ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಿ
ಶ್ರೀನಿವಾಸಪುರ: ಪೊಲೀಸ್ ಠಾಣೆಗೆ ದೂರನ್ನು ತರುವ ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ದೂರಿನ ಅನ್ವಯ ತನಿಖೆ ನಡೆಸಿ ನಂತರ ಮೊಕದ್ದಮೆ ದಾಖಲಿಸಿ ನ್ಯಾಯಾಲಯದ ಮುಂದಿಡಿ ಎಂದು ಶ್ರೀನಿವಾಸಪುರ ಪ್ರಥಮ ದರ್ಜೆ ನ್ಯಾ ಡಿ.ಆರ್. ಮಂಜುನಾಥರವರು ಪೊಲೀಸರಿಗೆ ಸಲಹೆ ನೀಡಿದರು.
ಅವರು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ವಕೀಲರ ಸಂಘ, ಶಿಕ್ಷಣ ಇಲಾಖೆ, ತಾಲೂಕು ಪಂಚಾಯ್ತಿ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮತ್ತು ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯದ ಪ್ರವಾಸ ಅಂಗವಾಗಿ ಕಾನೂನು ಅರಿವು ಮತ್ತು ಕಾನೂನು ನೆರವು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪೊಲೀಸರು ವಿವೇಚನ ಶಕ್ತಿಯಿಂದ ಕರ್ತವ್ಯ ನಿರ್ವಹಿಸಬೇಕು ಮತ್ತು ಹದಿಹರೆಯದ ವಯಸ್ಸಿನವರ ಮೇಲೆ ಕೇಸು ದಾಖಲಿಸುವುದಕ್ಕಿಂತ ಮೊದಲು ಅವರಿಗೆ ಕಾನೂನಿನ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿ ಅವರ ಮನಸ್ಸು ಪರಿವರ್ತನೆಗೊಳ್ಳುವಂತೆ ಮಾಡಬೇಕೆಂದರು.
ವಕೀಲರಾದ ಕೆ. ಶಿವಪ್ಪ, ಪಿ.ಆರ್. ವೆಂಕಟರೆಡ್ಡಿ, ಪಿ.ಸಿ. ನಾರಾಯಣಸ್ವಾಮಿ, ಮುರಳಿ ಮೋಹನ್ರೆಡ್ಡಿ ವೆಂಕಟೇಶ್ ಪ್ರಸಾದ್, ಹಾಗೂ ಸರ್ಕಾರಿ ಅಭಿಯೋಜಕರಾದ ಜೆ.ಆರ್. ರಮೇಶ್ರವರು ಉಪನ್ಯಾಸ ಮಾಡಿದರು.
ಸರ್ಕಲ್ ಇನ್ಸ್ಪೆಕ್ಟರ್ ಜಿ. ಶಿವಪ್ರಸಾದ್, ವಕೀಲರ ಸಂಘದ ಅಧ್ಯಕ್ಷರಾದ ಟಿ. ವೆಂಕಟೇಶ್, ನ್ಯಾಯಾಲಯಾದ ಸಿಬ್ಬಂದಿ ರೂಪಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಶ್ರೀನಿವಾಸಪುರ ಠಾಣೆ, ಗೌನಿಪಲ್ಲಿ ಠಾಣೆ, ರಾಯಲ್ಪಾಡು ಠಾಣೆಯ ಎಲ್ಲಾ ಪೊಲೀಸರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾನೂನಿನ ಅರಿವವನ್ನು ಪಡೆದುಕೊಂಡರು.