'ಅಸೆಂಬ್ಲಿಯಲ್ಲಿ ಮಾತಿನಂತೆ ಮಾತಾಡಬೇಡಿ'
ಶಿಡ್ಲಘಟ್ಟ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮತ್ತು ಆವರೋಹಣಕ್ಕೆ ಸಂಬಂಧಿಸಿದಂತೆ ವಾದ-ವಿವಾದಲ್ಲಿ ತೊಡಗಿದ್ದ ಅಧಿಕಾರಿಗಳನ್ನು ಅಸೆಂಬ್ಲಿಯಲ್ಲಿ ಮಾತನಾಡಿದಂತೆ ಮಾತನಾಡಬೇಡ್ರಿ ಎಂದು ತಹಸೀಲ್ದಾರ್ ಹನುಮಂತರಾಯ ತಾಲೂಕಿನ ಅಧಿಕಾರಿಗಳನ್ನು ಎಚ್ಚರಿಸಿದ ಘಟನೆ ನಡೆಯಿತು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ರಾಷ್ಟ್ರದ್ವಜ ಆರೋಹಣ ಹಾಗೂ ಅವರೋಹಣ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವ ಇಲಾಖೆಯವರು ಆರೋಹಣದ ಜವಾಬ್ದಾರಿ ಹೊತ್ತುಕೊಳ್ಳಬೇಕು. ಯಾವ ಇಲಾಖೆಯವರು ಅವರೋಹಣ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತಿದ್ದರು.
ಆಗ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಶಿಕ್ಷಕ ರಂಗನಾಥ್ ಮಾತನಾಡಿ, ಪ್ರತಿ ವರ್ಷವೂ ನಾವೇ ಮಾಡುತ್ತಿದ್ದೇವೆ. ಕಳೆದ ವರ್ಷ ಸಂಜೆ 5.30 ಗಂಟೆಯಾದರೂ ಬಾವುಟ ಇಳಿಸಿರಲಿಲ್ಲ. ಅದು ಪತ್ರಿಕೆಗಳಲ್ಲಿ ಹೆಚ್ಚು ಪ್ರಚಾರವಾಗಿ ಜಿಲ್ಲಾಧಿಕಾರಿಗಳಿಂದ ನೋಟಿಸುಗಳು ಬಂದಿವೆ. ಆದ್ದರಿಂದ ಆರೋಹಣದ ಜವಾಬ್ದಾರಿ ನಾವು ಮಾಡುತ್ತೇವೆ. ಅವರೋಹಣದ ಜವಾಬ್ದಾರಿ ಬೇರೆ ಇಲಾಖೆಯವರಿಗೂ ಒಪ್ಪಿಸಿ ಎಂದರು.
ಪುರಸಭೆಯ ಮುರಳಿ ಇದಕ್ಕೆ ಸ್ಪಂದಿಸಿ, ಇದು ರಾಷ್ಟ್ರೀಯ ಹಬ್ಬ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಬಾವುಟದ ವಿಚಾರದಲ್ಲಿ ಇಷ್ಟೊಂದು ಗೊಂದಲ ಮಾಡಿಕೊಳ್ಳಬೇಕೆ ಎಂದಾಗ, ಮಧ್ಯಪ್ರವೇಶ ಮಾಡಿದ ತಹಸೀಲ್ದಾರ್ ಸಾಹೇಬ್ರು ಅಸೆಂಬ್ಲಿಯಲ್ಲಿ ಮಾತನಾಡಿದಂತೆ ಮಾತನಾಡಬೇಡ್ರಿ ಎರಡು ಕಡೆಯವರನ್ನು ಸಮಾಧಾನಪಡಿಸಿದರು.
ಸಭೆಯ ಆಮಂತ್ರಣ ಪ್ರತಿ ಅವಾಂತರ: ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಲುವಾಗಿ ತಾಲೂಕು ದಂಡಾಧಿಕಾರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿರುವ ಪೂರ್ವಭಾವಿ ಸಭೆ ಆಮಂತ್ರಣ ಪ್ರತಿ ಲೋಪದೋಷದಿಂದ ಕೂಡಿದೆ. ಪ್ರತಿಯಲ್ಲಿ ಕನ್ನಡ ಭಾಷೆಯನ್ನು ಅಧಿಕಾರಿಗಳು ಕೊಲೆ ಮಾಡಿದ್ದಾರೆ ತಾವು ನೋಡಿ ಅಥವಾ ನೋಡದೇ ಹಸ್ತಾಕ್ಷರ ಮಾಡಿರುವುದು ಸರಿಯೇ. ರಾಷ್ಟ್ರ ಹಬ್ಬವನ್ನು ಆಚರಣೆ ಮಾಡುವ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಕಾಟಾಚಾರದ ಸಭೆ ನಡೆಸುವ ಪರಿಪಾಠ ಬದಲಿಸಿಕೊಳ್ಳುವಂತೆ ತಹಸೀಲ್ದಾರ್ ಅವರನ್ನು ಪ್ರತಿ ತೋರಿಸಿ ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಸಭೆ ಆಮಂತ್ರಣ ಪ್ರತಿಯಲ್ಲಿ ನಡೆದಿರುವ ಲೋಪ ಕಣ್ಣಾರೇ ಕಂಡು ತಹಸೀಲ್ದಾರ್ ಸಾಹೇಬ್ರು ಲೋಪವಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದರು.
ಸಂಘಸಂಸ್ಥೆ, ಸಂಘಟನೆ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸದೆ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಮಾಡಲು ನಿರ್ಧಾರ ಮಾಡಲಾಯಿತು. ಆ.15ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ನೆರವೇರಿಸಲು ನಿರ್ಧರಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ದೇಶ ಭಕ್ತಿಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಲು ತೀರ್ಮಾನಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಿಹಿ ಹಂಚಲು ಸಮಾಜ ಕಲ್ಯಾಣಾಧಿಕಾರಿ,ಪಂಚಾಯತ್ರಾಜ್ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ, ಉಪ ನೋಂದಣಾಧಿಕಾರಿಗಳು ಉಸ್ತುವಾರಿವಹಿಸಿಕೊಳ್ಳಬೇಕೆಂದು ತಹಶೀಲ್ದಾರ್ ಅವರ ಪ್ರಸ್ತಾಪಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರಾಧಾಕೃಷ್ಣ, ಕಳೆದ ಸಾಲಿನಲ್ಲಿ 13000 ನೀಡಿ ಬೇಜಾರಾಗಿದೆ. ಬೇಜಾರಾಗಿದೆ ಎಂದು ಪದೇ ಪದೇ ಹೇಳುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಪರೋಕ್ಷವಾಗಿ ಅಪಮಾನಗೊಳಿಸಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಹಕ ಅಧಿಕಾರಿ ದೇವರಾಜಗೌಡ, ಜಿ.ಪಂ. ಎಇಇ ಪಿ.ವಿ. ನಾಗಪ್ಪ, ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಪ್ರಕಾಶ್, ವೃತ್ತ ನಿರೀಕ್ಷಕ ಜಗದೀಶ್, ಪಿಎಸ್ಐ ತಬ್ರೇಆಲಂ ಪಾಷ, ಪುರುಷೋತ್ತಮ, ಪಿ.ಬಿ. ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಂದ್ರಗೌಡ ಹಾಜರಿದ್ದರು.