ಅಂಬೇಡ್ಕರ್ ನಗರದ 30 ನೇ ವಾರ್ಡ್ ಚುನಾವಣೆ: ಶೇ. 85 ಮತದಾನ
ಚಿಕ್ಕಬಳ್ಳಾಪುರ: ನಗರದ ಚಾಮರಾಜಪೇಟೆಯ ಅಂಬೇಡ್ಕರ್ ನಗರದ 30 ನೇ ವಾರ್ಡಿನಲ್ಲಿ ಭಾನುವಾರ ಶಾಂತಿಯುತವಾಗಿ ನಗರಸಭಾ ಚುನಾವಣೆ ನಡೆಯಿತು. ಶೇ.85.2 ರಷ್ಟು ಮತದಾನವಾಗಿದೆ. ವಿಧಾನಸಭೆ ಚುನಾವಣೆಗೆ ಮುಂಚೆ ರಾಜ್ಯದಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಿತು. ಅದೇ ರೀತಿ ನಗರದ 31 ವಾರ್ಡಿಗಳಿಗೆ ಮಾರ್ಚ್ 7 ರಂದು ನಡೆಯಿತಾದರೂ ನಗರದ 30 ನೇ ವಾರ್ಡಿನ ಅಂಬೇಡ್ಕರ್ ನಗರದ ನಿವಾಸಿಗಳು ರೈಲ್ವೆ ಇಲಾಖೆ ಹಳ್ಳಿ ನಿರ್ಮಾಣಕ್ಕಾಗಿ ತಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಅಂಬೇಡ್ಕರ್ ನಗರದ ನಿವಾಸಿಗಳ ಮನೆಗಳನ್ನು ಏಕಾಏಕಿ ತೆರವುಗೊಳಿಸಲು ರೈಲ್ವೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದರಿಂದ ವಾರ್ಡ್ ನಿವಾಸಿಗಳು ಸರ್ಕಾರ ಇಲ್ಲಿನ ನಿವಾಸಿಗಳಿಗೆ ಬೇರೆಡೆ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು, ಅಲ್ಲಿವರೆಗೂ ನಾವು ಚುನಾವಣಾ ಬಹಿಷ್ಕಾರ ಹಾಕುತ್ತೇವೆ ಎಂದು ಚುನಾವಣೆಗೆ ವಾರ್ಡಿನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಎಲ್ಲರೂ ನಾಮ ಪತ್ರಗಳನ್ನು ವಾಪಸ್ಸು ಪಡೆದಿದ್ದನ್ನು ಸ್ಮರಿಸಬಹುದು.
ನಗರದ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಸುಮಾರು ಆರು ತಿಂಗಳ ಬಳಿಕ ಭಾನುವಾರ ವಾರ್ಡಿನ ಸದಸ್ಯನ ಆಯ್ಕೆಗೆ ಮತದಾನ ನಡೆದಿದ್ದು, ಬಹುತೇಕ ಶಾಂತಿಯುತ ಮತದಾನವಾಗಿದೆ. ವಾರ್ಡಿನ ಒಟ್ಟು 2,211 ಮಂದಿ ಮತದಾರರ ಪೈಕಿ 1,136 ಮಂದಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
30 ನೇ ವಾರ್ಡಿನ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಪಕ್ಷೇತರ ನಡುವೆ ಸ್ಫರ್ಧೆ ನಡೆದಿದ್ದು. ಕಳೆದ ಬಾರಿ 30 ನೇ ವಾರ್ಡಿನ ಸದಸ್ಯನಾಗಿ ಆಯ್ಕೆಯಾಗಿದ್ದ ಮಿಲ್ಟನ್ ವೆಂಕಟೇಶ್ ಈ ಬಾರಿಯೂ ಕಾಂಗ್ರೆಸ್ನಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರೇ, ಪಕ್ಷೇತರ ಅಭ್ಯರ್ಥಿಯಾಗಿ ಶ್ರೀನಿವಾಸ್ ಆಟೋ ಚಿಹ್ನೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಹಾಗೂ ಪಕ್ಷೇತರ ನಡುವಿನ ಸ್ಪರ್ಧೆಯಲ್ಲಿ ಮತದಾರ ಯಾರ ಕೈ ಹಿಡಿಯಲ್ಲಿದ್ದಾನೆ ಎಂಬುದು ಕುತೂಹಲ ಮೂಡಿಸಿದೆ.