ಮಾದಕ ವಸ್ತುಗಳ ದಾಸರಾಗದಿರಿ
ಕ.ಪ್ರ. ವಾರ್ತೆ ಕೋಲಾರ ಜೂ.26
ದೇಶದಲ್ಲಿ ಸಾಕಷ್ಟು ಮಂದಿ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಪರ ವರಿಷ್ಠಾಧಿಕಾರಿ ಭಗವಾನ್ದಾಸ್ ತಿಳಿಸಿದರು. ನಗರದ ಪ್ರವಾಸಿ ಮಂದಿರದಿಂದ ಬುಧವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆಯ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾದಕ ವಸ್ತುಗಳಿಗೆ ಯುವಜನತೆ ದಾಸನಾಗದೆ ಉತ್ತಮ ಪ್ರಜ್ಞೆಗಳಾಗಿ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕೆಂದರು.
ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಜಾಥಾ ಎಂ.ಜಿ.ರಸ್ತೆ, ಎಲೆ ಬೀದಿ, ಕಾಲೇಜು ವೃತ್ತ, ಮೆಕ್ಕೆ ವಣತ್ತ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮುಕ್ತಾಯಗೊಂಡಿತ್ತು. ಮಾದಕ ವಸ್ತುಗಳನ್ನು ಬಳಸಬೇಡಿ, ಮಾದಕ ವಸ್ತುಗಳಿಂದ ದೂರವಿರಿ ಎಂಬ ಫಲಕಗಳನ್ನು ಹೊತ್ತ ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಜನರಲ್ಲಿ ಜಾಗೃತಿ ಮೂಡಿಸಿದರು.
ಡಿಡಿಪಿಐ ಎಸ್.ವಿ.ಪದ್ಮನಾಭ್, ಡಿ.ವೈ.ಎಸ್.ಪಿ ಶ್ರೀಹರಿ ಬರಗೂರು, ಬಿಇಒ ಶಿವಲಿಂಗಯ್ಯ, ಶಿಕ್ಷಣಾಧಿಕಾರಿ ರಾಮ ಚಂದ್ರಯ್ಯ, ಸರ್ಕಲ್ ಇನ್ಸೆಪೆಕ್ಟರ್ ಕೆ.ಎನ್. ರಮೇಶ್, ಪ್ರಸೂತಿ ತಜ್ಞ ಡಾ. ಶಿವಣ್ಣ, ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್. ಮುನಿಯಪ್ಪ, ವಿವಿಧ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಚಿನ್ಮಯಾನಂದ ಅವಧೂತರು, ಉಷಾ ಗಂಗಾಧರ್, ಸೋಮಣ್ಣ, ಗೋಪಿ ಕೃಷ್ಣನ್, ಬಿ.ಆರ್.ಪಿ ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿ ಜಿ. ಶ್ರೀನಿವಾಸ್ , ಜನವಾದಿ ಮಹಿಳಾ ಸಂಘಟನೆಯ ವಿ. ಗೀತಾ, ಮಹಿಳಾ ಸಾಂತ್ವನ ಕೇಂದ್ರದ ಮಮತಾರೆಡ್ಡಿ ಇತರು ಇದ್ದರು.
ಕೆಜಿಎಫ್ನಲ್ಲಿ ಮಕ್ಕಳಿಂದ ಜಾಗೃತಿ ಜಾಥಾ
ಕೆಜಿಎಫ್: ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಕೆಜಿಎಫ್ನ ಬೆಮೆಲ್ನಗರದಲ್ಲಿರುವ ಬೆಮೆಲ್ ಪ್ರೌಢಶಾಲೆ ವತಿಯಿಂದ ಆಯೋಜಿಸಲಾಗಿದ್ದ ಮಾದಕ ವಸ್ತು ವಿರೋಧಿಸಿ ಶಾಲಾ ಎನ್ಸಿಸಿ ಮಕ್ಕಳಿಂದ ಜನಜಾಗೃತಿ ಜಾಥ ನಡೆಸಲಾಯಿತು.
ಶಾಲೆಯ ಪ್ರಾಂಶುಪಾಲರಾದ ವೆಂಕಟಮುನಿ ರೆಡ್ಡಿ ಅವರು ವಿಜಯನಗರದಿಂದ ಚಾಲನೆ ನೀಡಿ ಬೆಮೆಲ್ನಗರ, ಆಲದಮರದವರೆಗೆ ಶಾಲಾ ಎನ್ಸಿಸಿ ಮಕ್ಕಳು ಜಾಥವನ್ನು ನಡೆಸಿದರು. ಈ ವೇಳೆ ಶಾಲೆಯ ಶಿಕ್ಷಕರಾದ ಗೋಪಿ, ಅನಿತಾ ರಾಲಿಯಲ್ಲಿ ಭಾಗವಹಿಸಿದ್ದರು.
ಅದೇ ರೀತಿ ನಗರದ ಸುಮತಿ ಜೈನ್ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ನಗರದ ಸೂರಜ್ಮುಲ್ ವೃತ್ತ, ಗಾಂಧಿ ವೃತ್ತ, ಪ್ರಿಚರ್ಡ್ ರಸ್ತೆ, ಗೀತಾ ರಸ್ತೆ ಹಾಗೂ ಇತರೆ ಪ್ರಮುಖ ರಸ್ತೆಯಲ್ಲಿ ರಾಲಿ ನಡೆಸಿ ಮಾದಕ ವಸ್ತು ನಿಷೇಧಿಸಿ ಆರೋಗ್ಯವನ್ನು ರಕ್ಷಿಸಿ ಎಂದು ಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಗಮನ ಸೆಳೆದರು. ರಾಲಿಯಲ್ಲಿ ಶಾಲಾ ಶಿಕ್ಷಕ, ಶಿಕ್ಷಕಿಯರು ಸಿಬ್ಬಂದಿ ಭಾಗವಹಿಸಿದ್ದರು.
ತಾಲೂಕಿನ ಅಭಿವೃದ್ಧಿಗೆ ಬದ್ಧ: ಮಂಜುನಾಥ್ ಗೌಡ
ಮಾಲೂರು: ತಾಲೂಕಿನ ಪ್ರತಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಪಡಿಸಲು ಕಂಕಣಬದ್ಧನಾಗಿದ್ದೇನೆ ಎಂದು ಶಾಸಕ ಕೆ.ಎಸ್. ಮಂಜುನಾಥ್ ಗೌಡ ಹೇಳಿದರು. ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಬುಧವಾರ ಲೆಕ್ಕ ಶೀರ್ಷಿಕೆ 5054 ಯೋಜನೆಯಡಿ 48 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಿಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಲಕ್ಕೂರು ಗ್ರಾಮದಲ್ಲಿ ಈ ಯೋಜನೆಯಡಿ 25 ಲಕ್ಷ ವೆಚ್ಚದಲ್ಲಿ ಕೋಡಿಹಳ್ಳಿ ಗ್ರಾಮದಲ್ಲಿ, 10 ಲಕ್ಷ ವೆಚ್ಚದಲ್ಲಿ ರಸ್ತೆ,ಚೂಡಗೊಂಡನಹಳ್ಳಿ ಗ್ರಾಮದ ರಸ್ತೆಯನ್ನು 5 ಲಕ್ಷ ಹಾಗೂ ಅಬ್ದುಲ್ ಕಲಾಂ ಗ್ರಾಮದ ರಸ್ತೆಗೆ 2 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಅಭಿಯಂತರ ಭದ್ರಿನಾಥ್ ಮಾತನಾಡಿ, ನರ್ಬಾಡ್ ಯೋಜನೆಯಡಿ ಇದೇ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಅವರಣದಲ್ಲಿ 14.75 ಲಕ್ಷ ವೆಚ್ಚದಲ್ಲಿ ಮೂರು ಕೋಣೆಗಳ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದ್ದು, ಅಲಂಬಾಡಿ ಗ್ರಾಮದಲ್ಲಿ 19.75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು. ಜೆಡಿಎಸ್ ಮುಖಂಡ ನಂಜೇಗೌಡ, ಅಧ್ಯಕ್ಷ ಚಂದ್ರಶೇಖರ್ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ರಾಮಚಂದ್ರ, ಇಲಾಖೆ ಅಭಿಯಂತರ ಸುಬ್ರಮಣ್ಯ ಇದ್ದರು.