ಜನರನ್ನು ದನಗಳಂತೆ ತುಂಬಿಸಿಕೊಳ್ಳುವ ಖಾಸಗಿ ವಾಹನ: ಕಣ್ಮುಚ್ಚಿ ಕುಳಿತ ಪೊಲೀಸ್
ಚಿಂತಾಮಣಿ: ಖಾಸಗಿ ವಾಹನಗಳು ಗ್ರಾಮಾಂತರ ಪ್ರದೇಶಗಳಲ್ಲಿ ರಾಜಾರೋಷವಾಗಿ ಸಂಚರಿಸಿ ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದರೂ ಕಂಡು ಕಾಣದಂತಿರುವ ಅಧಿಕಾರಿಗಳ ಧೋರಣೆ ವಿರುದ್ಧ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತಿರುಗಿ ಬಿದ್ದರು.
ತಾಲೂಕಿನ ಎನ್.ಕೊತ್ತೂರು ಮಾರ್ಗವಾಗಿ ಕೋಟಗಲ್, ಕುರುಮಾರ್ಲಹಳ್ಳಿ, ದೊಡ್ಡಹಳ್ಳಿ ಮುಖಾಂತರ ಟಾಟಾ ಎಸ್ ಹಾಗೂ ತ್ರಿಚಕ್ರ ವಾಹನಗಳು ಪ್ರಯಾಣಿಕರನ್ನು ಬಲವಂತದಿಂದ ದನಗಳಂತೆ ತುಂಬಿಕೊಂಡು ಹೋಗುತ್ತಿದ್ದರೂ ಸ್ಥಳೀಯ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಾಗಲಿ ಅಥವಾ ಸ್ಥಳೀಯ ಪೊಲೀಸರ ನಿರ್ಲಕ್ಷ್ಯದಿಂದ ಅಮಾಯಕ ನಿರ್ವಾಹಕನೊಬ್ಬನು ಹಲ್ಲೆಗೊಳಗಾಗಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆಯೆಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸ್ಥಳಕ್ಕಾಗಮಿಸಿದ ಘಟಕದ ವ್ಯವಸ್ಥಾಪಕ ಶಾಂತಕುಮಾರ್ ಹಾಗೂ ಪೊಲೀಸರ ವಿರುದ್ಧ ಕಿಡಿಕಾರಿದರು.
ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಜನರನ್ನು ಸಾಗಿಸುವ ಖಾಸಗಿ ವಾಹನಗಳಿಗೆ ಕಡಿವಾಣ ಹಾಕಿ ಮುಗ್ಧ ಅಮಾಯಕ ಜನಸಾಮಾನ್ಯರ ಪ್ರಾಣಗಳನ್ನು ಉಳಿಸಬೇಕೆಂದು ನೂರಾರು ಗ್ರಾಮಸ್ಥರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.