ನಿರ್ವಾಹಕನ ಮೇಲೆ ಹಲ್ಲೆ : ಕಾರ್ಮಿಕರ ಪ್ರತಿಭಟನೆ
ಚಿಂತಾಮಣಿ: ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ಕೆಎಸ್‌ಆರ್‌ಟಿಸಿ ಘಟಕದ ಕಾರ್ಮಿಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಸುಜ್ಜನಹಳ್ಳಿ ಗ್ರಾಮದಲ್ಲಿ ಖಾಸಗಿ ವಾಹನ ಮಾಲೀಕ ನಟರಾಜ್ ನಿರ್ವಾಹಕ ರವಿ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು, ರವಿಗೆ ರಕ್ಷಣೆ ನೀಡಿ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ಭಾನುವಾರ ಚಿಂತಾಮಣಿ ಕೆಎಸ್‌ಆರ್‌ಟಿಸಿ ಘಟಕದ ನೂರಾರು ಕಾರ್ಮಿಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪೊಲೀಸರು ಆರೋಪಿಯನ್ನು ಬಂಧಿಸಲು ಮೀನಮೇಷ ಎಣಿಸುತ್ತಿರುವ ಬಗ್ಗೆ ಹಾಗೂ ಹಲ್ಲೆಗೊಳಗಾದ ರವಿಗೆ ನ್ಯಾಯ ಒದಗಿಸಲು ವಿಫಲಗೊಂಡಿರುವ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಕೂಡಲೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕು. ಇಲ್ಲವಾದ ಪಕ್ಷದಲ್ಲಿ ಕೆ.ಎಸ್.ಆರ್.ಟಿ.ಸಿ ಎಲ್ಲಾ ಚಾಲಕ ಹಾಗೂ ನಿರ್ವಾಹಕರು ಸೋಮವಾರ ಬೆಳಗಿನ ಜಾವದಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಪೊಲೀಸ್ ಠಾಣೆ ಆವರಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆಂದು ಚಿಂತಾಮಣಿ ಘಟಕದ ಎಲ್ಲಾ ನೌಕರರು ಆಗ್ರಹಿಸಿದ್ದಾರೆ.
ಇಂದು ಸಿ.ಬೈರೇಗೌಡರ ಪುಣ್ಯತಿಥಿ ಪ್ರಯುಕ್ತ ಸಮಾರಂಭ
ಕೋಲಾರ: ತಾಲೂಕಿನ ತೊರದೇವಂಡಹಳ್ಳಿಯ ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜು.29ರಂದು ಬೆಳಿಗ್ಗೆ 11 ಗಂಟೆಗೆ ಮಾಜಿ ಸಚಿವ ದಿವಂಗತ ಸಿ.ಬೈರೇಗೌಡರ 10ನೇ ಪುಣ್ಯತಿಥಿ ಅಂಗವಾಗಿ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಿ.ಬೈರೇಗೌಡ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಕಾರ್ಯದರ್ಶಿ ವಿ. ಕೃಷ್ಣಾರೆಡ್ಡಿ ತಿಳಿಸಿದ್ದಾರೆ. 2013-14ನೇ ಸಾಲಿನ ಸಿಬಿಐಟಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿದ್ದು ಕೃಷಿ ಸಚಿವ ಕೃಷ್ಣಬೈರೇಗೌಡರು ಕಾರ್ಯಕ್ರಮ ಉದ್ಘಾಟಿಸಿ, ಮಾಜಿ ಸಚಿವ ಹಾಗೂ ಸಿಬಿಇಸಿಟಿ ಅಧ್ಯಕ್ಷ ಕೆ. ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸುವರು, ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃಷಿ ಸಚಿವ ಕೃಷ್ಣಬೈರೇಗೌಡರು ಜಿಲ್ಲೆಗೆ ಎರಡನೇ ಬಾರಿಗೆ ಭೇಟಿ ನೀಡುತ್ತಿದ್ದರೂ, ಕೋಲಾರ ತಾಲೂಕಿಗೆ ಇದು ಅವರ ಪ್ರಥಮ ಭೇಟಿಯಾಗಿದೆ.