ಪರಿಸರ ಸಂರಕ್ಷಣೆಗೆ ಗಾಯಕ ಮುನಿಸ್ವಾಮಿ ಮನವಿ
ಕೋಲಾರ: ಪರಿಸರ ಉಳಿಸುವುದರಿಂದ ಮಾನವನ ಉಳಿವು ಸಾಧ್ಯ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ ಕ್ಷೀಣಿಸುತ್ತಿರುವುದರಿಂದ ಪ್ರತಿಯೊಬ್ಬರು ಪರಿಸರ ಸಂರಕ್ಷಿಸಬೇಕೆಂದು ಹಾಗೂ ಗಿಡ- ಮರಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿ ಪೋಷಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಪ್ರಕೃತಿ ಕಲಾ ತಂಡದ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಆರ್. ಮುನಿಸ್ವಾಮಿ ತಿಳಿಸಿದರು.
ತಾಲೂಕಿನ ಮಾರ್ಜೇನಹಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪ್ರಕೃತಿ ಕಲಾತಂಡ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದಲ್ಲಿ 100 ಗಿಡಗಳನ್ನು ನೆಡುವ ಯೋಜನೆ ಕೈಗೊಳ್ಳಲಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಈ ನೆಲ ಈ ಜಲ ಕಲಾ ತಂಡದ ಬಿ.ವೆಂಕಟಾಚಲಪತಿ ಪರಿಸರ ಗೀತೆಗಳನ್ನು ಹಾಡಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ನಾಗರಾಜ್, ಶಿವಪ್ಪ, ಚಂದ್ರ, ಆರ್. ಗೋಪಾಲಕೃಷ್ಣ, ವಿ.ಶಂಕರ್, ಸಂಘದ ಅಧ್ಯಕ್ಷ ಶ್ರೀಧರ್, ಎನ್. ನಾರಾಯಣಸ್ವಾಮಿ, ಸಂಘದ ಉಪಾಧ್ಯಕ್ಷ ಎನ್. ಮಂಜುನಾಥ್, ವಿ.ಬಾಬು, ತಾಪಂ ಸದಸ್ಯ ರಾಮಚಂದ್ರೇಗೌಡ, ಶಾಲೆಯ ಮುಖ್ಯೋಪಾಧ್ಯಾಯ ಬಿ.ಎನ್. ನಾರಾಯಣಸ್ವಾಮಿ ಇದ್ದರು.