ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗುಂಡಪ್ಪ

Srinivasa Murthy VN
Updated On : 27 Jul 2013, 12:33 pm

ಮಾಲೂರು:  ಮಾಲೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಪ್ರಾಥಮಿಕ ಶಾಲಾ ಶಿಕ್ಷಕ ಗುಂಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂಬಂಧ ಶುಕ್ರವಾರ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ವೆಂಕಟಸ್ವಾಮಿ, ಆಂಜಿನಪ್ಪ, ಜಯರಾಂ, ಮುನಿವೆಂಕಟಪ್ಪ, ಸೋಮಶೇಖರ್ ಶಾಸಕ ಮಂಜುನಾಥ್ ಗೌಡರ ಮನವಿ ಮೇರೆಗೆ ವಾಪಾಸ್ ಪಡೆದ ಕಾರಣ ತಾಲೂಕಿನ ದೊಡ್ಡಕಲ್ಲಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಗುಂಡಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆರೋಗ್ಯ ಇಲಾಖೆಯ ಸೋಮಶೇಖರ್ ಖಂಜಾಚಿಯಾಗಿ ಹಾಗೂ ಕಂದಾಯ ಇಲಾಖೆಯ ಜಯರಾಮ್ ರಾಜ್ಯ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ವಿ.ನಾರಾಯಣಪ್ಪ ತಿಳಿಸಿದ್ದಾರೆ. ಗುರುಭವನ ಅಥವಾ ನೌಕರರ ಭವನ ನನ್ನ ಅಧಿಕಾರಿದ ಅವಧಿಯಲ್ಲಿ ನಿರ್ಮಿಸಲು ಪ್ರಯತ್ನ ಮಾಡಲಾಗುವುದು ಎಂದು ಗುಂಡಪ್ಪ ಭರವಸೆ ನೀಡಿದರು.

ಕೆಜಿಎಫ್ ನಗರದಲ್ಲಿ ಬಿಡಾಡಿ ದನಗಳ ಹಾವಳಿ ತಡೆಗೆ ಆಯುಕ್ತರಿಂದ ಕ್ರಮ
ಕೆಜಿಎಫ್: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ, ವಾಹನ ಚಾಲಕರಿಗೆ, ವಿದ್ಯಾರ್ಥಿಗಳಿಗೆ  ದಿನನಿತ್ಯ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು. ವರದಿಯನ್ನು ಆಲಿಸಿದ ಕೆಜಿಎಫ್ ನಗರಸಭೆ ಆಯುಕ್ತ ವಿ. ಬಾಲಚಂದರ್ ಅವರು ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ನಗರದಲ್ಲಿ ಹಸುಗಳ ಹಾವಳಿಯಿಂದ ಹಲವಾರು ತೊಂದರೆಗಳಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಕೆಜಿಎಫ್ ಕ್ಷೇತ್ರದಲ್ಲಿ ಹಸುಗಳನ್ನು, ಎಮ್ಮೆಗಳನ್ನು ಸಾಕುವವರು ಆಗಸ್ಟ್ 15 ರೊಳಗೆ ತಮ್ಮ ಜಾನುವಾರುಗಳನ್ನು ತಮ್ಮ ಮನೆಗಳ  ಮುಂದೆ ಕಟ್ಟಿಹಾಕಿಕೊಂಡು ಅವುಗಳಿಗೆ ಮೇವು ತಂದು ಹಾಕಿ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಒಂದು ವೇಳೆ 15 ತಾರೀಖು ನಂತರ ತಮ್ಮ ಜಾನುವಾರುಗಳನ್ನು ನಗರ ಪ್ರದೇಶಗಳಲ್ಲಿ ಎಲ್ಲಂದ್ರೆ ಅಲ್ಲಿ ಮೇಯಲು ಬಿಟ್ಟರೆ ಅವುಗಳನ್ನು ನಗರಸಭೆ ಸಿಬ್ಬಂದಿ ಮೂಲಕ ಹಿಡುದುಕೊಂಡು ಬಂದು ನಗರಸಭೆ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ತಮ್ಮ ದನಗಳನ್ನು ಪಡಯಲು ಬರುವ ಮಾಲೀಕರಿಗೆ ನಗರಸಭೆ ವತಿಯಿಂದ 500 ರೂ. ದಂಡ ಕಟ್ಟಿಸಿಕೊಂಡು ಬಿಡಲಾಗುತ್ತದೆ. ಈ ರೀತಿ ಮೂರು ಬಾರಿ ದಂಡಕ್ಕೊಳಗಾದವರಿಗೆ ಮತ್ತೆ ಹಸುಗಳನ್ನು ನೀಡದೆ ಗೋಶಾಲೆಗೆ ಒಪ್ಪಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಈ ಪ್ರಕಟಣೆ ಮೂಲಕ ಎಚ್ಚರಿಸುವುದಾಗಿ ಆಯುಕ್ತರು ತಿಳಿಸಿದರು. ಅದೇ ರೀತಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆಯೂ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿದ್ದು ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ವತಿಯಿಂದ ನಾಯಿಗಳನ್ನು ಹಿಡಿದುಕೊಂಡು ಹೋಗಿ  ನಗರದ ಪಶು ಆಸ್ಪತ್ರೆಯಲ್ಲಿ ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಕಾರ್ಯಕ್ರಮವನ್ನು  ನಗರಸಭೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ವೇಳೆ ನಗರಸಭೆ ಆರೋಗ್ಯಾಧಿಕಾರಿ ಸರಸ್ವತಿ ಮತ್ತು ಅಖಿಲಾಬಾನು ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ವೈದ್ಯರಿಗೆ ಗ್ರಾಮೀಣ ಸೇವೆ ಜಾರಿಯಾಗಲಿ
ವಿಧಾನಸಭೆ: ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ವೈದ್ಯರು ಕಡಿಮೆ ಇದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವೈದ್ಯ ಶಿಕ್ಷಣ ಪಡೆಯುವ ಎಲ್ಲರಿಗೂ ಒಂದು ವರ್ಷ ಗ್ರಾಮೀಣ ಸೇವೆಯನ್ನು ತತ್ಕ್ಷಣದಿಂದಲೇ ಕಡ್ಡಾಯ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲೆ ಮಾತನಾಡಿದ ಅವರು, ಚೀನಾದಲ್ಲಿ ಪ್ರತಿ 10 ಸಾವಿರ ಜನರಿಗೆ 14.6 ವೈದ್ಯರಿದ್ದಾರೆ. ಅಮೆರಿಕಾದಲ್ಲಿ 24, ಕ್ಯೂಬಾದಲ್ಲಿ 64 ವೈದ್ಯರಿದ್ದಾರೆ. ಆದರೆ ನಮ್ಮ ದೇಶದಲ್ಲಿ 6.5 ವೈದ್ಯರು ಮಾತ್ರ ಇದ್ದಾರೆ. ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರಿ ಸೇವೆಗೆ ಬರುವವರಿಗೆ ಆಕರ್ಷಕ ವೇತನ ಹಾಗೂ ಸೌಲಭ್ಯ ನೀಡಬೇಕು ಎಂದರು.
ಸಿಎಂಗೆ ಅಭಿನಂದನೆ: ಬಯಲುಸೀಮೆ ಪ್ರದೇಶದ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆ ಕಾರ್ಯಗತಗೊಳಿಸಲು ಒಂದು ಸಾವಿರ ಕೋಟಿ ಹಾಗೂ ಪರಮಶಿವಯ್ಯ ವರದಿ ಅನುಷ್ಠಾನಕ್ಕೆ ಸಮಗ್ರ ಯೋಜನೆ ರೂಪಿಸಲು 50 ಕೋಟಿ ಒದಗಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಧಾಕರ್ ಅಭಿನಂದನೆ ಸಲ್ಲಿಸಿದರು.
ಸರ್ಕಾರ ಪಾಲುದಾರನಾಗಲಿ: ಗಣಿ ಉದ್ಯಮದಲ್ಲಿ ರಾಜ್ಯ ಸರ್ಕಾರ ಪಾಲುದಾರನಾಗಬೇಕು. ಗಣಿ ಉದ್ಯಮದಲ್ಲಿ ನೂರು-ಇನ್ನೂರು ಜನರು ಮಾತ್ರ ಕೋಟ್ಯಾಧಿಪತಿಗಳಾಗಿದ್ದಾರೆ. ಈ ಉದ್ಯಮದಲ್ಲಿ ಸರ್ಕಾರ ಶೇ.50ರಷ್ಟು ಪಾಲುದಾರಿಕೆ ಹೊಂದಿದರೆ 50,000 ಕೋಟಿ ಲಾಭ ಬರುತ್ತದೆ ಎಂದು ಹೇಳಿದರು.

ದೇವಿ ಕರುಮಾರಿಯಮ್ಮ ಆಷಾಡ ಮಹೋತ್ಸವ
ಕೆಜಿಎಫ್: ಪಟ್ಟಣದ ಎಂ.ಜಿ. ಮಾರುಕಟ್ಟೆಯಲ್ಲಿರುವ ಶ್ರೀ ದೇವಿ ಕರುಮಾರಿಯಮ್ಮ ದೇವಸ್ಥಾನದ 19ನೇ ವರ್ಷದ ಆಷಾಡ ಮಹೋತ್ಸವ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಯಿತು. ಭಕ್ತಾಧಿಗಳಿಂದ 1008 ಹಾಲು ಕುಡಗಳನ್ನು ತಲೆ ಮೇಲೆ ಹೊತ್ತುಕೊಂಡು ನಗರದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಿಂದ ಮೆರವಣಿಗೆ ಹೊರಟು ಗೀತಾ ರಸ್ತೆ, ಸೂರಜ್ಮುಲ್ ವೃತ್ತ, ಗಾಂಧಿ ವೃತ್ತದ ಮೂಲಕ ಹಾದು ಶ್ರೀ ದೇವಿ ಕರುಮಾರಿಯಮ್ಮಗೆ 1008 ಹಾಲು ಕೊಡಗಳ ಅಭಿಷೇಕ ನಡೆಸಲಾಯಿತು. ರಕ್ಷಾ ಬಂದನ, ಗಣಪತಿ ಹೋಮ, ಪಂಬೈವಾದ್ಯ, ಶ್ರೀ ದೇವಿ ಕರುಮಾರಿಯಮ್ಮ ಪುಷ್ಪ ಪಲ್ಲಕಿ ಮೆರವಣಿಗೆ, ದೇವಿಗೆ ವಿಶೇಷ ಹೂವಿನ ಅಲಂಕಾರ, ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಸಲಾಯಿತು. ಮಹೋತ್ಸವದಲ್ಲಿ ಕೆಜಿಎಫ್ ಶಾಸಕಿ ವೈ. ರಾಮಕ್ಕ, ಮಾಜಿ ಶಾಸಕರಾದ ವೈ. ಸಂಪಂಗಿ, ಎಂ. ಭಕ್ತವತ್ಸಲಂ, ಎಸ್. ರಾಜೇಂದ್ರನ್, ಸಮಾಜ ಸೇವಕರಾದ ವಿ.ಮುನಿಸ್ವಾಮಿ, ಬೆಂಗಳೂರಿನ ಆತ್ಮ ಜ್ಯೋತಿ ಸ್ವಾಸ್ತಿಕ್ ಸಿದ್ದತಾಯಿ, ಪೊಲೀಸ್ ರಕ್ಷಣಾಧಿಕಾರಿ ಡಾ. ರೋಹಿಣಿಕಟೇಚ್ ಸಫೆಟ್, ವೃತ್ತ ನಿರೀಕ್ಷಕ ಟಿ.ಸಿ. ವೆಂಕಟೇಶ್, ಹಲವು ಮುಖಂಡರು ನಗರ ಪ್ರದೇಶದ ಸಾವಿರಾರೂ ಭಕ್ತಾಧಿಗಳು ಹಾಗೂ ನಾಗರಿಕರು ಶ್ರೀ ದೇವಿ ಕರುಮಾರಿಯಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement