೆ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ವಿಧಾನಸಭೆ ಸದನದಲ್ಲಿ ಗಟ್ಟಿಯಾಗಿ ಧ್ವನಿ ಎತ್ತಬೇಕಿದೆ. ಚುನಾವಣೆ ಸಂದರ್ಭಗಳಲ್ಲಿ ಶಾಶ್ವತ ನೀರಾವರಿ ಯೋಜನೆಯನ್ನು ಶೀಘ್ರವೇ ಪಕ್ಷ ಜಾರಿಗೆ ತರುತ್ತದೆಯೆಂದು ಹೇಳುವ ಮುಖಂಡರು ಗೆದ್ದ ಮೇಲೆ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸದೆ ಮೌನ ವಹಿಸಿರುವುದು ಜನರಲ್ಲಿ ಬೇಸರ ಮೂಡಿಸಿದೆ.
ಇನ್ನಾದರೂ ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಇಲ್ಲಿನ ಜನರ ಪರ, ಶಾಶ್ವತ ಕುಡಿಯುವ ನೀರಿನ ಪರವಾದರೂ ಧ್ವನಿ ಎಂದು ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಒತ್ತಾಯಿಸುತ್ತಿದ್ದಾರೆ. ಈ ಮಾತು ಇಲ್ಲಿಗೆ ಕಮರಿ ಹೋಗುತ್ತವೆಯಾ? ಅಥವಾ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸದನದಲ್ಲಿ ಪ್ರಸ್ತಾಪ ಮಾಡುತ್ತಾರಾ? ಈ ಪ್ರಶ್ನೆಗೆ ಕೆಲವು ದಿನ ಕಾಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement