ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

10 ಲಕ್ಷ ಪರಿಹಾರ ನೀಡಲು ಒತ್ತಾಯ

Srinivasa Murthy VN
Updated On : 26 Jun 2013, 11:36 am

ಕ.ಪ್ರ. ವಾರ್ತೆ ಕೋಲಾರ ಜೂ.26
ಆನೆಗಳ ದಾಳಿಗೆ ಸಿಲುಕಿ ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತಸಂಘದ ಮುಖಂಡರು ಅರಣ್ಯ ಸಚಿವರಾದ ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಿದರು.
ಕಾಡಾನೆಗಳ ದಾಳಿಯಿಂದ ಹಾನಿಗೊಳಗಾಗಿರುವ ಮಾಲೂರು ಹಾಗೂ ಹೊಸಕೋಟೆ ತಾಲೂಕಿನ ಗ್ರಾಮಗಳ ಪರಿಶೀಲನೆಗೆ ಆಗಮಿಸಿದ್ದ ಸಚಿವರಿಗೆ ಮನವಿ ಸಲ್ಲಿಸಿದ ಮುಖಂಡರು, ಕಳೆದ ಕೆಲವು ತಿಂಗಳಿಂದ ಕೋಲಾರ ಜಿಲ್ಲೆಯ ಗಡಿ ತಾಲೂಕುಗಳಾದ ಬಂಗಾರಪೇಟೆ ಮತ್ತು ಮಾಲೂರು ಆಸುಪಾಸಿನಲ್ಲಿ ಆನೆಗಳ ದಾಂಧಲೆ ಹೆಚ್ಚಾಗಿದ್ದು, ದಾಳಿಯಿಂದ ಅಮಾಯಕ ರೈತರು ಮೃತಪಟ್ಟು ಅವರ ಕುಟುಂಬಗಳು ಬೀದಿ ಪಾಲಾಗಿವೆ ಹಾಗೂ ಅಪಾರ ಬೆಳೆ ನಷ್ಟವಾಗಿದೆ ಎಂದು ತಿಳಿಸಿದರು.
ತಮಿಳುನಾಡಿನಿಂದ ಆನೆಗಳು ರಾಜ್ಯಕ್ಕೆ ನುಸುಳದಂತೆ ಗಡಿ ಭಾಗಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆನೆ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ಸಚಿವ ರಮಾನಾಥ ರೈ ಮಾತನಾಡಿ, ಗಡಿ ಪ್ರದೇಶದಲ್ಲಿ ಆನೆಗಳ ದಾಳಿ ನಿಯಂತ್ರಿಸಲು ಪೈಲೆಟ್ ಯೋಜನೆ ರೂಪಿಸಿ ದೊಡ್ಡ ಕಂದಕಗಳ ನಿರ್ಮಾಣ ಮಾಡಲಾಗುವುದು. ವಿದ್ಯುತ್ ಸೌರ ಬೇಲಿ ಅಳವಡಿಸಲಾಗುವುದು. ಆನೆಗಳ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಹಣವನ್ನು 10 ಲಕ್ಷ ನೀಡುವ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಬೆಳೆ ಹಾನಿಯಾಗಿರುವ ರೈತರಿಗೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹಸಿರುಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಪ್ರಧಾನ ಕಾರ್ಯದರ್ಶಿ ಅಶ್ವತ್ಥರೆಡ್ಡಿ, ಕಾನೂನು ಸಲಹೆಗಾರ ಗೋವಿಂದಪ್ಪ, ಮುಖಂಡರಾದ ಬೆಳಗಾನಹಳ್ಳಿ ಮಂಜುನಾಥ್, ದೊಡ್ನಹಳ್ಳಿ ಕೃಷ್ಣಪ್ಪ, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಅಬ್ಬಣಿ ನಾರಾಯಣಸ್ವಾಮಿ, ಸಿಂಗಂಡಹಳ್ಳಿ ಮಂಜುನಾಥ್, ಮಾಲೂರು ತಾಲೂಕು ಗೌರವಾಧ್ಯಕ್ಷ ದೊಡ್ಡಸಬ್ಬೇನಹಳ್ಳಿ ಡಿ.ಕೃಷ್ಣಪ್ಪ, ಎಸ್.ರಘುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement