ರಾಷ್ಟ್ರಪ್ರೇಮ ಹೆಚ್ಚಿಸಿದ ಕಾರ್ಗಿಲ್ ಯುದ್ಧ
- ಪಾ.ಶ್ರೀ.ಅನಂತರಾಮ್
ಕೋಲಾರ: 'ಕಾರ್ಗಿಲ್ ಯುದ್ಧದಿಂದ ದೇಶದ ಯುವಕರಲ್ಲಿ ರಾಷ್ಟ್ರಪ್ರೇಮ ಹೆಚ್ಚಿದೆ. ನಮ್ಮ ದೇಶದ ಯುವಕರು ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದಕ್ಕೆ ಬೇಕಾದ ಆತ್ಮಸ್ಥೈರ್ಯ ತುಂಬಲು ಕೇಂದ್ರ ಸರ್ಕಾರ ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಕ್ಷಣಾ ಇಲಾಖೆಯ ಶಕ್ತಿ ಹೆಚ್ಚಿಸಬೇಕು..' ಮಾಜಿ ಯೋಧ ಟಿ.ಯು.ಜನಾರ್ದನ್ ಅವರ ಮನದಾಳದ ಮಾತುಗಳಿವು.
ಕಾರ್ಗಿಲ್ ವಿಜಯೋತ್ಸವ ಸಂದರ್ಭದಲ್ಲಿ 'ಕನ್ನಡಪ್ರಭ'ದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಜನಾರ್ದನ್, ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ನಡೆದ ಯುದ್ಧಗಳಿಗೆ ಹೋಲಿಸಿದಲ್ಲಿ ಕಾರ್ಗಿಲ್ ಯುದ್ಧ ಅತ್ಯಂತ ಮಹತ್ವ ಪಡೆದಿತ್ತು. ಶತ್ರುಗಳ ಗುಂಡಿಗೆ ಬಲಿಯಾದವರಲ್ಲಿ ಹೆಚ್ಚಿನವರು ಯುವಕರೇ. ಹಾಗಾಗಿ, ನಮ್ಮ ದೇಶದ ಯುವಕರು ಭಾರತೀಯ ಸೇನೆ ಬಗ್ಗೆ ಅಪಾರ ಪ್ರೀತಿ, ನಂಬಿಕೆ ಹೊಂದುವಂತಾಯುತು ಎನ್ನುತ್ತಾರೆ ಜನಾರ್ದನ್.
ಸೇನೆಯಲ್ಲಿ ನನಗೆ ತಾಂತ್ರಿಕತೆ ಜ್ಞಾನದೊಂದಿಗೆ ರಸ್ತೆ, ಸೇತುವೆಗಳ ನಿರ್ಮಾಣ ಕಾರ್ಯದಲ್ಲಿಯೂ ಆಸಕ್ತಿ ಮೂಡಿಸಿದರು. ಜತೆಗೆ ರಕ್ಷಣಾ ಇಲಾಖೆಯ ಗಣ್ಯರನ್ನು ಕ್ಯಾಂಪುಗಳಿಗೆ ಕರೆದೊಯ್ಯಲು ವಾಹನ ಚಾಲನೆ ತರಬೇತಿಯೂ ಸಿಕ್ಕಿತ್ತು. ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಗಣ್ಯರನ್ನು ನಮ್ಮ ಹಿರಿಯ ಅಧಿಕಾರಿಗಳ ಸೂಚನೆಯಂತೆ ನಿಗದಿತ ಸ್ಥಳಗಳಿಗೆ ಕರೆದೋಯ್ದು ಮತ್ತೆ ಗಡಿ ದಾಟಿಸುತ್ತಿದ್ದೆ. ಕಾರ್ಗಿಲ್ ಯುದ್ಧದಲ್ಲಿ ನಾನು ಅಪಾಯ ಸ್ಥಳಗಳಲ್ಲಿ ಬಂದೂಕು ಹಿಡಿದು ಹೋರಾಡದೇ ಹೋದರೂ ಯೋಧರಿಗೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯದಲ್ಲಿ ಕೆಲಸ ಮಾಡಿದ್ದೇನೆಂದರು.
ಯೋಧರು ಮುನ್ನುಗ್ಗಲು ರಸ್ತೆ ರಿಪೇರಿ: ಸೇನೆಯ ಗಡಿಯಲ್ಲಿ ಬೀಳುತ್ತಿದ್ದ ಮಂಜುಗಡ್ಡೆಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಶತ್ರುಗಳು ಕೆಲವು ಜಾಗಗಳಲ್ಲಿ ರಸ್ತೆಗಳನ್ನು ಮುಚ್ಚಿ ಸಮಸ್ಯೆ ಉಂಟು ಮಾಡುತ್ತಿದ್ದರು. ಆಗ ನಾವು ದುರಸ್ತಿ ಕಾಮಗಾರಿ ಮಾಡಿ ನಮ್ಮ ಯೋಧರು ಮುನ್ನುಗ್ಗಲು ಸಹಕರಿಸುತ್ತಿದ್ದೆವು. ಈ ಯುದ್ಧದಲ್ಲಿ ಯಾವ ಯುವಕನೂ ಧೃತಿಗೆಡುತ್ತಿರಲಿಲ್ಲ ಎಂದು ಆ ದಿನಗಳನ್ನು ನೆನಪಿಸಿಕೊಂಡರು.
ನಮ್ಮ ಯುವಕರಿಗೆ ಹೆಚ್ಚಿನ ತರಬೇತಿ ಹಾಗೂ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕಾಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಸಾವಿರಾರು ಜನರು ನಮಗೆ ಪತ್ರಗಳನ್ನು ಬರೆದು ಧೈರ್ಯ ತುಂಬುತ್ತಿದ್ದರು. ಆದರೆ, ಸೇನೆಗೆ ಮಾತ್ರ ಸೇರಲು ಹಿಂದೇಟು ಹಾಕುತ್ತಿರುವುದು ನೋವಿನ ಸಂಗತಿ ಎಂದರು.
ಸೇನೆಯಲ್ಲಿ ಶಿಸ್ತು ಅಗತ್ಯ. ಆದರೆ, ಅತಿ ಶಿಸ್ತು, ಉಸಿರುಗಟ್ಟುವ ವಾತಾವಣ ಬದಲಾಗಬೇಕು. ಸೇನೆಗೆ ಸೇರುವವರಿಗೆ ಕಾರ್ಯಸೂಚಿ ರೂಪಿಸುವ ಮೂಲಕ ಯುವಕರು ಕನಿಷ್ಠ 20 ವರ್ಷ ಸೇನೆಯಲ್ಲಿ ಲವಲವಿಕೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಸೇನೆಗೆ ಸೇರುವ ಮೂಲಕ ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿರುವ ಕೆಲಸ ಮಾಡಿದಾಗ ಮಾತ್ರ ಯುವಕರ ಕೀರ್ತಿ ಹೆಚ್ಚುತ್ತದೆ ಎಂಬುವುದು ಜನಾರ್ದನ್ ಅಭಿಪ್ರಾಯ.
ರಾಷ್ಟ್ರ ರಕ್ಷಣೆಗೆ ಪ್ರತಿಜ್ಞೆ ಸ್ವೀಕರಿಸಿದ ಯುವಕರು
ಕನ್ನಡಪ್ರಭ ವಾರ್ತೆ, ಕೋಲಾರ,ಜು.26
13 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದಲ್ಲಿ ದೇಶ ರಕ್ಷಣೆಗಾಗಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ ಹಾಗೂ ಕಾರ್ಗಿಲ್ ವಿಜಯ ದಿನ ಆಚರಣೆಗಾಗಿ ನಗರದಲ್ಲಿ ಶುಕ್ರವಾರ ಸಂಜೆ ಶ್ರೀ ವಿವೇಕಾನಂದ ಯುವಜನ ಮತ್ತು ವಿದ್ಯಾರ್ಥಿ ವೇದಿಕೆಯಿಂದ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಮಾರು 150ಕ್ಕೂ ಹೆಚ್ಚು ಯುವಕರು ಕಾರ್ಯಕ್ರಮದಲ್ಲಿ ಮೆಣದ ಬತ್ತಿ ಬೆಳಗಿಸುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡಿದರು.
ನಗರದ ಸರ್ಕಲ್ ಇನ್ಸೆಪೆಕ್ಟರ್ ರಮೇಶ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಗಿಲ್ ಯುದ್ಧದಿಂದಾಗಿ ದೇಶದ ಯುವಕರಲ್ಲಿ ಆತ್ಮಾಭಿಮಾನ ಹಾಗೂ ದೇಶಭಕ್ತಿ ಹೆಚ್ಚಿದೆ, ಇಂದಿನ ಯುವಕರು ಅನಗತ್ಯವಾಗಿ ಕಾಲಹರಣ ಮಾಡುವ ಬದಲು ದೇಶದ ಐಕ್ಯತೆ, ಸಮಗ್ರತೆಗಾಗಿ ಚಿಂತನೆ ಮಾಡಬೇಕು, ಹೊರಗಿನ ಮತ್ತು ಒಳಗಿನ ಶತ್ರುಗಳನ್ನು ದಮನ ಮಾಡಲು ಒಗ್ಗೂಡಿ ಕೆಲಸ ಮಾಡಬೇಕೆಂದರು. ಶ್ರೀ ವಿವೇಕಾನಂದ ಯುವಜನ ಮತ್ತು ವಿದ್ಯಾರ್ಥಿ ವೇದಿಕೆಯ ಮುಖಂಡ ಓಂಶಕ್ತಿ ಚಲಪತಿ ಮಾತನಾಡಿ, ಕಾರ್ಗಿಲ್ ಯುದ್ಧದ ನಂತರ ಪಾಕಿಸ್ತಾನ ಭಾರತದ ತಂಟೆಗೆ ಬರುವುದು ಕೊಂಚ ಮಟ್ಟಿಗೆ ಕಡಿಮೆ ಆಗಿದ್ದರೂ ಗಡಿ ಭಾಗದಲ್ಲಿ ಆಗಾಗ ತನ್ನ ಅಟ್ಟಹಾಸ ಪ್ರದರ್ಶಿಸುತ್ತಿದೆ ಎಂದರು.
ಪಾಕಿಸ್ತಾನಕ್ಕಿಂತ ಚೀನಾ ದೇಶ ಈಗ ನಮಗೆ ಸವಾಲಾಗಿ ಪರಿಣಮಿಸಿದೆ, ಸದ್ದುಗದ್ದಲವಿಲ್ಲದೆ ಭಾರತಗ ಗಡಿಯನ್ನು ಅತಿಕ್ರಮಣ ಮಾಡುತ್ತಿದ್ದಾರೆ. ದೇಶ ರಕ್ಷಣೆಗಾಗಿ ನಮ್ಮ ಯೋಧರು ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು, ಸೇನೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಶತ್ರು ರಾಷ್ಟ್ರಗಳ ಸಂಚು ವಿಫಲಗೊಳಿಸಬೇಕಾಗಿದೆ ಎಂದರು. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕೆ ಜಯ ಸಿಗಲು ಯುವ ಯೋಧರ ಹೋರಾಟ ಶ್ಲಾಘನೀಯ, ದೇಶದ ರಕ್ಷಣೆಗಾಗಿ ಯುವಕರು ಪಣತೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ರಾಮಯ್ಯ, ಮುಖಂಡರಾದ ಸಾ.ಮ. ಅನಿಲ್ ,ನಾಮಲ ಮಂಜು, ಮುಕುಂದ, ಸಂತೋಷ್, ಮಹೇಶ್, ವೆಂಕಟೇಶ್, ಸಾಹುಕಾರ್ ಶಂಕರಪ್ಪ, ರತ್ನಮ್ಮ,ನರಸಿಂಹ, ರವಿ ಮತ್ತಿತರರು ಇದ್ದರು.
ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ
ಶಿಡ್ಲಘಟ್ಟ: ಚಂದ್ರಶೇಖರ್ ಆಜಾದ್ ಹೆಸರಿನಲ್ಲಿ ನಡೆಯುತ್ತಿರುವ ರಕ್ತದಾನ ತುಂಬ ಉಪಯುಕ್ತವಾಗಿದೆ ಎಂದು ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ವೀರಯ್ಯ ಹೇಳಿದ್ದಾರೆ. ಪಟ್ಟಣದಲ್ಲಿ ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಜನ್ಮದಿನದ ಅಂಗವಾಗಿ ರಾಷ್ಟ್ರೋತ್ಥಾನ ರಕ್ತನಿಧಿ, ಬೆಂಗಳೂರು ಹಾಗೂ ಬಿಜೆಪಿ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಜನ್ಮದಿನದ ಅಂಗವಾಗಿ ರಾಷ್ಟ್ರೋತ್ಥಾನ ರಕ್ತನಿಧಿ, ಬೆಂಗಳೂರು ಹಾಗೂ ಬಿಜೆಪಿ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಡಿ.ಎಸ್. ವೀರಯ್ಯ ಉದ್ಗಾಟಿಸಿ ಮಾತನಾಡುತ್ತಾ ರಕ್ತದಾನ ಮಹಾದಾನವಾಗಿದ್ದು ತುಂಬ ಅಮೂಲ್ಯವಾಗಿದ್ದು ಜೀವ ಕಾಪಾಡುವ ಪವಿತ್ರ ಕೆಲಸವಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರಾದ ಅನೇಕರು ಪ್ರಾಣಾರ್ಪಣೆ ಮಾಡಿದ್ದು ಅವರ ಕ್ರಾಂತಿವೀರ ಚಂದ್ರಶೇಖರ್ ಆಜಾದ್ಜ್ನ್ಮದಿನದ ಆಂಗವಾಗಿ ಹಾಗೂ ಕಾರ್ಗಿಲ್ ವಿಜಯೋತ್ಸವದ ಸವಿನೆನಪಿಗಾಗಿ ಏರ್ಪಡಿಸಿರುವ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಮಂದಿ ಯುವಕರು ಮುಂದೆ ಬಂದು ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕಾಗಿ ಕೋರಿದರು. ರಕ್ತದಾನ ಮಾಡುವುದರಿಂದ ಹೃದಯ ರೋಗದಂತಹ ಖಾಯಿಲೆಗಳು ಗುಣಮುಖವಾಗುವುದಲ್ಲದೆ ಹೊಸ ಹುಮ್ಮಸು ಬರುವುದೆಂದು ತಿಳಿಸಿದರು. 198 ಯುನಿಟ್ಗಳಷ್ಟು ರಕ್ತವನ್ನು ಸಂಗ್ರಹಿಸಲಾಗಿದೆಯೆಂದು ರಮೇಶ್ ಬಾಯಿರಿ ತಿಳಿಸಿದರು.
ಬಿಜೆಪಿ ತಾಲೂಕು ಅದ್ಯಕ್ಷರಾದ ಸುರೇಂದ್ರ ಗೌಡ, ಸದಾಶಿವ, ರಮೇಶ್ ಬಾಯಿರಿ, ಕೆಂಪರೆಡ್ಡಿ, ಎಂ.ಎನ್. ರವಿನಾರಾಯಣ ರೆಡ್ಡಿ, ರವೀಂದ್ರ ಮತ್ತಿತರರು ಹಾಜರಿದ್ದರು.