ವಿದೇಶ ಪ್ರಯಾಣ ಮಾಡಲು ಆರ್ಥಿಕ ಸಹಾಯ
ಚಿಂತಾಮಣಿ: ವಿದೇಶ ಪ್ರಯಾಣ ಮಾಡಲು ಕ್ರೀಡಾಪಟುಗೆ ಆರ್ಥಿಕ ಸಹಾಯ ಹಸ್ತವನ್ನು ಒಕ್ಕಲಿಗ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ನೀಡಿ ಮಾನವೀಯತೆ ತೋರಿದ್ದಾರೆ.
ಪಟ್ಟಣದಲ್ಲಿನ ಟ್ಯಾಂಕ್ ಬಂಡ್ ರಸ್ತೆಯ ನಿವಾಸಿ ವಿ. ಮಂಜುನಾಥ್ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಓಟದ ಸ್ಪರ್ಧೆಯಲ್ಲಿ ವಿಜೇತರಾಗಿ ಹಲವಾರು ಪದಕಗಳನ್ನು ಪಡೆದಿದ್ದಾರೆ. ಆದರೆ ಮುಂದಿನ ವಾರ ನಡೆಯಲಿರುವ ಶ್ರೀಲಂಕಾ ದೇಶದಲ್ಲಿ ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಆರ್ಥಿಕ ಪರಿಸ್ಥಿತಿಯಿಂದ ಸಂಕಷ್ಟದಲ್ಲಿದ್ದ ಮಂಜುನಾಥ್ ನೆರವಿಗೆ ಸ್ಪಂದಿಸಿದ ತಾಲೂಕು ವಕ್ಕಲಿಗ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಸ್ಪಂದಿಸಿ ಪ್ರಯಾಣ ವೆಚ್ಚವನ್ನು ಬರಿಸಲು ಸುಮಾರು 12 ಸಾವಿರ ರು. ನಗದು ಹಣವನ್ನು ನೀಡಿ ಮಾನವೀಯತೆ ತೋರಿದ್ದಾರೆ.
ನಕಲಿ ಕೀಟ ನಾಶಕ ಮಾರಾಟ: ವ್ಯಕ್ತಿಯ ವಿಚಾರಣೆ
ಕನ್ನಡಪ್ರಭ ವಾರ್ತೆಕೋಲಾರ ಜು.28
ಜಿಲ್ಲೆಯ ತರಕಾರಿ ಬೆಳೆಯುವ ರೈತರನ್ನು ಗುರಿಯಾಗಿಸಿಕೊಂಡು ವ್ಯಾಪಕವಾಗಿ ನಕಲಿ ಕೀಟನಾಶಕಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸಿದ ಹಿನ್ನೆಲೆಯಲ್ಲಿ ತಾಲೂಕು ಕೃಷಿ ಅಧಿಕಾರಿಗಳು ತಾಲೂಕಿನ ಅಂಕತಟ್ನಹಳ್ಳಿ ಗ್ರಾಮದ ಪ್ರಕಾಶ್ ಎಂಬುವರಿಂದ ಕೀಟ ನಾಶಕ ಔಷಧಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗಾಗಿ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಜು.27ರಂದು ರೈತ ಸಂಘದ ಮುಖಂಡರು ಪ್ರತಿಕಾಗೋಷ್ಠಿ ನಡೆಸಿ ನಕಲಿ ಕೀಟ ನಾಶಕ ಮಾರಾಟದ ಬಗ್ಗೆ ಆರೋಪಿಸಿದ್ದರು. ಅದೇ ದಿನ ರೈತ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣಗೌಡ ಅವರು ತಮ್ಮ ತೋಟದಲ್ಲಿ ಬೆಳೆಗಳಿಗೆ ರೋಗವಿದ್ದು ಔಷಧಿಬೇಕೆಂದು ಪ್ರಕಾಶ್ ಅವರಿಗೆ ದೂರವಾಣಿ ಕರೆ ಮಾಡಿ ತೋಟಕ್ಕೆ ಕರೆಸಿಕೊಂಡಾಗ ರೈತ ಮುಖಂಡರು ಔಷದಿ ಮಾರಾಟಗಾರನ್ನು ಹಿಡಿದು ತಾಲೂಕು ಕೃಷಿ ಅಧಿಕಾರಿ ಗಾಯತ್ರಿಯವರಿಗೆ ಒಪ್ಪಿಸಲಾಗಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಕಲಿ ಕೀಟನಾಶಕ ಮಾರಾಟದಲ್ಲಿ ಪ್ರಕಾಶ್ ಮಾತ್ರವಲ್ಲದೆ ಇನ್ನಿತರರು ಶಾಮೀಲು ಆಗಿದ್ದು, ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ರೈತ ಸಂಘದ ಜಿಲ್ಲಾ ಸಂಚಾಲಕ ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ.