31, ಆ.1ರಂದು ಅದ್ಧೂರಿ ಕಾವಡಿ ಉತ್ಸವ
ಮಾಲೂರು: 15ನೇ ವರ್ಷದ ಕಾವಡಿ ಉತ್ಸವವನ್ನು ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಭಕ್ತರು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಉತ್ಸವದ ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗವಹಿಸಬೇಕೆಂದು ಮಾಲೂರು -ಹೊಸೂರು ರಸ್ತೆಯ ಶ್ರೀಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿ ಸಮಿತಿ ಹಾಗೂ ತಾಲೂಕು ಸೆಂಗುದರ್ ಸಂಘದ ಅಧ್ಯಕ್ಷ ಎಂ.ಆರ್.ದೇವರಾಜ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜು.31 ಹಾಗೂ ಆ.1 ರಂದು ಸುಬಹ್ಮಣ್ಯ ದೇವಾಲಯದಲ್ಲಿ 2 ದಿನಗಳ ಕಾಲ ವಿಜೃಂಭಣೆಯಿಂದ ಕಾವಡಿ ಉತ್ಸವ ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ. 31ರಂದು ಆಡಿಕೃತ್ತಿಕೆ ಪ್ರಯುಕ್ತ ಸ್ವಾಮಿಗೆ ಪಂಚಾಮೃತ ಅಭಿಷೇಕ, ರಜತ ವಜ್ರಾಂಗಿ ಅಲಂಕಾರ ನಡೆಯಲಿದೆ.
ಕರ್ನಾಟಕ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಆನಂದ್ ಬ್ರಹ್ಮಶ್ರೀ ಆಶ್ರಮದ ಡಾ. ಆನಂದ ಗುರೂಜೀ ಆಶೀವಚನ ನೀಡಲಿದ್ದಾರೆ. ದೇವಾಲಯ ಸಮಿತಿ ವತಿಯಿಂದ ನೂತನ ಶಾಸಕ ಮಂಜುನಾಥ್ ಗೌಡ ಅವರಿಗೆ ಸನ್ಮಾನ ನಡೆಯಲಿದೆ. ಜೆಡಿಎಸ್ ಮುಖಂಡರಾದ ನಂಜೇಗೌಡ, ಹನುಮಂತಪ್ಪ, ಕೃಷ್ಣ ಗ್ರೂಪ್ಸ್ನ ಎಂ.ಪಿ. ನಾಗರಾಜ್, ಸಾಹಿತಿ ವೇಣುಗೋಪಾಲ್, ಸಂಪಾದಕ ಸುರೇಶ್ ಕುಮಾರ್, ತಾ.ಪ. ಸಂ. ಅಧ್ಯಕ್ಷ ಎಂ.ವಿ. ರವೀಂದ್ರ ಭಾಗವಹಿಸಲಿದ್ದಾರೆ ಎಂದರು.
ಸಂಜೆ ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ ಸೇರಿದಂತೆ ಇತರೆ ಜನಪದ ಕಲಾ ತಂಡದೊಂದಿಗೆ ಸುಬ್ರಹ್ಮಣ್ಯ ಸ್ವಾಮಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವವು ಪಟ್ಟಣನಾದ್ಯಂತ ನಡೆಯಲಿದೆ. ಆ.1 ರಂದು ಕಾವಡಿ ಉತ್ಸವದ ಅಂಗವಾಗಿ ಸಂಜೆ 4 ಗಂಟೆಗೆ ಭಕ್ತಿ ಪರಾಕಾಷ್ಠೆಯ ಕ್ರೇನ್ ಊಂಜಲ್ ಸೇವೆ ಮತ್ತು ಊಂಜಲ್ ಸೇವೆ ನಡೆಯಲಿದೆ. ಊಂಜಲ್ ಸೇವೆಯನ್ನು ತಾಲೂಕಿನ ಮೇಡಹಟ್ಟಿ ಹಾಗೂ ಪಟ್ಟಣದ ಹನುಮಂತನಗರದ ಗ್ರಾಮಸ್ಥರು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಭಕ್ತರಿಗೆ ಮಧ್ಯಾಹ್ನ ಪ್ರಸಾದ ವಿನಿಯೋಗ ಸೇರಿದಂತೆ ಸ್ವಾಮಿ ದರ್ಶನಕ್ಕೆ ತೊಂದರೆಯಾಗದಂತೆ ಸಮಾರಂಭದ ವೇದಿಕೆಯನ್ನು ದೇವಾಲಯದ ಹಿಂಭಾಗದ ಅವರಣದಲ್ಲಿ ಸಿದ್ಧಪಡಿಸಲಾಗಿದೆ. ಪಟ್ಟಣದ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಈ ಶ್ರದ್ಧಾಭಕ್ತಿಯ ಪವಾಡ ಸದೃಶ್ಯದ ಕಾವಡಿ ಉತ್ಸವದ ದೇವತಾ ಕೈಂಕರ್ಯಗಳಲ್ಲಿ ಭಾಗಿಸುವಂತೆ ಮನವಿ ಮಾಡಿದ್ದರು. ಸೆಂಗುಂದರ್ ಸಂಘದ ಕೃಷ್ಣಮೂರ್ತಿ, ರಾಮಚಂದ್ರ, ಶ್ರೀರಾಮಪ್ಪ, ರವಿಚಂದ್ರನ್, ಸೀತಾರಾಮ್, ರಾಮು, ರಾಮಮೂರ್ತಿ ಇದ್ದರು.