ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೋಡಿ ಲೋಕಾಯುಕ್ತರೇ ನಮ್ ಕೋಲಾರ

Srinivasa Murthy VN
Updated On : 29 Jul 2013, 12:09 pm

-ಪಾ.ಶ್ರೀ.ಅನಂತರಾಮ್
ಕೋಲಾರ: ಭ್ರಷ್ಟಾಚಾರವಷ್ಟೇ ಅಲ್ಲದೆ ದಿನನಿತ್ಯ ಕಾಡುವ ಹತ್ತಾರು ಸಮಸ್ಯೆಗಳಿಂದ ನಲುಗುತ್ತಿರುವ ಕೋಲಾರಕ್ಕೆ ಪ್ರಥಮ ಬಾರಿಗೆ ಲೋಕಾಯುಕ್ತ ನ್ಯಾ. ಡಾ.ವೈ.ಭಾಸ್ಕರ್ ರಾವ್ ಆಗಮಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಕೆಲ ಇಲಾಖೆಗಳ ಅಧಿಕಾರಿಗಳ ಎದೆಯಲ್ಲಿ ನಡುಕ ಉಂಟಾಗಿದೆ.
ಜಿಲ್ಲೆಯಲ್ಲಿ ನಡೆದಿರುವ ಕಳಪೆ ಕಾಮಗಾರಿ, ನಕಲಿ ಬಿಲ್ಲುಗಳ ಜಾಲಕ್ಕೆ ಅಧಿಕಾರಿಗಳು ಮಾತ್ರ ಹೊಣೆಗಾರರಾಗಿಲ್ಲ. ಜನಪ್ರತಿನಿಧಿಗಳು, ಗುತ್ತಿಗೆದಾರರು ಕಾರಣವಾಗಿರುವುದರಿಂದ ಲೋಕಾಯುಕ್ತರಿಗೆ ಜಿಲ್ಲೆಯ ಸಮಸ್ಯೆಗಳನ್ನು ಅರಿತು ಮೇಜರ್ ಸರ್ಜರಿ ಮಾಡುವುದಕ್ಕೆ ಬಹುಶಃ ಒಂದು ದಿನ ಸಾಕಾಗುವುದಿಲ್ಲ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಕೇವಲ ಭ್ರಷ್ಟ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸುವ ಅಧಿಕಾರದ ಜತೆಗೆ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸದ ಹಾಗೂ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಜೈಲಿಗೆ ಕಳುಹಿಸುವ ಪರಮಾಧಿಕಾರವಿರುವುದರಿಂದ ಲೋಕಾಯುಕ್ತರು ಸಾರ್ವಜನಿಕರು ನೀಡುವ ದೂರುಗಳನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತಾರೆಂಬ ನಂಬಿಕೆಯಿಂದ ಜನತೆ ದೂರುಗಳ ಸಮೇತ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಕೆಲ ದೂರುದಾರರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು, ಅಕ್ರಮ ವ್ಯವಹಾರಗಳಿಗೆ ರಕ್ಷಣೆ ಪಡೆಯಲು ಅಧಿಕಾರಿಗಳಿಗೆ ಧಮಕಿ ಹಾಕುತ್ತಿದ್ದಾರೆನ್ನಲಾಗಿದ್ದು ಲೋಕಾಯುಕ್ತರು ತಮ್ಮ ಸಿಬ್ಬಂದಿಯ ಮೂಲಕ ಅರ್ಜಿದಾರರ ಬಗ್ಗೆ ಮಾಹಿತಿ ಪಡೆದು ದುರುದ್ದೇಶದಿಂದ ದೂರು ನೀಡುವವರ ವಿರುದ್ಧವೂ ಕ್ರಮಕ್ಕೆ ಮುಂದಾಗಬೇಕಾಗಿದೆ.
ಅಕ್ರಮ ಮರಳುಗಾರಿಕೆ, ಕಲ್ಲು ಗಣಿಗಾರಿಕೆ, ನರೇಗಾ, ರಸ್ತೆ ಕಾಮಗಾರಿಗಳ ವಿರುದ್ಧ ನೀಡುವ ದೂರುಗಳನ್ನು ಲೋಕಾಯುಕ್ತರು ಖುದ್ಧು ಪರಿಶೀಲನೆ ಮಾಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ವಿರುದ್ಧ ಹೆಚ್ಚು ದೂರುಗಳು ನೀಡುವ ನಿರೀಕ್ಷೆಯಿದೆ.
ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ, ಆರೋಗ್ಯ ಇಲಾಖೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿನ ಕರ್ಮಕಾಂಡ, ನಗರಸಭೆ ಮತ್ತು ಪುರಸಭೆಗಳಲ್ಲಿ ದುರಾಡಳಿತ, ಕಂದಾಯ ಇಲಾಖೆಯಲ್ಲಿ ಬಡವರ ಶೋಷಣೆ ಮುಂತಾದ ವಿಚಾರಗಳ ಬಗ್ಗೆ ಲೋಕಾಯುಕ್ತರಿಗೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸುವವರಿದ್ದು ಲೋಕಾಯುಕ್ತ ನ್ಯಾಯಮೂರ್ತಿಗಳು ಪ್ರಮುಖ ಇಲಾಖೆಗಳಿಗೆ ಚುರುಕು ಮುಟ್ಟಿಸಿ ಜಿಲ್ಲೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಬುನಾದಿ ಹಾಕಬೇಕಾಗಿದೆ.
ರೋಗಿಗಳಿಗೆ ಅನ್ಯಾಯ: ಕೋಲಾರ ಜಿಲ್ಲಾ ಆಸ್ಪತ್ರೆ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಡಿ.ಗ್ರೂಪ್ ನೌಕರರ ಕೊರತೆಯಿಂದ ರೋಗಿಗಳಿಗೆ ಅನ್ಯಾಯವಾಗುತ್ತಿದೆ, ರೋಗಿಗಳ ಬೇಡಿಕೆಗೆ ತಕ್ಕಷ್ಟು ಗುಣಮಟ್ಟದ ಔಷಧಿಗಳು ಸಿಗುತ್ತಿಲ್ಲ, ಮಹಾರಾಜರ ಕಾಲದಲ್ಲಿ 260 ಹಾಸಿಗೆಗಳಿಗೆ ತಕ್ಕಷ್ಟು ಸಿಬ್ಬಂದಿಯನ್ನು ಒದಗಿಸಿದ್ದ ಸರ್ಕಾರ 2003ರಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ 450 ಹಾಸಿಗೆಗಳ ವ್ಯವಸ್ಥೆಗೆ ಆದೇಶ ನೀಡಿದ್ದರೂ ಸಿಬ್ಬಂದಿಯ ಕೊರತೆಯನ್ನು ಮಾತ್ರ ನಿವಾರಣೆ ಮಾಡಿಲ್ಲ.
2005ರಿಂದ ಈವರೆಗೆ ನಗರದಲ್ಲಿ ಹಾಕಿರುವ ಸಿಮೆಂಟ್ ರಸ್ತೆಗಳ ಕಾಮಗಾರಿಯನ್ನು ಸಹ ಲೋಕಾಯುಕ್ತರು ಖುದ್ದು ಪರಿಶೀಲಿಸಿ ತಪ್ಪು ಮಾಡಿರುವವರಿಗೆ ಶಿಕ್ಷೆ ವಿಧಿಸಬೇಕಾಗಿದೆ. ಕೆಲ ಮಧ್ಯವರ್ತಿಗಳು ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಉದ್ದೇಶದಿಂದ ದೂರುಗಳನ್ನು ದಾಖಲಿಸಲು ಪ್ರಯತ್ನಿಸುತ್ತಿದ್ದು ಕಲ್ಲು ಗಣಿಗಾರಿಕೆಗೆ ಪರವಾನಗಿ ಪಡೆಯಲು, ಸರ್ಕಾರಿ ಭೂಮಿಯನ್ನು ಕಬಳಿಸಲು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿರುವ ಡೋಂಗಿ ವ್ಯಕ್ತಿಗಳ ವಿರುದ್ಧವೂ ಲೋಕಾಯುಕ್ತರು ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತಾದರೆ ಮಾತ್ರ ಜಿಲ್ಲೆಗೆ ಒಳ್ಳೆಯದಾಗುತ್ತದೆ.
ಈಗಾಗಲೇ ಕೆಲ ಕಚೇರಿಗಳಲ್ಲಿ ಲೋಕಾಯುಕ್ತರ ಭೇಟಿ ಹಿನ್ನೆಲೆಯಲ್ಲಿ ಕಡತಗಳ ವಿಲೇವಾರಿ, ಸ್ವಚ್ಛತಾ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿನ ಕೊಳಕು ತೆರವುಗೊಳಿಸಲು ಅಲ್ಲಿನ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಆಹಾರ ಇಲಾಖೆ, ನರೇಗಾ ಅಧಿಕಾರಿಗಳು ಹಾಗೂ ಮಧ್ಯಾಹ್ನದ ಬಿಸಿ ಊಟದ ಯೋಜನೆಯ ಅಧಿಕಾರಿಗಳು ಸಹ ಲೋಕಾಯುಕ್ತರ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಲು ಹರ ಸಾಹಸ ಮಾಡುತ್ತಿದ್ದಾರೆ.
ಲೋಕಾಯುಕ್ತರ ಭೇಟಿಯ ಹಿನ್ನಲೆಯಲ್ಲಿ ಈಗಾಗಲೇ ಬೆಂಗಳೂರಿನಿಂದ ಬಂದಿರುವ ಕೆಲ ಅಧಿಕಾರಿಗಳು ಕುಂದು ಕೊರತೆ ಸಭೆಯನ್ನು ಯಶಸ್ವಿಯಾಗಿ ನಡೆಸುವುದಕ್ಕೆ ತಾಲೀಮು ನಡೆಸಿದ್ದಾರೆ. ಜಿಲ್ಲಾ ಲೋಕಾಯುಕ್ತ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಕೆಲ ಇಲಾಖೆಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ಕರೆದೊಯ್ಯುವ ಸಂಬಂಧ ರಹಸ್ಯ ಕಾರ್ಯಸೂಚಿಯನ್ನು ಸಹ ಸಿದ್ಧಪಡಿಸಿರುವುದರಿಂದ ಯಾವ ಅಧಿಕಾರಿಗೆ ಗ್ರಹಚಾರ ಕಾದಿದೆಯೋ ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement