'ಭಾಷೆಯಿಂದ ಜನರ ಮಧ್ಯೆ ಘರ್ಷಣೆ ಸಲ್ಲ'
ಕ.ಪ್ರ. ವಾರ್ತೆ ಕೆಜಿಎಫ್ ಜೂ.26
ಜನರಲ್ಲಿ ಭಾಷೆಯಿಂದ ಭಾವನೆಯನ್ನು ಮೂಡಿಸಬೇಕೆ ಹೊರತು ಭಾಷೆಯಿಂದ ಜನರ ಮಧ್ಯೆ ಘರ್ಷಣೆ ಉಂಟಾಗಬಾರದು. ಭಾಷೆ ಯಾವುದೇ ಇರಲಿ ನಾವೆಲ್ಲರೂ ಭಾರತೀಯರು ಎಂಬ ಮನೋಭಾವವನ್ನು ಬೆಳೆಸಿಕೊಂಡು ಸಾಮರಸ್ಯದಿಂದ ಬಾಳಬೇಕು ಎಂದು ಕೆಜಿಎಫ್ ನಗರಸಭೆ ಪೌರಾಯುಕ್ತ ವಿ. ಬಾಲಚಂದರ್ ಹೇಳಿದರು.
ನಗರದ ಉರಿಗಾಂ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ತಮಿಳು ಸಂಘದಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣ ಗೊಂಡು 27 ವರ್ಷಗಳಾದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಜಿಎಫ್‌ನಲ್ಲಿ ತಮಿಳರು ಮತ್ತು ಕನ್ನಡಿಗರು ಹಾಗೂ ಇತರೆ ಭಾಷಿಗರು ಹಲವಾರು ವರ್ಷಗಳಿಂದ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕನ್ನಡಿಗರು ತಮಿಳರು ಎಂಬ ಭೇದವಿಲ್ಲದೆ ಎಲ್ಲರೂ ಒಗಟ್ಟಿನಿಂದ ಎಲ್ಲಾ ಹಬ್ಬವನ್ನು ಆಚರಿಸಬೇಕು ಎಂದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೆ. ರಾಜೇಂದ್ರನ್ ಮಾತನಾಡಿ ಕೆಜಿಎಫ್‌ನಲ್ಲಿ ಅತಿ ಹೆಚ್ಚು ತಮಿಳರು ವಾಸಿಸುತ್ತಿದ್ದು ತಮಿಳು ಸಂಘದಲ್ಲಿ ತಿರುವಳ್ಳುವರ್ ಪ್ರತಿಮೆ ಆನಾವರಣಗೊಂಡು 27 ವರ್ಷಗಳು ಕಳೆದಿದ್ದರೂ ತಮಿಳಿಗರಿಂದ ತಮಿಳು ಸಂಘ ಅಭಿವೃದ್ಧಿಗೆ ವಿಫಲರಾಗಿದ್ದಾರೆ. ಆದ್ದರಿಂದ ನಾವು ಬೇರೆ ಬೇರೆ ಭಾಷಿಗರು ಎಂಬ ಭಾವನೆಯನ್ನು ಬಿಟ್ಟು ಎಲ್ಲಾ ಭಾಷಿಗರ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಸಮಾಜ ಸೇವಕರಾದ ವಿ. ಮುನಿಸ್ವಾಮಿ ಮಾತನಾಡಿ ಕನ್ನಡ ಮತ್ತು ತಮಿಳು ಎಂಬ ಭೇದವಿಲ್ಲದೆ ಕೆಜಿಎಫ್ ಕ್ಷೇತ್ರದ ಅಭಿವೃದ್ಧಿಗೆ ತಾವೆಲ್ಲರೂ ಪಣತೊಟ್ಟು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ತಮಿಳು ಸಂಘದ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುವುದಾಗಿ ಘೋಷಿಸಿದರು.
ಈ ವೇಳೆ ಕೆ. ರಾಜೇಂದ್ರನ್, ವಿ. ಮುನಿಸ್ವಾಮಿ, ಆರೋಗ್ಯದಾಸ್, ಅನಿತಾ, ಜೋಸೆಫ್, ನಂದಕುಮಾರ್, ಸರಸ್ವತಿ, ಗಜೇಂದ್ರನ್ ಮತ್ತು ಮೂರ್ತಿ ಅವರನ್ನು ಪೌರಾಯುಕ್ತ ವಿ. ಬಾಲಚಂದರ್ ಹಾಗೂ ತಮಿಳು ಸಂಘದ ಅಧ್ಯಕ್ಷ ಕಲೈ ಅರಸನ್ ಸನ್ಮಾನಿಸಿ ತಮಿಳು ಕವಿ ತಿರುವಳ್ಳುವರ್ ಪುಸ್ತಕ ಬಿಡುಗಡೆ ಮಾಡಿದರು.
ನಗರಸಭೆ ಸದಸ್ಯೆ ಅನಿತಾ, ಆರೋಗ್ಯಾಧಿಕಾರಿ ಸರಸ್ವತಿ, ವ್ಯವಸ್ಥಾಪಕ ನಂಜುಂಡಪ್ಪ, ಕೋಲಾರದ ಪಿಂಚಣಿ ಅಧಿಕಾರಿ ಆರೋಗ್ಯದಾಸ್, ಕನ್ನಡ ಪರ ಸಂಘಟನೆಯ ಅಕ್ಷ ವಿ.ಎಸ್. ಪ್ರಕಾಶ್ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ತಮಿಳು ಸಂಘದ ಕಾರ್ಯಕರ್ತರು ಹಾಜರಿದ್ದರು.