ರೋಟರಿಯಿಂದ ಶಾಲಾ ಮಕ್ಕಳಿಗೆ ನಿಘಂಟು ವಿತರಣೆ
ಕೋಲಾರ: ಶೈಕ್ಷಣಿಕ ಪ್ರಗತಿಗೆ ಕೊಡುಗೆ ನೀಡುವ ಉದ್ದೇಶದಿಂದ ರೋಟರಿ ಕೋಲಾರ ಸೆಂಟ್ರಲ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಇಂಗ್ಲಿಷ್- ಕನ್ನಡ ನಿಘಂಟು ವಿತರಿಸುವ ಯೋಜನೆ ಅನುಷ್ಟಾನಕ್ಕೆ ತರಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಪಿ.ರಮೇಶ್‌ಬಾಬು ತಿಳಿಸಿದರು.
ತಾಲೂಕಿನ ಅರಾಭಿಕೊತ್ತನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್- ಕನ್ನಡ ನಿಘಂಟು ಮತ್ತು ನೋಟ್‌ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ನಿಘಂಟು ವಿತರಿಸಬೇಕೆಂಬುದು ರೋಟರಿ ಸೆಂಟ್ರಲ್‌ನ ರಾಜ್ಯಪಾಲರಾಗಿದ್ದ ದಿ. ಪಾಂಡುರಂಗ ಫಡ್ನೀಸ್ ಅವರ ಕನಸಾಗಿತ್ತು. ಅವರ ನೆನಪಿನಲ್ಲಿ ಈ ಕಾರ್ಯ ನಡೆಯುತ್ತಿದ್ದು, ಈಗಾಗಲೇ ರಾಜ್ಯಾದ್ಯಂತ ಲಕ್ಷಾಂತರ ಶಾಲಾ ಮಕ್ಕಳಿಗೆ ನಿಘಂಟು ವಿತರಿಸಲಾಗಿದೆ ಎಂದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ರೋಟರಿ ಸೆಂಟ್ರಲ್ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ. ಪ್ರೌಢಶಾಲಾ ಹಂತದಲ್ಲಿ ರೋಟರಿ ಇಂಟ್ರಾಕ್ಟ್ ಕ್ಲಬ್ ಸ್ಥಾಪನೆಗೆ ಮುಂದಾಗುವ ಮೂಲಕ ಮಕ್ಕಳಲ್ಲಿ ಸಾಮಾಜಿಕ ಸೇವೆಯ ಪರಿಚಯ ಮಾಡಿಸುವಂತೆ ಅವರು ಶಿಕ್ಷಕರಲ್ಲಿ ಮನವಿ ಮಾಡಿದರು. ರೋಟರಿ ಸೆಂಟ್ರಲ್‌ನ ಭಾವಿ ಅಧ್ಯಕ್ಷ ಎನ್.ಗೋಪಾಲಕೃಷ್ಣೇಗೌಡ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ರಂಗಗಳಂತೆ ಇಂದು ಶೈಕ್ಷಣಿಕ ರಂಗದಲ್ಲೂ ಪೈಪೋಟಿ ಇದೆ. ಅದಕ್ಕನುಗುಣವಾಗಿ ಗುಣಾತ್ಮಕ ಶಿಕ್ಷಣ ಪಡೆದು ಸಾಧನೆ ಮಾಡಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ರೋಟರಿ ಸೆಂಟ್ರಲ್‌ನ ಮಾಜಿ ಅಧ್ಯಕ್ಷ ರಾಜ್‌ಕುಮಾರ್, ಮಾಜಿ ಅಧ್ಯಕ್ಷರಾದ ನಂಜುಂಡಯ್ಯ ಮತ್ತು ಚಂಪಕ್ ರಮೇಶ್, ಶಾಲೆಯ ಮುಖ್ಯ ಶಿಕ್ಷಕಿ ಡಿ.ಆಶಾ, ಎಸ್‌ಡಿಎಂಸಿ ಅಧ್ಯಕ್ಷ ನಂಜುಂಡಗೌಡ ಅಧ್ಯಕ್ಷತೆ ವಹಿಸಿದ್ದು, ಶಿಕ್ಷಕ ಲೋಕೇಶಪ್ಪ ದಟ್ಟೇರ್ ನಿರೂಪಿಸಿದರು.