ಬಿಸಿಯೂಟ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹ
ಕ.ಪ್ರ. ವಾರ್ತೆ ಕೋಲಾರ ಜು.28
ಅತ್ಯಂತ ಕಡಿಮೆ ವೇತನ ಪಡೆದು ರಾಜ್ಯ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರ ವೇತನವನ್ನು ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಮುಂದಿನ ನವೆಂಬರ್ ತಿಂಗಳಲ್ಲಿ ವಿಧಾನಸೌಧ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್. ವರಲಕ್ಷ್ಮೀ ಎಚ್ಚರಿಕೆ ನೀಡಿದರು.
ಅಕ್ಷರ ದಾಸೋಹ ನೌಕರರ ಸಂಘದ ಕೋಲಾರ ಜಿಲ್ಲಾ 2ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಸಿಯೂಟ ನೌಕರರಿಗೆ ಕೇವಲ 1000 ರು. ವೇತನವನ್ನು ನೀಡಲಾಗುತ್ತಿದೆ.
ಈ ವೇತನದಲ್ಲಿ ಬಿಸಿಯೂಟ ನೌಕರರು ಜೀವನ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ದಿನಕ್ಕೆ 175 ರು. ನೀಡಲಾಗುತ್ತಿದೆ. ಆದರೆ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಸಿದ್ಧಪಡಿಸುತ್ತಿರುವ ಬಿಸಿಯೂಟ ನೌಕರರಿಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಿ.ಎಸ್. ನಾಗರತ್ನ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ವಿ.ಗೀತಾ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಹೊನ್ನೇನಹಳ್ಳಿ ಯಲ್ಲಪ್ಪ, ಬಿಸಿಯೂಟ ನೌಕರರ ಸಂಘದ ಜಲ್ಲಾ ಕಾರ್ಯದರ್ಶಿ ಸುಜಾತ, ಬಿಸಿಯೂಟ ನೌಕರರ ಸಂಘದ ಮುಖಂಡರಾದ ಜಯಲಕ್ಷೀ ಶ್ರೀನಿವಾಸ್, ರವೀಂದ್ರ, ಲಲಿತಮ್ಮ, ಮತ್ತಿತರರು ಇದ್ದರು.
ಗೋಸಾಯಿ ಮಠದ ಸ್ವಾಮೀಜಿಗೆ ಶ್ರದ್ಧಾಂಜಲಿ
ಮಾಲೂರು: ಭರಮಸಾಗರ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಬೆಂಗಳೂರಿನ ಶ್ರೀ ಗೋಸಾಯಿ ಮಹಾ ಸಂಸ್ಥಾನದ ಮಠದ ಶ್ರೀ್ರ ಸುರೇಶ್ವರಾನಂದ ಭಾರತೀ ಸ್ವಾಮೀಜಿರವರಿಗೆ ತಾಲೂಕು ಮರಾಠ ಪರಿಷತ್ ಭಾನುವಾರಪಟ್ಟಣದ ಮಾರಿಕಾಂಭ ಮಹಾದ್ವಾರದ ಬಳಿ ಶ್ರದ್ಧಾಂಜಲಿ ಸಭೆ ನಡೆಸಿದರು.
ಒಂದು ನಿಮಿಷ ಮೌನ ಆಚರಿಸಿದ ಸ್ವಾಮಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಮರಾಠ ಸಮುದಾಯದ ಮುಖಂಡ ಬಾಬುರಾವ್ ಸಾಳುಂಕೆ ಶ್ರೀಗಳ ಅಕಾಲಿಕ ಮರಣ ಮರಾಠ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಆದಿ ಚುಂಚುನಗಿರಿ ಮಠದ ಶ್ರೀಗಳಾಗಿದ್ದ ದಿ. ಬಾಲಗಂಗಾಧರ ನಾಥ ಸ್ವಾಮೀಜಿಯ ಅತ್ಮೀಯರಾಗಿದ್ದ ಸುರೇಶ್ವರಾನಂದ ಸ್ವಾಮೀಜಿ ರವರು ಮರಾಠ ಸಮುದಾಯದ ಮಾರ್ಗದರ್ಶಕರಾಗಿದ್ದರು. ಅವರ ಸಾವನ್ನು ಭರಿಸುವ ಶಕ್ತಿ ನಮ್ಮ ಸಾಮುದಾಯಕ್ಕೆ ಸಿಗಲಿ ಎಂದರು.