ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿಗೆ ಆಕ್ರೋಶ

Srinivasa Murthy VN
Updated On : 28 Jul 2013, 1:01 am

ಕ.ಪ್ರ.ವಾರ್ತೆ ಕೋಲಾರ ಜು.27
ರಾಜ್ಯ ಸರ್ಕಾರವು ಪಂಚಾಯತ್‌ರಾಜ್ ಕಾಯಿದೆಗೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಶನಿವಾರ ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲೂಕಿನ ಗ್ರಾಮ ಪಂಚಾಯಿತಿಗಳ ಚುನಾಯಿತ ಮಹಿಳಾ ಸದಸ್ಯರ ಸಂಘದಿಂದ ಪ್ರತಿಭಟನೆ ನಡೆಯಿತು.
ನಗರದ ನಚಿಕೇತ ನಿಲಯದಿಂದ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಅಧಿಕಾರ ನೀಡದೆ ಎರಡು ವಾರ್ಡ್ ಸಭೆ ಮತ್ತು ಗ್ರಾಮಸಭೆ ನಡೆಸದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಅನರ್ಹಗೊಳಿಸುವ ಸಂಬಂಧ ಪಂಚಾಯಿತ್‌ರಾಜ್ ಕಾಯಿದೆಗೆ ತಿದ್ದುಪಡಿ ಮಾಡಿರುವುದು ಸರಿಯಲ್ಲವೆಂದು ಪ್ರತಿಪಾದಿಸಿದರು.
ಗ್ರಾಮ ಸಭೆ ಹಾಗೂ ವಾರ್ಡ್ ಸಭೆ ಜನರ ಹಕ್ಕು, ಅದನ್ನು ಸಂಘಟಿಸುವುದು ಅತಿ ಅಗತ್ಯದ ಕಾರ್ಯ, ಈ ಬಗ್ಗೆ ಸರ್ಕಾರದ ಕಾಳಜಿಯನ್ನು ಸ್ವಾಗತಿಸುತ್ತೇವೆ. ಆದರೆ ಗ್ರಾಮ ಸಭೆಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಾರದಿರುವುದಕ್ಕೆ ಕೇವಲ ಜನಪ್ರತಿನಿಧಿಗಳು ಮಾತ್ರ ಕಾರಣರವೇ ಇಲ್ಲವೇ ಬೇರೆ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಸರ್ಕಾರ ಪತ್ತೆ ಮಾಡಿ ನಂತರ ತಿದ್ದುಪಡಿ ತಂದಿದ್ದರೆ ಸೂಕ್ತವಾಗಿರುತ್ತಿತ್ತು ಎಂದು ತಿಳಿಸಿದ್ದಾರೆ.
ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುವ ಸರ್ಕಾರ ಗ್ರಾಮ ಪಂಚಾಯಿತಿಗಳಲ್ಲಿ ಇರುವ ಸಮಸ್ಯೆ ನಿವಾರಣೆಗೆ ಮೊದಲ ಅದ್ಯತೆ ನೀಡಬೇಕು, ಗ್ರಾಮ ಸಭೆ ಮತ್ತು ವಾರ್ಡ್ ಸಭೆ ಪರಿಣಾಮಕಾರಿಯಾಗಬೇಕಾದರೆ ಗಾಂಧಿ ಹೇಳಿದ ರೀತಿಯಲ್ಲಿ ಗ್ರಾಮ ಪಂಚಾಯತ್ ಒಂದು ಪರಿಪೂರ್ಣಸ್ವಯಂ ಸಹಕಾರಿ ನೆಲೆ ಪಡೆಯಬೇಕಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದಿ. ರಾಜೀವ್ ಗಾಂಧಿ ಹೇಳಿದ ಸ್ಥಳೀಯ ಆಡಳಿತ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ರಾಜಕೀಯ ಅಧಿಕಾರ ಪಡೆಯಬೇಕಾಗಿದೆ. ನಾವು ಕೇವಲ ಗ್ರಾಮ ಮತ್ತು ವಾರ್ಡ್ ಸಭೆಗೆ ಸಶಕ್ತತೆಯನ್ನು ತುಂಬಿ ಪಂಚಾಯ್ತಿಗಳ ಕೈ ಕಾಲು ಕಟ್ಟಿ ಹಾಕಿ ಕೆಲಸ ಮಾಡಿ ಎಂದರೆ ಅದು ಸಾಧ್ಯವಿಲ್ಲದ ಕೆಲಸ ಎಂದು ಟೀಕಿಸಿದರು.
ಗ್ರಾಮ ಮತ್ತು ವಾರ್ಡ್ ಸಭೆಗೆ ಕೇವಲ ನಿರ್ಣಯ ಮಾಡುವ ಸಮಸ್ಯೆ ಸಂಗ್ರಹಿಸುವ, ಫಲಾನುಭವಿಗಳ ಪಟ್ಟಿ ಮಾಡುವ ಒಂದು ವ್ಯವಸ್ಥೆ ಮಾತ್ರ ಆಗುತ್ತದೆ. ಅದನ್ನು ಪರಿಹರಿಸಲು ಸಂಪನ್ಮೂಲ ನೀಡುವ, ಕಾರ್ಯಕ್ರಮ ರೂಪಿಸುವ ಅಧಿಕಾರ, ಸಂಪನ್ಮೂಲಗಳನ್ನು ನಿರ್ಧರಿಸುವವರು ಮತ್ಯಾರೋ ಆದಾಗ ಈ ಸಭೆಗಳು ಪರಿಣಾಮಕಾರಿ ಆಗುವುದು ಹೇಗೆ ಮತ್ತು ಯಾವ ಭರವಸೆಯ ಮೇಲೆ ಜನರು ಈ ಸಭೆಗಳಲ್ಲಿ ಭಾಗವಹಿಸುತ್ತಾರೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಸರ್ಕಾರ ಒಂದು ತುರ್ತು ಅಧ್ಯಯನ ನಡೆಸುವ ಸಂಬಂಧ ಶಾಸಕರು, ಅಧಿಕಾರಿಗಳು, ಪ್ರಜಾಪ್ರಭುತ್ವ ವಿಕೇಂದ್ರೀಕರಣದ ಪರಿಣಿತರು, ಸ್ಥಳೀಯ ಸರ್ಕಾರಿ ಪ್ರತಿನಿಧಿಗಳನ್ನು ಒಳಗೊಂಡಿರುವ ಒಂದು ಸಮಿತಿ ರಚಿಸಿ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಮಹಿಳಾ ಜನಪ್ರತಿನಿಧಿಗಳ ಸಂಘದ ಕರ್ನಾಟಕ ಜಿಲ್ಲಾ ಸಂಯೋಜಕಿ ಗೌರಿ, ಬೈರಕೂರು ಗ್ರಾ.ಪಂ. ಅಧ್ಯಕ್ಷೆ ಎಸ್. ಮಂಜುಳಾ, ಸದಸ್ಯರಾದ ಸರಸ್ವತಮ್ಮ, ರತ್ನಮ್ಮ, ಲತಾ, ಲಕ್ಷ್ಮೀದೇವಮ್ಮ, ರೈತ ಸಂಘದ ಮುಖಂಡ ಹೂವಳ್ಳಿ ನಾಗರಾಜ್, ರೈತ ಸಂಘದ ಜಿಲ್ಲಾ ಸಂಚಾಲಕ ಶ್ರೀನಿವಾಸಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement