ಪಕ್ಷದ ಸಂಘಟನೆಗೆ ಲಕ್ಷ್ಯ ಕೊಡದ ಲಕ್ಷ್ಮಯ್ಯರನ್ನು ಬದಲಿಸಿ
ಕ.ಪ್ರ. ವಾರ್ತೆ ಕೋಲಾರ ಜೂ.26
ಕಳೆದ ಆರು ತಿಂಗಳಿಂದ ಪಕ್ಷದ ಸಂಘಟನೆಯ ಕಡೆ ಗಮನ ನೀಡದೆ ಇರುವ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಲಕ್ಷ್ಮಯ್ಯನವರು ಬೇರೊಬ್ಬರಿಗೆ ಅಧಿಕಾರ ಬಿಟ್ಟುಕೊಡಲಿ ಎಂದು ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಪಕ್ಷದ ಗೆಲುವಿಗಾಗಿ ಯಾವುದೇ ಕಾರ್ಯತಂತ್ರ ರೂಪಿಸಲಿಲ್ಲ. ಕೋಲಾರದಲ್ಲಿ ಪಕ್ಷದ ಜಿಲ್ಲಾ ಕಚೇರಿಯಿದ್ದರೂ ಕಳೆದ ಆರು ತಿಂಗಳಿಂದ ಕಚೇರಿಗೆ ಕಾಲಿಟ್ಟಿಲ್ಲ. ಇವರೇ ಅಧಿಕಾರದಲ್ಲಿ ಮುಂದುವರೆದಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ಕ್ಷೀಣಿಸುತ್ತದೆ ಎಂದು ಕಾರ್ಯಕರ್ತರು ದೂರಿದ್ದಾರೆ. ಎನ್. ಲಕ್ಷ್ಮಯ್ಯನವರಿಗೆ ಪಕ್ಷದ ಕೆಲಸ ಮಾಡಲು ಬಿಡುವು ಇಲ್ಲದಿದ್ದಲ್ಲಿ ಇಲ್ಲವೇ ಆಸಕ್ತಿ ಕಳೆದುಕೊಂಡಿದ್ದರೆ ಪಕ್ಷದಲ್ಲಿ ರಾಜಿನಾಮೆ ನೀಡುವುದು ಸೂಕ್ತ, ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಸಂಘಟನೆಯನ್ನು ಬಲವರ್ಧನೆಗೊಳಿಸದಿದ್ದರೆ ಯಾರೇ ಪ್ರಬಲ ಅಭ್ಯರ್ಥಿ ಸ್ಪರ್ಧಿಸಿದರೂ ಕೆಲಸ ಮಾಡುವುದಕ್ಕೆ ಕಾರ್ಯಕರ್ತರು ಸಿಗದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧ್ಯಕ್ಷರು ಪಕ್ಷದ ಕಚೇರಿಗೆ ಯಾವ ಕಾರಣಕ್ಕೆ ಬರುತ್ತಿಲ್ಲ, ಸಂಘಟನೆಯ ಕಡೆ ಏಕೆ ಗಮನ ನೀಡುತ್ತಿಲ್ಲವೆಂಬುದನ್ನು ಕಾರ್ಯಕರ್ತರಿಗೆ ತಿಳಿಸಬೇಕು, ಕೆಲಸ ಮಾಡುವುದಕ್ಕೆ ನಿಜಕ್ಕೂ ಸಮಸ್ಯೆ ಇದ್ದಲ್ಲಿ ರಾಜಿನಾಮೆ ನೀಡಿ ಬೇರೆಯವರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿ ವಹಿಸಲಿ ಎಂದು ಒತ್ತಾಯಿಸಿದ್ದಾರೆ.
ಕೆಜಿಎಫ್ ಮಾಜಿ ಶಾಸಕ ವೈ. ಸಂಪಂಗಿ ಸೇರಿದಂತೆ ಅನೇಕರು ಲಕ್ಷ್ಮಯ್ಯನವರ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಗಳಲ್ಲಿ ಪಕ್ಷ ಸೋಲುವುದಕ್ಕೆ ಲಕ್ಷ್ಮಯ್ಯನವರೇ ಒಬ್ಬರೇ ಕಾರಣರಲ್ಲವೆಂಬುದು ಗೊತ್ತಿರುವ ವಿಚಾರವೇ. ಆದರೆ, ನೈತಿಕತೆಯ ಪ್ರಶ್ನೆ ಆಗಿರುವುದರಿಂದ ಜಿಲ್ಲಾಧ್ಯಕ್ಷರು ಈವೇಳೆಗಾಗಲೇ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಆತ್ಮಾವಲೋಕನಾ ಸಭೆಗಳನ್ನು ನಡೆಸಿ ಪಕ್ಷದ ಮೇಲೆ ಅವರಿಗಿರುವ ಬದ್ಧತೆ ಪ್ರದರ್ಶಿಸಬೇಕಾಗಿತ್ತೆಂದು ಕಾರ್ಯಕರ್ತರು ತಿಳಿಸಿದ್ದಾರೆ.
ಪಕ್ಷದ ಜಿಲ್ಲಾ ಉಸ್ತುವಾರಿ ವಹಿಸಿರುವ ಬೆಂಗಳೂರು ನಗರಪಾಲಿಕೆಯ ಸದಸ್ಯ ಶಿವಕುಮಾರ್ ಅವರು ಲಕ್ಷ್ಮಯ್ಯನವರಿಗೆ ಬುದ್ಧಿ ಹೇಳಿ ಪಕ್ಷದ ಸಂಘಟನೆ ಬಲಪಡಿಸಬೇಕು, ಒಂದು ವೇಳೆ ಆಸಕ್ತಿ ಇಲ್ಲದಿದ್ದರೆ ರಾಜಿನಾಮೆ ಪಡೆದು ನಿಷ್ಠಾವಂತರೊಬ್ಬರಿಗೆ ಅಧ್ಯಕ್ಷ ಸ್ಥಾನ ವಹಿಸಬೇಕೆಂದು ಆಗ್ರಹಿಸಿದ್ದಾರೆ.ಮಾಲೂರಿನಲ್ಲಿ ಬಿಜೆಪಿಗೆ ನೆಲೆ ಇಲ್ಲದಂತಾಗಿದೆ. ಕೋಲಾರದಲ್ಲಿ ಸ್ಥಳೀಯ ಕಾರ್ಯಕರ್ತರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದೆ, ಪದೇ ಪದೇ ಪಕ್ಷಗಳನ್ನು ಬದಲಾಯಿಸುವ ವ್ಯಕ್ತಿಗೆ ಟಿಕೆಟ್ ನೀಡಿದ ಪರಿಣಾಮ ಪಕ್ಷಕ್ಕೆ ಹೀನಾಯ ಸೋಲಾಯಿತು. ಮುಳಬಾಗಿಲು, ಶ್ರೀನಿವಾಸಪುರದಲ್ಲಿ ಪಕ್ಷ ಬಲಪಡಿಸಲು ಸಮರ್ಥ ಮುಖಂಡರು ಇಲ್ಲದಂತಾಗಿದೆ. ಬಿಜೆಪಿಯ ಸರ್ಕಾರ ಇದ್ದಾಗಲೇ ಕಾರ್ಯಕರ್ತರಿಗೆ ನ್ಯಾಯ ಸಿಗಲಿಲ್ಲ, ಇನ್ನು ಕಾಂಗ್ರೆಸ್ ಸರ್ಕಾರವಿರುವುದರಿಂದ ಕಾರ್ಯಕರ್ತರ ಹಿತ ಕಾಪಾಡುವುದು ಹೇಗೆ ಎಂಬುದನ್ನು ಅರ್ಥ ಮಾಡಿಕೊಂಡು ಪಕ್ಷದ ಮುಖಂಡರು ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲವೇ ಅವರಿಗಿರುವ ಸಮಸ್ಯೆ ನಿವಾರಣೆ ಮಾಡದಿದ್ದಲ್ಲಿ ಪಕ್ಷಕ್ಕೆ ಮತ್ತಷ್ಟು ಹಾನಿ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.