ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಿಜೆಪಿಗೆ ಬಿಎಸ್‌ವೈ ವಾಪಸ್ಸಾದರೆ ಸ್ವಾಗತ

Srinivasa Murthy VN
Updated On : 26 Jun 2013, 12:23 pm

ಕ.ಪ್ರ.ವಾರ್ತೆ ಕೋಲಾರ ಜೂ. 25
ಮಾಜಿ ಮುಖ್ಯಮಂತ್ರಿ, ಕೆಜೆಪಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಮಾತೃ ಪಕ್ಷವಾದ ಬಿಜೆಪಿಗೆ ಬರುವುದಾದರೆ ಮುಕ್ತ ಮನಸ್ಸಿನಿಂದ ಸ್ವಾಗತ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ವಕ್ತಾರ ಡಿ.ಎಸ್.ವೀರಯ್ಯ ತಿಳಿಸಿದರು.
ತಾಲೂಕಿನ ಸೀಸಂದ್ರ ಮತ್ತು ರಾಮಸಂದ್ರದಲ್ಲಿ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ನಡೆಯುತ್ತಿರುವ ಚರಂಡಿ ಮತ್ತು ಸಮುದಾಯ ಭವನ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿದ ಬಳಿಕ ಬಿಜೆಪಿಗೆ ಸಾಕಷ್ಟು ನಷ್ಟ ಉಂಟಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನ ಗಳಿಸಲು ಆಗಿಲ್ಲ. ಅವರು ಮತ್ತೆ ಪಕ್ಷಕ್ಕೆ ಬಂದರೆ ಆನೆ ಬಲ ಬರಲಿದೆ ಎಂದು ಅಭಿಪ್ರಾಯಪಟ್ಟರು.
ಯಡಿಯೂರಪ್ಪ ಬರುವುದು ಬಿಡುವುದರ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ನಿರ್ಣಯ ಕೈಗೊಳ್ಳಲಿದ್ದು, ಇದಕ್ಕೆ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ತಲೆಬಾಗಲೇಬೇಕಾಗಿದೆ ಎಂದು ಹೇಳಿದರು.
ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ನರೇಂದ್ರ ಮೋದಿಯವರ ಬಗ್ಗೆ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ಉಂಟಾಗಿದೆ. ಇವರ ನಾಯಕತ್ವದಿಂದಾಗಿ ರಾಷ್ಟ್ರದಲ್ಲಿ ಬದಲಾವಣೆ ಗಾಳಿ ಜತೆಗೆ ಯುವಜನತೆಯಲ್ಲಿ ಹೊಸ ಉತ್ಸಾಹ ಮೂಡಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುವುದಲ್ಲದೆ, ಎನ್‌ಡಿಎ ನೇತೃತ್ವದ ಸರ್ಕಾರ ರಚನೆ ಆಗುವುದು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದಲ್ಲಿನ ಯುಪಿಎ ನೇತೃತ್ವದ ಕಾಂಗ್ರೆಸ್ಸ್‌ರ್ಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಸಿಬಿಐ ಕಾಂಗ್ರೆಸ್ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ತಾವು ಕೋಲಾರ ಲೋಕಸಭಾ ಕ್ಷೇತ್ರದಿಂದ 2 ಬಾರಿ ಸ್ಪರ್ಧೆ ಮಾಡಿ ಸೋತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಲು ಉದ್ದೇಶಿಸಿದ್ದು, ಜನತೆ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದರು.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಆರು ಬಾರಿ ಸಂಸತ್‌ಗೆ ಆಯ್ಕೆಯಾಗಿ ಸಚಿವ ಸ್ಥಾನ ಹೊಂದಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಅವರಿಂದ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಅವರನ್ನು ಜನತೆ ಸೋಲಿಸಬೇಕೆಂದರು.
ಕಾಂಗ್ರೆಸ್ ಸರ್ಕಾರ ಪರಮಶಿವಯ್ಯ ವರದಿ ಅನುಷ್ಠಾನಗೊಳಿಸುವುದಾಗಿ ಹೇಳುತ್ತಿದ್ದು, ಕೂಡಲೇ ಜಿಲ್ಲೆಯ ಜನತೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಒದಗಿಸದಿದ್ದರೆ ಜನತೆ ದಂಗೆ ಏಳುತ್ತಾರೆಂದು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ 2006 ರಿಂದ ಇದುವರೆಗೂ ತಮ್ಮ ನಿಧಿಯಿಂದ ಸುಮಾರು 3 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ತಮ್ಮ ಅನುದಾನದಿಂದ ನಡೆದಿರುವ ಕಾಮಗಾರಿಯನ್ನು ವಾರಕ್ಕೊಮ್ಮೆ ಅಧಿಕಾರಿಗಳ ಜೊತೆ ತೆರಳಿ ಪರಿಶೀಲಿಸಲಾಗುವುದು ಎಂದು ತಿಳಿಸಿದ ಅವರು, ಬಾಕಿ ಇರುವ ಕಾಮಗಾರಿಗಳನ್ನು 7 ತಿಂಗಳಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಇಇ ಮಂಜುನಾಥ, ಗಾಂಧಿನಗರ ವೆಂಕಟೇಶ್, ರಂಗಾರೆಡ್ಡಿ, ಹೋಳೂರು ನಾರಾಯಣಸ್ವಾಮಿ, ಸೀಸಂದ್ರ ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement