ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಆಜಾದ್'
ಚಿಕ್ಕಬಳ್ಳಾಪುರ: ಸ್ವಾತಂತ್ರ್ಯ ಹೋರಾಟಗಾರರ ಚಂದ್ರಶೇಖರ್ ಆಜಾದ್ ಅವರು ಯುವ ಪೀಳಿಗೆಗೆ ಆದರ್ಶ ವ್ಯಕ್ತಿ. ಅವರ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅನ್ವಯ ಮಾಡಿಕೊಂಡು ಒಳ್ಳೆಯ ದಾರಿಯಲ್ಲಿ ನಡೆಯಬೇಕೆಂದು ಉಪವಿಭಾಗಾಧಿಕಾರಿ ಶಾಂತಲಾ ಸಲಹೆ ನೀಡಿದರು.
ನಗರದ ಶ್ರೀರಾಮ ವರದ ಸಭಾ ಭವನದಲ್ಲಿ ಬಿಜೆಪಿ ವತಿಯಿಂದ ಕಾರ್ಗಿಲ್ ವಿಜಯದ ದಿನ ಮತ್ತು ಚಂದ್ರಶೇಖರ್ ಆಜಾದ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಚಂದ್ರಶೇಖರ್ ಆಜಾದ್ ಅವರ ಇತಿಹಾಸ ತಿಳಿದರೆ ಸಾಕು ಹೆಮ್ಮೆಯಾಗುತ್ತದೆ. ಅವರು ಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದವರು. ಬ್ರಿಟಿಷರ ವಿರುದ್ಧ ಸಿಡಿದೆದ್ದು ದೇಶಕ್ಕೆ ಸ್ವಾತಂತ್ರ್ಯ ಕೊಡಿಸಬೇಕೆಂದು ಹೋರಾಟ ನಡೆಸಿದರು. ತಮ್ಮ ಪ್ರಾಣದ ಹಂಗನ್ನು ತೊರೆದಿದ್ದ ಅವರ ವ್ಯಕ್ತಿತ್ವ, ಧೈರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಟ್ಟ ದಾರಿಯಲ್ಲಿ ನಡೆದುಕೊಂಡಾಗ ಬೇರೆಯವರಿಗೆ ನಷ್ಟವಾಗುವುದಿಲ್ಲ. ಬದಲಿಗೆ ಕೆಟ್ಟ ದಾರಿಯಲ್ಲಿ ನಡೆದುಕೊಳ್ಳುವವರೇ ಕೊನೆಗೆ ಪಶ್ಚತ್ತಾಪ ಅನುಭವಿಸಬೇಕಾಗುತ್ತದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ಕುಮಾರ್ ಮಾತನಾಡಿ, ದೇಶಕ್ಕಾಗಿ ಹೋರಾಡುವವರನ್ನು ಸ್ಮರಿಸಿ ಅವರ ಹೆಸರಿನಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಶ್ಲಾಘನೀಯ. ಮಹತ್ತರವಾದ ರಕ್ತದಾನ ಕಾರ್ಯಕ್ರಮದ ಮೂಲಕ ರಕ್ತದ ಕೊರತೆ ನೀಗಿಸಲು ಮುಂದಾಗಿರುವಂತಹುದು ಸಹ ಮಹತ್ತರವಾದುದು ಎಂದ ಅವರು, ಚಂದ್ರಶೇಖರ್ ಅಜಾದ್ ಅವರ ಬಗ್ಗೆ ಗುಣಗಾನ ಮಾಡಿದರು.
ಬಿಜೆಪಿ ಮುಖಂಡರು, ಪೊಲೀಸರು ಸೇರಿ ಹಲವರು ರಕ್ತದಾನ ಮಾಡಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಾಯಣ ರೆಡ್ಡಿ, ಮುಖಂಡರಾದ ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ ಗುಪ್ತ ಇದ್ದರು.