ಚೆಕ್ ನೀಡುವ ನೆಪದಲ್ಲಿ ರೈತರ ಸುಲಿಗೆ
ಕ.ಪ್ರ.ವಾರ್ತೆ, ಚಿಕ್ಕಬಳ್ಳಾಪುರ, ಜು.27
ಅರ್ಹ ಫಲಾನುಭವಿಗಳಿಗೆ ಸರ್ಕಾರ ನೀಡುವ ಸಬ್ಸಿಡಿ ಹಣದ ಚೆಕ್ ಸಿಗಬೇಕು. ಆದರೆ, ಖಾಸಗಿ ಏಜೆನ್ಸಿಗಳವರು ಕೆಲ ಅಧಿಕಾರಿಗಳ ಮೂಲಕ ಚೆಕ್ಗಳನ್ನು ಪಡೆದುಕೊಂಡು ಹೋಗಿ ಫಲಾನುಭವಿಗಳಿಂದ ಕಮಿಷನ್ ರೂಪದಲ್ಲಿ ಹಣ ಸುಲಿಗೆ ಮಾಡಿದ ನಂತರ ಚೆಕ್ಗಳನ್ನು ನೀಡುತ್ತಿದ್ದಾರೆ.
ನಗರದ ತಾ.ಪಂ. ಸಭಾಂಗಣದಲ್ಲಿ ಶನಿವಾರ ಶಾಸಕ ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಂತಹ ಗಂಭೀರ ಆರೋಪ ಕೇಳಿಬಂತು. ಅದು ಜನಪ್ರತಿನಿಧಿಗಳು ಮಾಡಿದ ಆರೋಪವಲ್ಲ. ಸ್ವತಃ ತಹಸೀಲ್ದಾರ್ ನಟೇಶ್ ಅವರೇ ಸಭೆಯ ಗಮನ ಸೆಳೆದರು.
ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುತ್ತಿರುವ ಸವಲತ್ತುಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭ ಮಾತನಾಡಿದ ತಹಸೀಲ್ದಾರ್ ನಟೇಶ್, ಚೆಕ್ಗಳನ್ನು ನೀಡುವ ನೆಪದಲ್ಲಿ ರೈತರನ್ನು ಸುಲಿಗೆ ಮಾಡುವಂತಹ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ನಿಯಮಾನುಸಾರ ಫಲಾನುಭವಿಗಳಿಗೆ ಅಕೌಂಟ್ ಪೇ ಚೆಕ್ ಅನ್ನು ನೀಡಬೇಕು. ಆದರೆ, ಕೇವಲ ಚೆಕ್ನ ಮೇಲೆ 2 ಗೆರೆಗಳನ್ನು ಹಾಕಿಕೊಡಲಾಗುತ್ತಿದೆ. ಈ ಚೆಕ್ಗಳನ್ನು ಅಧಿಕಾರಿಗಳಿಂದ ಪಡೆದು ಹೋಗುವ ಖಾಸಗಿ ಏಜೆನ್ಸಿಗಳವರು. ನಾವು ನಮ್ಮ ಹಣ ಖರ್ಚು ಮಾಡಿ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇವೆ. ಚೆಕ್ ಬೇಕಾದರೆ ಹಣ ಕೊಡಿ ಎಂದು ಸುಲಿಗೆ ಮಾಡುತ್ತಿದ್ದಾರೆ ಎಂದರು.
2000 ಗಳ ಚೆಕ್ಗೆ 500 ವಸೂಲಿ, 10000 ಚೆಕ್ಗೆ ಎರಡ್ಮೂರು ಸಾವಿರ ರು.ಗಳ ಕಮಿಷನ್ ಪಡೆಯುತ್ತಾರೆ. ಹೀಗೆ ಗಣಪತಿ ಸೌಹಾರ್ದ ಸೊಸೈಟಿಯೊಂದು ಲಕ್ಷಾಂತರ ರು. ಸುಲಿಗೆ ಮಾಡಿದ್ದು ತನಿಖೆ ಕೈಗೊಂಡರೆ ಇಂತಹ ಪ್ರಕರಣಗಳು ಹೆಚ್ಚಿಗೆ ಬೆಳಕಿಗೆ ಬರುತ್ತವೆ ಎಂದು ತಿಳಿಸಿದರು. ಮಧ್ಯೆ ಪ್ರವೇಶಿಸಿದ ಶಾಸಕ ಸುಧಾಕರ್, ಖಾಸಗಿ ಏಜೆನ್ಸಿ ಅಥವಾ ವ್ಯಕ್ತಿಗಳಿಗೆ ಚೆಕ್ಗ್ಳನ್ನು ಏಕೆ ನೀಡುತ್ತೀರಿ ಕಡ್ಡಾಯವಾಗಿ ಫಲಾನುಭವಿಗಳಿಗೆ ಅಕೌಂಟ್ ಪೇ ಚೆಕ್ಗಳನ್ನೇ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಡ್ಡಾಯವಾಗಿ ನಾಮಫಲಕ: ಸಬ್ರಿಜಿಸ್ಟ್ರಾರ್ ಕಚೇರಿಯ ಪ್ರಗತಿ ಬಗ್ಗೆ ಮಾಹಿತಿ ತಿಳಿದುಕೊಂಡ ಶಾಸಕ ಕೆ.ಸುಧಾಕರ್, ಸರ್ಕಾರಕ್ಕೆ ಲಾಭ ತಂದು ಕೊಡುವ ಸಬ್ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಡ್ಡಾಯವಾಗಿ ಜನರಿಗೆ ಶುಲ್ಕ, ಸೇವೆ ಬಗ್ಗೆ ತಿಳಿಸುವ ನಾಮಫಲಕಗಳನ್ನು ಅಳವಡಿಸಬೇಕು. ಅಲ್ಲದೇ ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಬೇಕು. ಇದಕ್ಕಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಮಧ್ಯವರ್ತಿಗಳ ಹಾವಳಿಯ ಬಗ್ಗೆ ದೂರು ಬರಬಾರದು. ತಾವು ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ದೂರುಗಳು ಕೇಳಿ ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾಯಿಗಳ ಕಡಿತ: ಪ್ರಸ್ತುತ ತಿಂಗಳಲ್ಲಿ 19 ಜನರಿಗೆ, ಈ ವರ್ಷದಲ್ಲಿ ಸುಮಾರು 300 ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿದೆ. ಕಾನೂನು ಪ್ರಕಾರ ನಾಯಿಗಳನ್ನು ಕೊಲ್ಲುವಂತಿಲ್ಲ. ಸಂತಾನಹರಣ ಶಸ್ತ್ರ ಚಿಕಿತ್ಸೆಯ ಮೂಲಕ ಕಡಿವಾಣ ಹಾಕಲು ಅವಕಾಶವಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದಾಗ, ನಗರದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದೆ. ರಾತ್ರಿ 7 ಗಂಟೆಯಾಯಿತೆಂದರೆ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ. ಸಾಮೂಹಿಕವಾಗಿ ನಾಯಿಗಳು ದಾಳಿ ಮಾಡುತ್ತೇವೆ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ಜನರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆದು ಸಮಸ್ಯೆಯನ್ನು ಬಗೆಹರಿಸಬೇಕೆಂದು ತಾ.ಪಂ.ಅಧ್ಯಕ್ಷ ಓಬಳೇಶಪ್ಪ ಒತ್ತಾಯಿಸಿದರು. ತಾಲೂಕಿನಲ್ಲಿನ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಒಂದು ಕೇಂದ್ರದಲ್ಲಿ ಮಾತ್ರ ಆಸ್ಪತ್ರೆಯ ವೈದ್ಯರು ಸ್ಥಳೀಯವಾಗಿ ಉಳಿದುಕೊಳ್ಳುತ್ತಾರೆ ಎಂಬ ತಾಲೂಕು ಆರೋಗ್ಯಾಧಿಕಾರಿಗಳ ಉತ್ತರಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕಾರ್ಯ ನಿರ್ವಹಿಸುವ ಕಡೆಯೇ ವೈದ್ಯರು ಉಳಿದುಕೊಳ್ಳಬೇಕು. ಬೆಂಗಳೂರಿನಿಂದ, ಚಿಂತಾಮಣಿಯಿಂದ ವೈದ್ಯರು ಬರುತ್ತಾರೆ ಎಂದರೆ ಕೇಳಿಲಿಕ್ಕಾಗುವುದಿಲ್ಲ. ಸಮಸ್ಯೆಗಳನ್ನು ಚರ್ಚಿಸಲು ಆದಷ್ಟು ಬೇಗ ವೈದ್ಯರ ಸಭೆಯನ್ನು ಕರೆಯುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಸದಸ್ಯೆ ಅನಿತಾ ರವೀಂದ್ರ ರೆಡ್ಡಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ್ದರು.