'ಸಾಧನೆಗೆ ಉತ್ತಮ ಗುರು, ಗುರಿ ಮುಖ್ಯ'
ಬಂಗಾರಪೇಟೆ: ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಿಗೆ ಯಾವುದೇ ಉನ್ನತ ಮಟ್ಟದ ಸಾಧನೆ ಮಾಡಲು ಗುರಿ ಮತ್ತು ಗುರುವಿನ ನೆರವು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು ಗುರಿ ಇಟ್ಟುಕೊಂಡು ಮುನ್ನಡೆಯಬೇಕೆಂದು ಶನೈಶ್ಚರ ವಿದ್ಯಾ ಸಂಸ್ಥೆಯ ಅಧ್ಯಕ್ಷ ನಂದ ಅಭಿಪ್ರಾಯಪಟ್ಟರು.
ತಾಲೂಕಿನ ಕೀಲುಕೊಪ್ಪದ ಶನೈಶ್ಚರ ಕನ್ನಡ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ದಿ. ಆರ್ಕಾಟ್ ಚಂದ್ರಣ್ಣ ಸ್ಮರರ್ಣಾಥ ಶಾಲಾ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮಾಂತರ ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ದಿ. ಚಂದ್ರಣ್ಣ ಅವರ ಕುಟುಂಬ ಲೇಖನಿ ಸಾಮಗ್ರಿಗಳನ್ನು ವಿತರಿಸುತ್ತಿದೆ. ಈ ಮೂಲಕ ಬಡ ಮಕ್ಕಳಿಗೆ ಅನುಕುಲ ಕಲ್ಪಿಸುತ್ತಿದೆ. ಮಕ್ಕಳು ದಾನಿಗಳಿಂದ ಸಿಗುವ ಸೌಲಭ್ಯ ಬಳಸಿಕೊಂಡು ಮುಂದೆ ಬರಬೇಕು. ಸರ್ಕಾರಿ ಶಾಲೆಗಳಲ್ಲಿ ಇಂದು ಉತ್ತಮ ಗುಣಮಟ್ಟದ ಬೋಧನೆ ಕೊಡಲಾಗುತ್ತಿದೆ. ಆದರೂ, ಪೋಷಕರು ಇಂಗ್ಲಿಷ್ ವ್ಯಾಮೋಹದಿಂದಾಗಿ ಕಾನ್ವೆಂಟ್ ಶಾಲೆಗತ ಮುಖ ಮಾಡುತ್ತಿರುವುದನ್ನು ವಿಷಾದಿಸಿದರು.
ಬೆಂಗಳೂರಿನ ದಾನಿಗಳಾದ ರಾಘವೇಂದ್ರ, ಅಭಿಷೇಕ್ ಮುಂದಿನ ವರ್ಷದಿಂದ ಶಾಲೆಗೆ ಬೇಕಾದ ಅಗತ್ಯ ಅನುಕೂಲಗಳನ್ನು ತಾವು ಕಲ್ಪಿಸಿಕೊಡುವ ಭರವಸೆ ನೀಡಿದರು. ಸಂಸ್ಥೆ ಉಪಾಧ್ಯಕ್ಷ ನಾರಾಯಣಪ್ಪ, ಜಂಟಿ ಕಾರ್ಯದರ್ಶಿ ಸತ್ಯಭಾಮ, ನಂದಿನಿ, ಅರುಣ್, ಶಿಕ್ಷಕರಾದ ಎಚ್.ಎಲ್. ಆನಂದ್, ರಂಗಣ ಇದ್ದರು.
ಶಾಲೆಗಳಿಗೆ ಸಸಿ ವಿತರಿಸಲು ಆದೇಶ
ಮುಳಬಾಗಲು: ಶಾಲಾ ಆವರಣದಲ್ಲಿ ಗಿಡ ಬೆಳೆಸಲು ಎನ್‌ಆರ್‌ಇಜಿ ಯೋಜನೆಯಡಿ ಸಸಿಗಳನ್ನು ನೀಡಲು ಅರಣ್ಯಾಧಿಕಾರಿಗಳಿಗೆ ಕೋಲಾರ ಜಿ.ಪಂ. ಅಧ್ಯಕ್ಷೆ ಚೌಡೇಶ್ವರಿ ರಾಮು ಸೂಚಿಸಿದರು.
ತಾ.ಪಂ. ಕಚೇರಿಯಲ್ಲಿ ಗುರುವಾರ ತಾಲೂಕು ಅಭಿವೃದ್ಧಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಸಸಿ ನೀಡುವಾಗ ಕಾಂಪೌಂಡ್ ಇರುವ ಶಾಲೆಗಳಿಗೆ ಆದ್ಯತೆ ನೀಡಲು ಸೂಚಿಸಿದರು. ಬಿಸಿಯೂಟಕ್ಕೆ ಅನುಕೂಲವಾಗುವಂತೆ ನುಗ್ಗೆ ಸಸಿಗಳನ್ನು ಆದ್ಯತೆ ಮೇರೆಗೆ ನೀಡಲು ಸೂಚಿಸಿದರು. ಮಳೆ ಹಿನ್ನಡೆಯಿಂದ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಹಿನ್ನಡೆಯಾಗಿದೆ. ವಾಡಿಕೆಯಂತೆ 204 ಮಿ.ಮೀ. ಮಳೆ ಬರಬೇಕಾಗಿತ್ತು. ಆದರೆ, 152 ಮಿ.ಮೀ. ಮಳೆ ಬಂದಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು. ಜಿ.ಪಂ. ಸದಸ್ಯರಾದ ಶ್ರೀನಿವಾಸ್, ಅಲುಮೇಲಮ್ಮ ರಾಜಗೋಪಾಲ್ ಇಒ ಡಾ.ರಮಾನಂದ್ ಭಾಗವಹಿಸಿದ್ದರು.