'ಸೌಹಾರ್ದ ಮೂಡಿಸುವ ಕಾರ್ಯಕ್ರಮ ಅವಶ್ಯ'
ವಿದ್ಯಾರ್ಥಿಗಳ ಸ್ನೇಹ ಮಿಲನ ಒಗ್ಗೂಡಿಕೆ ಸಮಾರಂಭದಲ್ಲಿ ಕೆಆರ್ಎನ್
ಚಿಂತಾಮಣಿ: ಪಟ್ಟಣದ ಪ್ರತಿಷ್ಠಿತ ರಾಯಲ್ ಶಾಲೆ ಹಾಗೂ ಶ್ರೀ ಶಿಲ್ಪ ವಿದ್ಯಾಸಂಸ್ಥೆಯ ನೂರಾರು ಹಳೇ ವಿದ್ಯಾರ್ಥ್ಥಿಗಳಿಂದ ನಗರದ ಟ್ಯಾಂಕ್ಬಂಡ್ ರಸ್ತೆಯಲ್ಲಿರುವ ಶ್ರೀವಾಸವಿ ವೃದ್ಧಾಶ್ರಮ ಮತ್ತು ಅನಾಥ ಮಕ್ಕಳ ಸೇವಾಶ್ರಮದಲ್ಲಿ 2011-12 ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಮಿಲನ ಒಗ್ಗೂಡಿಕೆಯ ವಿನೂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ರಾಯಲ್ ಶಾಲೆಯ ಪ್ರಾಂಶುಪಾಲರು ಹಾಗೂ ಆಶ್ರಮದ ಅಧ್ಯಕ್ಷ ಕೆ.ಆರ್.ನರಸಿಂಹಪ್ಪ ಮಾತನಾಡಿ, ಹಲವು ಶಾಲೆಗಳ ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ ವೃದ್ಧರ ಮತ್ತು ಅನಾಥ ಮಕ್ಕಳ ಮಧ್ಯೆ ಆಟ-ಪಾಠಗಳೊಂದಿಗೆ ಭಾಗಿಯಾಗಿದ್ದಾರೆ. ಇಂಥ ವಿನೂತನಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಭೇದ-ಭಾವನೆಗಳನ್ನು ತೊಡೆದು ಹಾಕಲು ಶ್ರಮಿಸಲಾಗಿದೆ.ಇದರಿಂದ ಬದುಕಿನಲ್ಲಿ ಸೌಹಾರ್ದಯುತ ಹೆಜ್ಜೆ ಇಡಲು ಸಹಕಾರಿಯಾಗಲಿ ಎಂದು ಹಾರೈಸಿದರು.
ಸೌಹಾರ್ದ ಮೂಡಿಸುವ ಇಂತಹ ಕಾರ್ಯಕ್ರಮಗಳು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚಾಗಿ ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಹಾಗೂ ಇದೇ ಕಾರ್ಯಕ್ರಮದಲ್ಲಿ ಅಬ್ಬುಗುಂಡು ಸುಬ್ಬಾರೆಡ್ಡಿರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು 5 ನಿಮಿಷ ಮೌನ ಆಚರಿಸಲಾಯಿತು. ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿತ್ತು. ಸಂಜೆ ಮತ್ತು ದಿನಾಂಕ 25-07-2013ರ ಗುರುವಾರ ಪೂರ್ತಿಯಾಗಿ ಅಬ್ಬುಗುಂಡು ಕುಟುಂಬದಿಂದ ಊಟದ ವ್ಯವಸ್ಥೆ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ರಾಯಲ್ ಶಾಲೆಯ ಪ್ರಾಂಶುಪಾಲರಾದ ಮಲ್ಲಿಕಾರ್ಜುನರವರು ಶಿಕ್ಷಕರಾದ ರಮೇಶ್, ರವಿ, ಸುನಿತ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಹಳೇ ವಿದ್ಯಾರ್ಥಿಗಳು ಆಶ್ರಮದ ಅಧ್ಯಕ್ಷರಾದ ಕೆ.ಆರ್.ನರಸಿಂಹಪ್ಪ ಕಾರ್ಯದರ್ಶಿ ಜೆ.ಕೆ. ನಿರ್ಮಲ, ಶಿಲ್ಪಶಾಲೆಯ ಸಿಬ್ಬಂದಿ ವರ್ಗದವರು ಮತ್ತು ಆಶ್ರಮದ ಸಿಬ್ಬಂದಿ ವರ್ಗದವರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.