ಗಂಡಂದಿರಿದ್ದರೂ ವಿಧವಾ ವೇತನಕ್ಕೆ ಅರ್ಜಿ ಹಾಕಿದ ಘಟವಾಣಿಯರು!
ಶ್ರೀನಿವಾಸಪುರ: ಗಂಡಂದಿರು ಇರುವ 7 ಮಂದಿ ಮಹಿಳೆಯರು ಗಂಡ ಮರಣ ಹೊಂದಿದ್ದಾನೆ ಎಂದು ನಕಲಿ ಪ್ರಮಾಣ ಪತ್ರ ನೀಡಿ ವಿಧವಾ ವೇತನಕ್ಕೆ ಅರ್ಜಿಗಳನ್ನು ಹಾಕಿಕೊಂಡಿರುವ ಬಗ್ಗೆ ತಹಸೀಲ್ದಾರ ಎಚ್.ಜಯ ಪತ್ತೆ ಹಚ್ಚಿದ್ದಾರೆ. ತಾಲೂಕಿನ ಎಲ್ಲಾ ರಂಗಗಳಲ್ಲಿಯೂ ನಕಲಿ ದಾಖಲೆ ನೀಡಿ ಸೌಲಭ್ಯ ಪಡೆಯುವ ದಂಧೆಗಳು ನಡೆಯುತ್ತಿವೆ. ತಾಲೂಕು ಕಚೇರಿಯ ಸಾಮಾಜಿಕ ಭದ್ರತಾ ಮಾಸಿಕ ವೇತನಕ್ಕೆ ಸಲ್ಲಿಸಿದ್ದ ವಿಧವಾ ವೇತನಕ್ಕೆ ಅರ್ಜಿಗಳನ್ನು ಪರಿಶೀಲಿಸಿ ಸ್ಥಳ ತನಿಖೆ ನಡೆಸಿದ ಸಂದರ್ಭದಲ್ಲಿ ಗಂಡ ಇರುವ ಮಹಿಳೆಯರೇ 7 ಮಂದಿ ಅರ್ಜಿಗಳನ್ನು ನೀಡಿರುವುದಾಗಿ ತಿಳಿದುಬಂದಿದೆ. ಕಾನೂನುಬದ್ಧ ರೀತಿಯಲ್ಲಿದ್ದರೆ ಬಡಬಗ್ಗರಿಗೆ ಕಾನೂನು ರೀತಿಯಲ್ಲಿ ಸಹಾಯ ಮಾಡಬಹುದು. ಆದರೆ, ಸುಳ್ಳು ಮಾಹಿತಿ ನೀಡುವವರಿಗೆ ರಾಜಕೀಯ ಮುಖಂಡರು ಯಾರೂ ಕೂಡ ಶಿಫಾರ್ಸು ಮಾಡಬೇಡಿ. ನನ್ನ ಮೇಲೆ ಬತ್ತಡಗಳನ್ನು ಹೇರಬೇಡಿ ಎಂದು ಟಿಎಪಿಎಂಎಸ್ನಲ್ಲಿ 'ಅನ್ನ ಭಾಗ್ಯ' ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಂತಹ ಸಂದರ್ಭದಲ್ಲಿ ಕಾರ್ಯಕ್ರಮ ಪ್ರಾರಂಭಗೊಳ್ಳುವುದಕ್ಕಿಂತ ಮುಂಚಿತವಾಗಿ ಮುಖಂಡರೊಂದಿಗೆ ಸಮಾಲೋಚನೆ ನಡೆಸುವ ಸಮಯದಲ್ಲಿ ವಿಷಯ ಬಹಿರಂಗ ಪಡಿಸಿದರು.
ಡೆಂಘಿ ಜಾಗೃತಿ ಜಾಥಾ
ಗುಡಿಬಂಡೆ: ಪಟ್ಟಣದ ಜನತೆಗೆ ಡೆಂಘಿ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮುಖ್ಯ ಬೀದಿಯಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಆಶಾ ಕಾರ್ಯಕರ್ತೆಯರು ಜಾಥ ಮಾಡುವ ಮೂಲಕ ಅರಿವು ಮೂಡಿಸಿದರು. ಡೆಂಘಿ ನಿಯಂತ್ರಣದ ಕುರಿತ ಮಾಹಿತಯುಳ್ಳ ಕರಪತ್ರಗಳನ್ನು ಹಂಚುತ್ತಾ ಪಟ್ಟಣದ ಮುಖ್ಯ ಬೀದಿಯಲ್ಲಿ ಡೆಂಘಿ ಜ್ವರದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ತಾಲೂಕು ಆಸ್ಪೆತ್ರೆಯ ವೈದ್ಯ ಮುರಳಿಧರ್, ಸಿಬ್ಬಂದಿ ವಸಂತಮ್ಮ, ನಿರ್ಮಲಮ್ಮ, ಗೀತಾಂಜಲಿ, ಪುಷ್ಪರಾಜ್, ಮಂಜುನಾಥ್, ವೆಂಕಟೇಶ್ ಸುದರ್ಶನ್, ಮುಬಾರಕ್ ತಹಸೀನ್, ಶಿಕ್ಷಕಿ ಮೀರಾಕುಮಾರಿ ಸೇರಿದಂತೆ ಹಲವರು ಇದ್ದರು.
ಎಸ್ಡಿಎಂಸಿಗೆ ಆಯ್ಕೆ
ಮಾಲೂರು: ತಾಲೂಕಿನ ದೊಡ್ಡ ಕಡತೂರು ಎಸ್ಡಿಎಂಸಿ ಅಧ್ಯಕ್ಷರಾಗಿ ಜಿ.ಆಶೋಕ್ ಅವರನ್ನು ಆಯ್ಕೆಮಾಡಲಾಗಿದೆ. ಪೋಷಕರ ಸಮ್ಮುಖ ನಡೆದ ಆಯ್ಕೆಯಲ್ಲಿ ಜಿ.ಆಶೋಕ್ ಅಧ್ಯಕ್ಷ, ಶೋಭಾ ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಗ್ರಾಮದ ವೆಂಕುಬಾಯಿ, ರೇಣುಕಾ, ರತ್ನಮ್ಮ, ಸುಶೀಲಮ್ಮ, ನೀಲಮ್ಮ, ಸೋಮಶೇಖರಾಚಾರಿ, ಸುಬ್ಬಣ್ಣ,ಚಲಪತಿ, ಕೃಷ್ಣಮೂರ್ತಿ, ಕೆ.ಎಸ್. ನಾರಾಯಣಸ್ವಾಮಿ, ಗೋಪಿ ಅವರನ್ನು ಸದಸ್ಯರಾಗಿ ನೇಮಿಸಲಾಯಿತು ಎಂದು ಶಾಲಾ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ತಿಳಿಸಿದ್ದಾರೆ.
ಕೃಷಿ ವಿಮಾ ಯೋಜನೆ ಜಾರಿ: ರಂಗಸ್ವಾಮಿ ಸಲಹೆ
ಮಾಲೂರು: ರಾಜ್ಯ ಸರ್ಕಾರವು 2013- 14ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ವಿಮಾ ಯೋಜನೆ ಜಾರಿಗೊಳಿಸಿದೆ. ತಾಲೂಕಿನ ಅರ್ಹ ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಹಾಯಕ ಕೃಷಿ ಅಧಿಕಾರಿ ರಂಗಸ್ವಾಮಿ ಮನವಿ ಮಾಡಿದ್ದಾರೆ.
ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದ ಸಂದರ್ಭ ವಿಮಾ ರಕ್ಷಣೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದ ರಂಗಸ್ವಾಮಿ ಅವರು, 2013ರ ಮುಂಗಾರು ಹಂಗಾಮಿನಲ್ಲಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಪ್ರವಾಹ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಚಂಡ ಮಾರುತಗಳಿಂದ ಬೆಳೆ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ ರೈತರು ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 48 ಗಂಟೆಗಳಗಾಗಿ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಇವರಿಗೆ ತಿಳಿಸಬೇಕು ಎಂದರು.