ಕೃಷ್ಣಯ್ಯಶೆಟ್ಟಿ ರಾಜಕೀಯ ಸ್ಥಿತಿ ಡೋಲಾಯಮಾನ
-ಪಾ.ಶ್ರೀ.ಅನಂತರಾಮ್
ಕೋಲಾರ: ಮಾಲೂರಿನ ಮಾಜಿ ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿ ರಾಜಕೀಯ ಸ್ಥಿತಿ ಡೋಲಾಯಮಾನವಾಗಿದೆ.
ಇನ್ನು ಕೃಷ್ಣಯ್ಯಶೆಟ್ಟರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಲ್ಲಿ 2014ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಲಾಭವಾಗುವುದೆಂದು ಮೇ 13 ರಂದು ಶೆಟ್ಟರ ಕೈಗೆ ಕಾಂಗ್ರೆಸ್ ಬಾವುಟ ನೀಡಿದ್ದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೃಷ್ಣಯ್ಯಶೆಟ್ಟಿ ಮತ್ತು ಕೆ.ಎಚ್. ಮುನಿಯಪ್ಪ ಅವರ ಪ್ರಸ್ತುತ ರಾಜಕೀಯ ಹಾದಿಯಲ್ಲಿ ಕಲ್ಲು- ಮುಳ್ಳುಗಳು ಹೆಚ್ಚಾಗಿವೆ. ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿ ಸೋತಿರುವ ಶೆಟ್ಟರು ಕಾಂಗ್ರೆಸ್ ಪಕ್ಷದಲ್ಲಿ ಚೇತರಿಕೆ ಕಾಣಲು ಹೊಂದಿದ್ದ ಕನಸು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನೀಡಿರುವ ಹೇಳಿಕೆಯಿಂದ ಭಗ್ನಗೊಂಡಂತಾಗಿದೆ.
ಕೆಪಿಸಿಸಿ ಮತ್ತು ಏಐಸಿಸಿಯ ಅನುಮತಿ ಪಡೆಯದೆ ಕೃಷ್ಣಯ್ಯಶೆಟ್ಟಿ ಅವನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಕೆ.ಎಚ್. ಮುನಿಯಪ್ಪ ತೋರಿದ ಆತುರ ಬೀದಿಯಲ್ಲಿ ಹೋಗ್ತಿದ್ದ ಮಾರಮ್ಮನ್ನ ಹೆಗಲ ಮೇಲೆ ಕೂರಿಸಿಕೊಂಡಂತಾಗಿದೆ.
ಆರು ಬಾರಿ ಕೋಲಾರ ಕ್ಷೇತ್ರದಿಂದ ಸಂಸತ್ಗೆ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎಂಬ ಕೀರ್ತಿಗೆ ಪಾತ್ರರಾಗಿರುವ ಕೆ.ಎಚ್. ಮುನಿಯಪ್ಪ ಅವರ ನಿರ್ಧಾರಗಳು ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಹಿಡಿಸದಿರುವುದು ಗಮನಿಸಿದರೆ ಎಲ್ಲೋ ಏನೋ ಎಡವಟು ಆಗಿರುವಂತೆ ಕಾಣಬರುತ್ತಿದೆ.
ಮುನಿಯಪ್ಪ ಅವರ ಆದೇಶದ ಮೇರೆಗೆ ಮೇ 13ರಂದು ಮಾಲೂರಿನಲ್ಲಿ ಕೃಷ್ಣಯ್ಯಶೆಟ್ಟಿ ಸೇರ್ಪಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್ ಸಹ ಇಕ್ಕಟ್ಟಿಗೆ ಸಿಲುಕಿದ್ದಾರೆ. ತಮಗೆ ಕೆಪಿಸಿಸಿ ಕಡೆಯಿಂದ ಬಂದಿದ್ದ ನೋಟಿಸ್ಗೆ ಸಮಜಾಯಿಷಿ ನೀಡುವುದಕ್ಕೆ ಪರದಾಡಿದ್ದಾರೆ. ಪಕ್ಷದಲ್ಲಿ ತಮ್ಮ ಭವಿಷ್ಯ ಮುಂದೇನು ಎಂಬ ಚಿಂತೆಗೆ ಗುರಿಯಾಗಿದ್ದಾರೆ.
ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಮುಜರಾಯಿ ಸಚಿವರಾಗಿ ಕೆಲವೇ ತಿಂಗಳ ಕಾಲ ಅಧಿಕಾರ ನಡೆಸಿದ್ದ ಶೆಟ್ಟರು, ಎನ್.ಸೋಮಣ್ಣ ಅವರಿಗೆ ಸಚಿವ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆ ಉಂಟಾಯಿತು. ಜತೆಗೆ ಭೂ ಹಗರಣವೊಂದರಲ್ಲಿ ಜೈಲು ಪಾಲಾದ ಬಳಿಕ ರಾಜಕೀಯವಾಗಿ ಏಳು- ಬೀಳುಗಳನ್ನು ಕಾಣುತ್ತಿದ್ದಾರೆ.
ವಿಧಾನಸಭೆಗೆ ಮೂರನೇ ಬಾರಿಗೆ ಪ್ರವೇಶ ಮಾಡಲು ಬಿಜೆಪಿ ವರಿಷ್ಠರು ಟಿಕೆಟ್ ನಿರಾಕರಿಸಿದ್ದರಿಂದ ರಾಜಕೀಯದಿಂದಲೇ ನಿವೃತ್ತಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಅಭಿಮಾನಿಗಳ ಒತ್ತಡಕ್ಕೆ ಮಣಿದು ಪಕ್ಷೇತರರಾಗಿ ಸ್ಪರ್ಧಿಸಿ ಜೆಡಿಎಸ್ಗೆ ಮಂಜುನಾಥಗೌಡರ ವಿರುದ್ಧ ಸೋಲು ಕಂಡರು.
ವಿಧಾನಸಭಾ ಚುನಾವಣೆಗೆ ಮುನ್ನವೇ ಶೆಟ್ಟರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳುವುದಕ್ಕೆ ಕೆ.ಎಚ್. ಮುನಿಯಪ್ಪ ಪ್ರಯತ್ನಿಸಿದ್ದರಾದರೂ ವರಿಷ್ಠರು ಒಪ್ಪಲಿಲ್ಲ. ಜೆಡಿಎಸ್ ಸೇರುವುದಕ್ಕೂ ಶೆಟ್ಟರು ವಿಫಲ ಯತ್ನ ನಡೆಸಿದ್ದು ಈಗ ಗುಟ್ಟಾಗೇನು ಉಳಿದಿಲ್ಲ.
ಶೆಟ್ಟರು ಕೆಜಿಎಫ್ನ ಮಾಜಿ ಶಾಸಕ ವೈ.ಸಂಪಂಗಿ ರೀತಿಯಲ್ಲಿ ಕೊಂಚ ಜಾಣತನದಿಂದ ರಾಜಕಾರಣ ಮಾಡಿದಲ್ಲಿ ಪತ್ನಿಗೆ ಬಿಜೆಪಿ ಇಲ್ಲವೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲುವುದಕ್ಕೆ ದಾರಿ ಮಾಡಿಕೊಳ್ಳಬಹುದಿತ್ತು. ಆದರೆ, ಪಕ್ಷೇತರನಾಗಿ ನಿಂತು ಗೆದ್ದಲ್ಲಿ ಯಾವುದೇ ಪಕ್ಷದ ಸರ್ಕಾರ ಬಂದರೂ ನಿರ್ಣಾಯಕ ಪಾತ್ರ ವಹಿಸಬಹುದೆಂದು ಭಾವಿಸಿದ್ದ ಇವರಿಗೆ ಮತದಾರರು ಕೈಕೊಟ್ಟರು.
ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಶೆಟ್ಟರು ಬೆಂಗಳೂರಿನತ್ತ ಮುಖ ಮಾಡಿದ್ದರು. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 2 ಕ್ಷೇತ್ರಗಲ್ಲಿ ಮಾತ್ರ. ಇದರಿಂದ ತಮ್ಮ ರಾಜಕೀಯ ಭವಿಷ್ಯಕ್ಕೆ ಪೆಟ್ಟು ಬೀಳುವುದೆಂದು ಕೆ.ಎಚ್.ಮುನಿಯಪ್ಪ ಮಾಲೂರಿನಲ್ಲಿ ಶಕ್ತಿ ಪಡೆಯಲು ಕೃಷ್ಣಶೆಟ್ಟಿಯ್ಯ ಶೆಟ್ಟಿಗೆ ಗಾಳ ಬೀಸಿದರಲ್ಲದೆ, ಮುಳಬಾಗಲು ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸಮ್ಮುಖದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಮಾಡಿದರು.
ಇದೇ ನೀತಿ ಅಥವಾ ತಂತ್ರವನ್ನು ಕೃಷ್ಣಯ್ಯಶೆಟ್ಟಿ ವಿಚಾರದಲ್ಲೂ ಅನುಸರಿಸಿದ್ದಲ್ಲಿ ಗೊಂದಲ ಉಂಟಾಗುತ್ತಿರಲಿಲ್ಲ. ಮುನಿಯಪ್ಪ ಅವರ ಮಾತು ನಂಬಿ ಮೇ 13 ರಂದು ಮಾಲೂರಿನ ವೈಟ್ ಗಾರ್ಡನ್ನಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ ಶೆಟ್ಟರು ಎಲ್ಲೂ ಸಲ್ಲದಂತಾಗಿದ್ದಾರೆ. ಜೂ. 21ರಂದು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ಕೃಷ್ಣಯ್ಯಶೆಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಪಕ್ಷಕ್ಕೆ ಆನೆ ಬಲ ಬರುತ್ತದೆ, ಪಕ್ಷದ ವರಿಷ್ಠರು ಸಮ್ಮತಿಸುತ್ತಿದ್ದಾರೆಂದು ಹೇಳಿದ ಕೆಲವೇ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕೃಷ್ಣಯ್ಯಶೆಟ್ಟಿ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡಿಲ್ಲ. ನಮ್ಮ ಗಮನಕ್ಕೂ ಬಂದಿಲ್ಲ. ಶೆಟ್ಟರ ಸೇರ್ಪಡೆಗೆ ಮಾಲೂರಿನಲ್ಲಿ ವಿರೋಧವಿದೆ ಎಂದಿರುವುದು ಗಮನಿಸಿದರೆ ಕೆಪಿಸಿಸಿಯಲ್ಲಿ ಕೆ.ಎಚ್. ಮುನಿಯಪ್ಪ ಅವರ ಮಾತಿಗೆ ಕಿಮ್ಮತ್ತು ಇಲ್ಲವೆಂಬುದು ಅರ್ಥವಾಗುತ್ತಿದ್ದು, ಈ ಬೆಳವಣಿಗೆಗಳಿಂದ ಜಿಲ್ಲೆಯಲ್ಲಿ ಮುಂದೆ ರಾಜಕೀಯ ಯಾವ ತಿರುವು ಪಡೆಯುತ್ತದೋ ಎಂಬುದು ಕುತೂಹಲಕ್ಕೆ ಎಡೆ ಮಾಡಿದೆ.