ಸಂತ್ರಸ್ತರಿಗಾಗಿ ಸಂಸದ ಪಿ.ಸಿ.ಮೋಹನ್ ನೇತೃತ್ವದಲ್ಲಿ ದೇಣಿಗೆ ಸಂಗ್ರಹ
ಚಿಂತಾಮಣಿ: ಉತ್ತರಾಖಂಡ ನೆರೆ ಸಂತ್ರಸ್ತರಿಗಾಗಿ ಬಿಜೆಪಿ ಸಂಸದ ಪಿ.ಸಿ.ಮೋಹನ್ ಪಟ್ಟಣದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು. ತಾಲೂಕು ಬಿಜೆಪಿ ಘಟಕದಿಂದ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪಿ.ಸಿ.ಮೋಹನ್ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಭಾರತೀಯ ಜನತಾ ಪಕ್ಷದಿಂದ ನೆರೆ ಸಂತ್ರಸ್ತರ ಸಹಾಯಾರ್ಥ ತಾವು ಪಟ್ಟಣಕ್ಕೆ ಆಗಮಿಸಿದ್ದು, ರಾಷ್ಟ್ರೀಯ ವಿಪತ್ತಿನ ಪರಿಹಾರದಲ್ಲಿ ಸಹಭಾಗಿಗಳಾಗಿ ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯಕಾರ್ಯಕಾರಣಿ ಸಮಿತಿ ಸದಸ್ಯ ಸತ್ಯನಾರಾಯಣ ಮಹೇಶ್ ಸಂಗ್ರಹವಾದ 36 ಸಾವಿರ 650 ರು.ಗಳನ್ನು ಜಮಾ ಮಾಡುವುದಾಗಿ ತಿಳಿಸಿದರು. ತಾ. ಬಿಜೆಪಿ ಅಧ್ಯಕ್ಷ ನಾ.ಶಂಕರ್, ಜಿಲ್ಲಾ ಉಪಾಧ್ಯಕ್ಷ ಬತ್ತಲಹಳ್ಳಿ ಶ್ರೀನಿವಾಸ್, ಮುಖಂಡ ಅರುಣಕುಮಾರ್, ಕಾಗತಿ ನಾಗರಾಜ್, ಶ್ರೀಧರ್, ಗೋವಿಂದರಾಜು, ವೆಂಕಟರವಣ,ನಾಗೇಶ್,ಮೂರ್ತಿ,ಪದ್ಮಮ್ಮ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದರು.
ಸಮ್ಮೇಳನದಲ್ಲಿ ಹಕ್ಕಿಯ ಪುಕ್ಕ ಕೃತಿ ಬಿಡುಗಡೆ
ಚಿಂತಾಮಣಿ: ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯುವ ಬರಹಗಾರ ಯರಮರೆಡ್ಡಿಹಳ್ಳಿ ವೆಂಕಟರವಣಪ್ಪ ರಚಿಸಿರುವ ಹಕ್ಕಿಯ ಪುಕ್ಕ ಕೃತಿಯನ್ನು ಜಾನಪದ ಕಲಾರತ್ನ ಆಲೂರು ನಾಗಪ್ಪ ಬಿಡುಗಡೆ ಮಾಡಿದರು. ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಸಮ್ಮೇಳನಾಧ್ಯಕ್ಷ ಕೋಟಗಲ್ ನಾಗಸುಬ್ರಮಣ್ಯಂ, ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್,ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ವೈ.ಎ.ನಾರಾಯಣಸ್ವಾಮಿ,ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್,ಕ್ಷೇತ್ರ ಶಿಕ್ಷಣಾಧಿಕಾರಿ.ಕೆ.ಜಿ.ರಂಗಯ್ಯ,ತಹಶೀಲ್ದಾರ್ ಎಂ.ಎನ್.ಮಂಜುನಾಥ್,ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಸ್.ನಾಗರಾಜ್, ಟಿ.ಎನ್.ರಾಜಗೋಪಾಲ್, ಕಸಾಪ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜು.3ರಿಂದ ಪಿಯುಸಿ ಪೂರಕ ಪರೀಕ್ಷೆ ಬಗ್ಗೆ ಮಾಹಿತಿ
ಕ.ಪ್ರ.ವಾರ್ತೆ ಮೈಸೂರು ಜೂ. 25
ಜು.3 ರಿಂದ 13 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಡಿಡಿಪಿಯು ಕೆ.ಎಂ. ಪುಟ್ಟು ಪ್ರಾಂಶುಪಾಲರಿಗೆ ಸೂಚಿಸಿದರು.
ಮಂಗಳವಾರ ನಗರದ ಮಹಾರಾಜ ಕಾಲೇಜಿನಲ್ಲಿ ನಡೆದ 2013-14ನೇ ಸಾಲಿನ ಪ್ರಾಂಶುಪಾಲರ ದ್ವಿತೀಯ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾಖಲಾತಿ, ಮೂಲಭೂತ ಸೌಕರ್ಯ, ವೇಳಾಪಟ್ಟಿ ಹಾಗೂ ಇನ್ನಿತರ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸಭೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಪಿಯು ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.
ರಸ್ತೆ ಅಭಿವೃದ್ಧಿ ಕಾಮಗಾರಿಗೆ ವರ್ತೂರ್ ಪ್ರಕಾಶ್ ಚಾಲನೆ
ಕ.ಪ್ರ.ವಾರ್ತೆ ಕೋಲಾರ ಜೂ. 25
ಮದ್ದೇರಿ ಪಂಚಾಯತಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಸುಮಾರು 35 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಆರ್. ವರ್ತೂರ್ ಪ್ರಕಾಶ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.ಮದ್ದೇರಿ ಪಂಚಾಯತಿಯ ದೇವರಹಳ್ಳಿ, ಕದಿರಿಪುರ, ಈರಗಸಂದ್ರ, ಬೆದ್ಲಿ, ಸೀತಪನಹಳ್ಳಿ, ಪಾಟಲೀಪುರ, ಚೋಳಘಟ್ಟ, ಮಣಿಯನಹಳ್ಳಿ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮದ್ದೇರಿ ಪಂಚಾಯತಿಯಲ್ಲಿ ಈಗಾಗಲೇ ಕೋಟ್ಯಂತರ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಉಳಿಕೆಯಿದ್ದ ಸಿಮೆಂಟ್ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. ಬೆಗ್ಲಿ ಪ್ರಕಾಶ್, ರಘುರಾಂ, ಎಪಿಎಂಸಿ ನಿರ್ದೇಶಕ ರಾಜಣ್ಣ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣೆಗೌಡ, ನಿರ್ದೇಶಕ ಜಂಭಾಪುರ ವೆಂಕಟರಾಮ್, ಡಿ.ವಿ. ಶ್ರೀನಿವಾಸ್, ನಾರಾಯಣಪ್ಪ, ಚೌಡಪ್ಪ, ರಾಜಣ್ಣ, ಮಲ್ಲಪ್ಪ, ಶ್ರೀರಾಮ್, ರಮೇಶ್, ದೇವರಾಜ್, ರಾಮಕೃಷ್ಣಪ್ಪ, ಮಂಜು ಇದ್ದರು.
ನಾಡಕಚೇರಿಗೆ ಜಿಪಂ ಸದಸ್ಯೆ ಭೇಟಿ
ಕ.ಪ್ರ.ವಾರ್ತೆ ಟೇಕಲ್ ಜೂ. 25
ಇಲ್ಲಿನ ನಾಡಕಚೇರಿಯಲ್ಲಿ ನಡೆಯುತ್ತಿರುವ ವಸೂಲಿ ದಂಧೆ ಕುರಿತು ಶಾಸಕ ಮಂಜುನಾಥಗೌಡ ಅವರ ಸೂಚನೆ ಮೇರೆಗೆ ಟೇಕಲ್ ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡರು ಮಂಗಳವಾರ ಬೆಳಗ್ಗೆ ನಾಡಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಕುರಿತು ಕನ್ನಡಪ್ರಭದಲ್ಲಿ 'ನಾಡಕಚೇರಿಯಲ್ಲಿ ವಸೂಲಿ ದಂಧೆ: ಸಾರ್ವಜನಿಕರ ಆಕ್ರೋಶ' ಎಂಬ ಶೀರ್ಷಿಕೆಯಡಿ ಜೂ. 25ರಂದು ಸಚಿತ್ರ ವರದಿ ಪ್ರಕಟಗೊಂಡಿತ್ತು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ರವಿಶಂಕರ್ ಅವರು ಪ್ರತಿಕ್ರಿಯಿಸಿ, ನಾನು ಟೇಕಲ್ ನಾಡಕಚೇರಿಗೆ ಬಂದು ಎರಡು ತಿಂಗಳಾಗಿದ್ದು, ಸರ್ಕಾರಿ ಕೆಲಸಕ್ಕೆ ಬಂದ ದಿನದಿಂದ ಇದುವರೆಗೂ ಒಂದು ನಯಾಪೈಸಾ ಲಂಚ ಸ್ವೀಕರಿಸಿಲ್ಲವೆಂದು ಸ್ಪಷ್ಟಪಡಿಸಿದರು. ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡರು ಮಾತನಾಡಿ, ತಾಲೂಕಿನಾದ್ಯಂತ ಶಾಸಕರಾದ ಮಂಜುನಾಥಗೌಡರು ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಅಧಿಕಾರಿಗಳು ಸ್ಪಂದಿಸಬೇಕೆಂದು ಈ ಹಿಂದೆಯೇ ಹೇಳಿದ್ದಾರೆ ಎಂದರು. ಗ್ರಾಮ ಲೆಕ್ಕಾಧಿಕಾರಿಗಳಾದ ನಾರಾಯಣಾಚಾರ್, ಪ್ರೇಮ, ಪ್ರಭಾರಿ ರೆವೆನ್ಯೂ ಇನ್ಸ್ಪೆಕ್ಟರ್ ಚನ್ನಮಲ್ಲಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ಗೌಡ, ಟೇಕಲ್ ಗ್ರಾಪಂ ಮಾಜಿ ಅಧ್ಯಕ್ಷರಾದ ಎಸ್.ಜಿ. ರಾಮಮೂರ್ತಿ, ರಾಮಕೃಷ್ಣಪ್ಪ, ಮುಖಂಡ ಟೇಕಲ್ ಆಂಜಿನಪ್ಪ ಇತರರು ಇದ್ದರು.
ಜೂ. 30ರಂದು ತರಬೇತಿ ಕಾರ್ಯಕ್ರಮ
ಮೈಸೂರು: ಎನ್ಐಇಯ ಪರಿಸರ ಪ್ರಚಾರ ಮಂಡಳಿ ಮತ್ತು ಶಕುಂತಲರಾವ್ ಸ್ಮಾರಕ ಕೃಷಿ ಉತ್ಥಾನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಪುಷ್ಪ ಮತ್ತು ಅಲಂಕಾರಿಕ ಸಸ್ಯಗಳ ಬೆಳೆಸುವಿಕೆ, ಪೋಷಣೆ ಮತ್ತು ಪ್ರದರ್ಶನ ಬಗ್ಗೆ ಸಮಗ್ರ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಯೋಜನೆಯ ಮೊದಲ ಹಂತವಾಗಿ ಪ್ರಾರಂಭಿಕ ತರಬೇತಿಯನ್ನು ಜೂ. 30ರ ಬೆಳಗ್ಗೆ 9 ಕ್ಕೆ ಎನ್ಐಇ ಗೋಲ್ಡನ್ ಜ್ಯುಬಿಲಿ ಕಾಂಪ್ಲೆಕ್ಸ್ನ ಆವರಣದಲ್ಲಿ ಏರ್ಪಡಿಸಿದೆ. ಆಸಕ್ತರು ಜೂ. 28 ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ದೂ 4004925.
ಗುಂಪು ಘರ್ಷಣೆ 6 ಮಂದಿಗೆ ಗಾಯ
ಕೋಲಾರ: ಎರಡು ಯವಕರ ಗುಂಪುಗಳ ನಡುವೆ ಘರ್ಷಣೆ ನಡೆದು ಆರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಕಾರಂಜಿ ಕಟ್ಟೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಒಂದು ಗುಂಪಿಗೆ ಸೇರಿದ ಭೋವಿ ಕಾಲೋನಿಯ ಸುಬ್ರಮಣಿ ರಾಜೇಶ್, ಪ್ರಶಾಂತ್ ಗಾಯಗೊಂಡು ಜಿಲ್ಲಾ ಎಸ್ಸೆನ್ನಾರ್ ಆಸ್ಪತ್ರೆ ಹಾಗೂ ಮತ್ತೊಂದು ಗುಂಪಿನ ಖಾದ್ರೀಪುರದ ನಿವಾಸಿಗಳಾದ ಮಂಜುನಾಥ್, ಕಿಲಾರಿಪೇಟೆಯ ಕಿನ್ನಪ್ಪಿ ಹಾಗೂ ಪುಟ್ಟ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ನೋಡಲು ಹೋಗಿದ್ದ ರಾಕೇಶ್ ಎಂಬುವರ ಮೇಲೂ ಕೆಲವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆಸ್ಪತ್ರೆಗಳ ಮುಂದೆ ಜಮಾಯಿಸಿದ್ದ ಜನರನ್ನು ನಗರದ ವೃತ್ತ ಪೊಲೀಸ್ ನಿರೀಕ್ಷಕ ಕೆ.ಎನ್.ರಮೇಶ್ ಅವರು ಚದುರಿಸಿದರು. ಘರ್ಷಣೆಗೆ ಖಚಿತ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಎರಡು ಗುಂಪಿನವರು ನೀಡಿರುವ ದೂರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಿಗಮ, ಮಂಡಳಿಗೆ ಅರ್ಜಿ: ನಾಳೆ ಕೊನೆ
ಮೈಸೂರು: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕಾರ್ಯಕರ್ತರು ನಿಗಮ. ಮಂಡಳಿ ನೇಮಕಾತಿ ಕೋರಿ ಮನವಿ ಸ್ವೀಕರಿಸಲು ಜೂ. 27ರವರೆಗೆ ಸಮಯ ನಿಗದಿ ಪಡಿಸಿದೆ ಎಂದು ಜಿಲ್ಲಾಧ್ಯಕ್ಷ ಆರ್. ಧರ್ಮಸೇನ ತಿಳಿಸಿದ್ದಾರೆ.
ಕೆಜಿಐಡಿ ಜಿಲ್ಲಾ ಕಚೇರಿ ಸ್ಥಳಾಂತರಿಸಿ
ಮೈಸೂರು: ನಗರದ ತೊಣಚಿಕೊಪ್ಪಲು ಸಾಹುಕಾರ್ ಚೆನ್ನಯ್ಯ ರಸ್ತೆಯ ಖಾಸಗಿ ಕಟ್ಟಡದಲ್ಲಿರುವ ಮೈಸೂರು ಕೆಜಿಐಡಿ ಇಲಾಖೆ ಜಿಲ್ಲಾ ಕಚೇರಿಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಪ್ರಜ್ಞಾವಂತ ಹಾಗೂ ಕಳಕಳಿಯುಳ್ಳ ನಾಗರಿಕರ ವೇದಿಕೆ ಸಂಚಾಲಕ ಎಂ.ಲಕ್ಷ್ಮಣ್ ಮನವಿ ಮಾಡಿದ್ದಾರೆ. ಹಾಲಿ ಇರುವ ಕಟ್ಟಡದಲ್ಲಿ ತಿಂಗಳಿಗೆ ಸುಮಾರು 50 ಸಾವಿರ ಬಾಡಿಗೆ ನೀಡುತ್ತಿದ್ದು, ಇದರಿಂದ ನೌಕರ ವರ್ಗದವರಿಗೆ ಅನಾನುಕೂಲವಾಗಿದೆ. ಹಾಲಿ ಕಟ್ಟಡ ವಾಸಿಸುವ ಕಟ್ಟಡವಾಗಿದ್ದು, ನೌಕರರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕಚೇರಿ 2ನೇ ಮಹಡಿಯಲ್ಲಿರುವುದರಿಂದ ವಯಸ್ಸಿನವರು ಮೆಟ್ಟಿಲು ಹತ್ತಲು ದುಸ್ತರಪಡಬೇಕಾಗಿದೆ. ಮೈಸೂರಿನ ಸುತ್ತಮುತ್ತ ತಾಲೂಕಿನಿಂದ ಬರುವ ನೌಕರರಿಗೆ ಸಾರಿಗೆ ಸೌಲಭ್ಯ ಇಲ್ಲ. ಸರ್ಕಾರಿ ನೌಕರರ ಪೈಕಿ ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೇಂದ್ರ ಸರ್ಕಾರ ರೂಪಿಸಿರುವ ಅಂಗವಿಕಲರ ಕಾಯಿದೆ ಪ್ರಕಾರ ಇವರಿಗೆ ನೆಲ ಮಹಡಿಗಳಲ್ಲಿ ಸರ್ಕಾರಿ ಸೌಲಭ್ಯ ದೊರಕಬೇಕಿದೆ ಎಂದು ಹೇಳಿದ್ದಾರೆ. ನಗರದ ಹೃದಯಭಾಗ, ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಿಗೆ ಬಹಳ ಸಮೀಪವಿರುವ ಕಾಡಾ ಕಚೇರಿಗೆ ಸ್ಥಳಾಂತರಿಸುವುದು ಸೂಕ್ತವಾಗಿದೆ. ಈ ಕಟ್ಟಡದಲ್ಲಿದ್ದ ಸಹಕಾರ ಸಂಘಗಳ ಕಚೇರಿಗಳು ಮಿನಿ ವಿಧಾನಸೌಧಕ್ಕೆ ಸ್ಥಳಾಂತರವಾಗಲಿದ್ದು, ಕೆಜಿಐಡಿಗೆ ಸ್ಥಳಾವಕಾಶ ದೊರಕಿದಂತಾಗುತ್ತದೆ. ಒಂದು ವೇಳೆ ಆಗದಿದ್ದರೆ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವುದು ಒಳ್ಳೆಯದು. ವರ್ಷಕ್ಕೆ ಸುಮಾರು 15 ಲಕ್ಷ ಬಾಡಿಗೆ ಉಳಿತಾಯವಾಗುವುದರೊಂದಿಗೆ ನೌಕರರ ಪ್ರಯಾಣಕ್ಕೆ ಸುಲಭವಾಗಲಿದೆ ಎಂದು ಅವರು ಕೋರಿದ್ದಾರೆ.
ಸಾಧನೆಗೆ ನಿಶ್ಚಿತ ಗುರಿ ಅವಶ್ಯ: ರಂಗನಾಥ್
ಗೌರಿಬಿದನೂರು: ದೇಶದ ಭವಿಷ್ಯ ರೂಪಿಸಬೇಕಾದರೆ ಅದು ಮಕ್ಕಳಿಂದ ಮಾತ್ರ ಸಾಧ್ಯ. ಬಡತನ ಕಲಿಕೆಗೆ ಎಂದು ಅಡ್ಡಿ ಮಾಡುವುದಿಲ್ಲ. ಜೀವನದಲ್ಲಿ ಸಾಧನೆ ಮಾಡಲು ಒಂದು ನಿಶ್ಚಿತವಾದ ಗುರಿ ಮತ್ತು ಅದನ್ನು ಪಾಲಿಸಲು ಉತ್ತಮ ಮಾರ್ಗದರ್ಶನ ನೀಡುವ ಒಬ್ಬ ಗುರು ಇದ್ದರೆ ಸಾಕು. ಏನನ್ನು ಬೇಕಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ವ್ಯವಸ್ಥಾಪಕ ಪಿವಿಎಸ್ ರಂಗನಾಥ್ ತಿಳಿಸಿದರು.
ಅವರು ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ಅವರ ಮುಂದಿನ ವ್ಯಾಸಂಗಕ್ಕೆ ನೆರವಾಗುವಂತೆ ಒಂದು ಸಾವಿರ ರು. ನಗದನ್ನು ಬಹುಮಾನ ನೀಡಿ ಮಾತನಾಡಿದರು.
ತಾಲೂಕಿಲ್ಲಿಯೇ ಅತಿ ಹೆಚ್ಚು ಅಂಕ ಪಡೆದು ಮೊದಲ ಸ್ಥಾನದಲ್ಲಿ ಸರ್ಕಾರಿ ಪ್ರೌಢಶಾಲೆ ಅಲ್ಲೀಪುರ ಶಾಲೆಯ ವಿದ್ಯಾರ್ಥಿ ನವೀನ್ಕುಮಾರ್, ದ್ವಿತೀಯ ಸ್ಥಾನದಲ್ಲಿ ಎಸ್ಎಸ್ಇಎ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪಿ.ಎನ್. ಗೌತಮಿ ಮತ್ತು ತೃತೀಯ ಸ್ಥಾನದಲ್ಲಿ ಎಸ್ಎಸ್ಇಎ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿನಯ್ ಬಹುಮಾನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಟಿ.ಸಿ.ದೊಡ್ಡೇಗೌಡ, ಹಿರಿಯ ಆಡಿಟರ್ ಎಸ್.ಆರ್. ಕಟ್ಟಿಮನಿ, ಬ್ಯಾಂಕ್ನ ಪೀಲ್ಡ್ ಆಫೀಸರ್ ಸುನೀಲ್ಕುಮಾರ್ ಮತ್ತು ಶಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
27ರಂದು ಉರುಸ್
ಚಿಂತಾಮಣಿ: ತಾಲೂಕಿನ ದೊಡ್ಡಗಂಜೂರು ಗ್ರಾಮಪಂಚಾಯ್ತಿಗೆ ಸೇರಿದ ಸಿದ್ದಿಮಠ ಗ್ರಾಮದಲ್ಲಿ ಜೂನ್ 27 ಗುರುವಾರ ಸಂಜೆ 7 ಗಂಟೆಗೆ ಖಾದ್ರಿ ದರ್ಗಾದಲ್ಲಿ ಉರುಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದು ದರ್ಗಾ ಸಮಿತಿ ಮುಖ್ಯಸ್ಥ ಸೈಯದ್ಪಾಷಾ ತಿಳಿಸಿದ್ದಾರೆ. ಜೂನ್ 28 ಶುಕ್ರವಾರ ರಾತ್ರಿ 9 ಗಂಟೆಗೆ ದರ್ಗಾ ಆವರಣದಲ್ಲಿ ಖವ್ವಾಲಿ ಏರ್ಪಡಿಸಲಾಗಿದ್ದು, ಇದರಲ್ಲಿ ಖ್ಯಾತ ಖವ್ವಾಲಿ ಗಾಯಕ ಉತ್ತರಪ್ರದೇಶದ ದೋಟಾಚಾಂದ್ ಸಲಾವುದ್ದೀನ್ ಹಾಗೂ ರಾಜ್ಯದ ಯಾಸ್ಮೀನ್ರಾಜ್ ಭಾಗವಹಿಸಲಿದ್ದಾರೆ.