ಮೂಲ ಸೌಕರ್ಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ
ಕೆಜಿಎಫ್: ನಗರದ ಆಂಡ್ರಸನ್ಪೇಟೆ ವ್ಯಾಪ್ತಿಯ ಮಸ್ಕಂ ಪ್ರದೇಶದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 230 ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕರು ಮೂಲ ಸೌಕರ್ಯ ಒದಗಿಸುತ್ತಿಲ್ಲ ಎಂದು ಆರೋಪಿಸಿ ಶಾಲಾ ಮಕ್ಕಳು ನಗರದ ಸೂರಜ್ಮುಲ್ ವೃತ್ತ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗ ರಸ್ತೆತಡೆ ಪ್ರತಿಭಟನೆ ನಡೆಸಿದರು.
ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯದ ಮುಖ್ಯ ಶಿಕ್ಷಕಿ ಮತ್ತು ವಾರ್ಡನ್ ಶಶಿಕಲಾ ಅವರು ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ, ಹೊದ್ದುಕೊಳ್ಳಲು ರಗ್ಗು ನೀಡುತ್ತಿಲ್ಲ, ಶೌಚಾಲಯ ದುರಸ್ತಿ ಮಾಡುತ್ತಿಲ್ಲ, ಕಳೆದ 15 ದಿನಗಳಿಂದ ಕುಡಿಯಲು ನೀರು ಪೂರೈಸುತ್ತಿಲ್ಲ, ಹೊರಗಿನವ ರಿಂದ ತಮಗೆ ಬೆದರಿಕೆ ಹಾಕಿಸುತ್ತಾರೆ, ತಮ್ಮ ಪೋಷಕರು ನೋಡಲು ಬಂದರೆ ದಬ್ಬಾಳಿಕೆ ನಡೆಸುತ್ತಾರೆ ಇವುಗಳನ್ನು ಪ್ರಶ್ನಿಸಿದರೆ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದು, ಇದರಿಂದ ರೊಚ್ಚಿಗೆದ್ದ ಶಾಲಾ ಮಕ್ಕಳು ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಮ್ಮ ಇಲಾಖೆಗೆ ಒಳಪಡುವುದಿಲ್ಲ, ಇದು ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಅದೇ ರೀತಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ವೈ.ಸಂಪಂಗಿ, ವಸತಿ ಶಾಲೆಯ ಮುಖ್ಯ ಶಿಕ್ಷಕಿಯೊಂದಿಗೆ ಮಾತನಾಡುವುದಾಗಿ ಶಾಲಾ ಮಕ್ಕಳನ್ನು ಸಮಾಧಾನಪಡಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ವಿದ್ಯಾರ್ಥಿಗಳೊಂದಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೃಷ್ಣಮೂರ್ತಿ ಮತ್ತು ಮಾಜಿ ಶಾಸಕ ವೈ.ಸಂಪಂಗಿ ಮುಖ್ಯ ಶಿಕ್ಷಕಿಯೊಂದಿಗೆ ಮಾತುಕತೆ ನಡೆಸಿ ಮುಂದಿನ 15 ದಿನದೊಳಗೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸುವಂತೆ ಸೂಚಿಸಿ ಮಕ್ಕಳೊಂದಿಗೆ ಸಹನೆಯಿಂದಿರಲು ತಿಳಿಸಿದ ಅವರು ಶಾಲಾ ಮಕ್ಕಳಿಗೆ ರಗ್ಗುಗಳನ್ನು ವಿತರಿಸಿದರು.