ನಗರದಲ್ಲಿ ನೀರಿಗಾಗಿ ನಿಲ್ಲದ ಹಾಹಾಕಾರ
-ಪಾ.ಶ್ರೀ.ಅನಂತರಾಮ್
ಕ.ಪ್ರ. ವಾರ್ತೆ ಕೋಲಾರ ಜೂ.27
ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕೋಲಾರ ನಗರದಲ್ಲಿ ಮತ್ತೆ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
ನಗರದ ವಿವಿಧ ವಾರ್ಡುಗಳಿಗೆ ನೀರು ಒದಗಿಸಲು ಹಣದ ಸಮಸ್ಯೆ ಇಲ್ಲದಿದ್ದರೂ ಅಂತರ್ಜಲ ಬತ್ತಿರುವುದರಿಂದ ಜಿಲ್ಲಾಡಳಿತ ಮತ್ತು ನಗರಸಭೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ನಗರದ ಜನಸಂಖ್ಯೆ ಈಗ 1.40 ಲಕ್ಷ ದಾಟಿದ್ದು ಬೇಡಿಕೆಗೆ ತಕ್ಕಂತೆ ನೀರು ಪೂರೈಕೆ ಮಾಡುವುದು ನಗರಸಭೆಗೆ ಸವಾಲಾಗಿದೆ. ಶಾಸಕ ವರ್ತೂರ್ ಪ್ರಕಾಶ್ ಅವರು ತಮ್ಮ ಮೊದಲ ಅವಧಿಯಲ್ಲಿ ನೀರಿನ ಸಮಸ್ಯೆ ನಿವಾರಣೆಗಾಗಿ ಕೈಗೊಂಡ ಕ್ರಮಗಳಿಂದಾಗಿ ನಗರದ 35 ವಾರ್ಡುಗಳಲ್ಲಿ ಒಟ್ಟಾರೆ ಶೇ.70 ರಷ್ಟು ಸಮಸ್ಯೆ ನಿವಾರಣೆ ಆಗಿತ್ತು. ನಗರಕ್ಕೆ ನೀರು ಸರಬರಾಜು ಮಾಡುವ ಅಮ್ಮೇರಹಳ್ಳಿ, ಮಾಡೇರಹಳ್ಳಿ, ಕೋಡಿಕಣ್ಣೂರು ಕೆರೆಗಳು ಮಳೆಯಿಲ್ಲದೆ ಬತ್ತಿದ್ದು ಅಲ್ಲಿನ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಜನತೆ ವಾರಕ್ಕೆ, 10 ದಿನಕ್ಕೆ ಒಮ್ಮೆ ನೀರು ಕಾಣುವಂತಾಗಿದೆ.
ಪಾತಾಳ ಸೇರಿದ ಅಂತರ್ಜಲ: ಕಳೆದ ಒಂದೂವರೆ ವರ್ಷದಲ್ಲಿ ನಗರದಲ್ಲಿ ಹೊಸದಾಗಿ 120ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಸರ್ಕಾರದ ಅನುದಾನದಲ್ಲಿ ನಗರಸಭೆಯವರು ಕೊರೆಸಿದ್ದರೂ ಅಂತರ್ಜಲ ಪಾತಾಳ ಸೇರಿರುವುದರಿಂದ ಹೆಚ್ಚು ಶಕ್ತಿ ಸಾಮರ್ಥ್ಯದ ಪಂಪು-ಮೋಟಾರ್ ಅಳವಡಿಸುತ್ತಿದ್ದರೂ ನೀರು ಸಂಗ್ರಹಣೆ ಕಡಿಮೆ ಆಗುತ್ತಿದೆ. ಹೀಗಾಗಿ ಜನರಿಗೆ ಉತ್ತರ ನೀಡಲಾಗದೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.
ಸದಸ್ಯರ ಪರದಾಟ: ನಗರಸಭೆಯ ವ್ಯಾಪ್ತಿಯಲ್ಲಿ ಸುಮಾರು 320ಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದು ಈ ಪೈಕಿ 182 ಕೊಳವೆ ಬಾವಿಗಳು ಪೂರ್ತಿ ಬತ್ತಿ ಹೋಗಿವೆ. 70 ರಿಂದ 80 ಹಳೆಯ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಿದ್ದರೂ ನೀರಿನ ಪ್ರಮಾಣ ಹೆಚ್ಚಾಗಿಲ್ಲ. ನಗರಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು ಹಾಗೂ ಪುನರಾಯ್ಕೆ ಆಗಿರುವವರು ಮತ ನೀಡಿದವರಿಗೆ ಸಮಾಧಾನ ಹೇಳುವುದಕ್ಕೇ ಕಷ್ಟವಾಗುತ್ತಿದೆ. ಸರ್ಕಾರ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸದಂತೆ ಆದೇಶ ಹೊರಡಿಸಿರುವುದರಿಂದ ಸದಸ್ಯರು ವಾರ್ಡುಗಳಲ್ಲಿ ನೆಮ್ಮದಿಯಿಂದ ಓಡಾಡುವುದಕ್ಕೆ ಪರದಾಡುತ್ತಿದ್ದಾರೆ.
ಆಯುಕ್ತ ಅಳಲು: ನಗರಸಭೆಗೆ ಪುನರಾಯ್ಕೆ ಆಗಿರುವ ಮಾಜಿ ಉಪಾಧ್ಯಕ್ಷ ಮುರಳಿಗೌಡರು ಜನತೆಯ ಕಷ್ಟಕ್ಕೆ ಸ್ಪಂದಿಸಬೇಕೆಂಬ ಹಂಬಲದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಇತ್ತೀಚೆಗೆ ಎರಡು ಕೊಳವೆ ಬಾವಿಗಳನ್ನು ಕೊರೆಸಿದ್ದರಾದರೂ ನೀರು ಸಿಗದೆ ವಿಫಲವಾಗಿದೆ. ಇನ್ನು ನಗರಸಭೆಯಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ವಾರ್ಡುಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸಿದರೆ ನೀರು ನಿರೀಕ್ಷೆ ಮಾಡುವುದು ಹೇಗೆ ಸಾಧ್ಯವೆಂದು ನಗರಸಭೆಯ ಆಯುಕ್ತ ಮಹೇಂದ್ರ ಕುಮಾರ್ ಕನ್ನಡಪ್ರಭದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಯಾವುದೇ ನದಿ-ನಾಲೆ ಇಲ್ಲದಿರುವುದರಿಂದ ಕೋಲಾರಕ್ಕೆ ಮಳೆಯನ್ನು ಆಧರಿಸಿ ಅಂತರ್ಜಲ ಸರಬರಾಜು ಮಾಡಬೇಕಾಗಿದೆ. ಈ ಬಾರಿ ಮುಂಗಾರು ಮುನಿಸಿಕೊಂಡಿರುವುದರಿಂದ ಸಮಸ್ಯೆ ನಿವಾರಣೆಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ, ಹಣದ ಕೊರತೆಯಿಲ್ಲ. ಆದರೆ, ಮಳೆ ಇಲ್ಲದಿರುವುದರಿಂದ ಕೊಳವೆ ಬಾವಿಗಳಿಂದ ನೀರು ಕೊಡುವುದಕ್ಕೆ ಕಷ್ಟವಾಗಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಖಾಸಗಿ ಕೊಳವೆ ಬಾವಿಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಬಹುದು.
ದುಬಾರಿ ವೆಚ್ಚ: ನಗರಸಭೆಯಿಂದ ಖಾಸಗಿ ಟ್ಯಾಂಕರ್‌ಗಳ ಮೂಲಕ ಪ್ರಸ್ತುತ ದಿನಕ್ಕೆ 180 ಸರದಿ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿ ಟ್ರಿಪ್‌ಗೆ ಟ್ಯಾಂಕರ್ ಮಾಲೀಕರಿಗೆ 350 ರು. ನೀಡಲಾಗುತ್ತಿದ್ದು, ಡೀಸೆಲ್ ಬೆಲೆ ಏರಿಕೆ ಹಾಗೂ ಚಾಲಕರ ಸಂಭಾವನೆ ಹೆಚ್ಚಳದಿಂದ ಹಳೆಯ ದರಕ್ಕೆ ನೀರು ಸರಬರಾಜು ಮಾಡುವುದಕ್ಕೆ ಗುತ್ತಿಗೆದಾರರು ಒಪ್ಪುತ್ತಿಲ್ಲ. ಒಂದು ವೇಳೆ ಪರಿಸ್ಥಿತಿಗೆ ಅನುಗುಣವಾಗಿ ಬೇಡಿಕೆ ಮುಂದಿಟ್ಟಲ್ಲಿ ಪ್ರತಿ ಟ್ರಿಪ್‌ಗೆ 1000ದಿಂದ 1200 ರು. ಕೊಡಬೇಕೆಂದು ಒತ್ತಾಯಿಸುವುದರಿಂದ ನಗರಸಭೆಯ ಅಧಿಕಾರಿಗಳು ದುಬಾರಿ ವೆಚ್ಚದಲ್ಲಿ ನೀರು ಸರಬರಾಜಿಗೆ ಹಿಂದೇಟು ಹಾಕುವಂತಾಗಿದೆ.
ಇನ್ನು ಜನತೆಯ ಬೇಡಿಕೆ ಹೆಚ್ಚಿರುವುದರ ಜತೆಗೆ ವಿದ್ಯುತ್ ದರ, ಸಾಗಾಣೆ ವೆಚ್ಚ ದುಬಾರಿ ಆಗಿರುವುದರಿಂದ ಕುಡಿಯುವ ನೀರು ಸರಬರಾಜು ಮಾಡುವ ಖಾಸಗಿಯವರು ಒಂದು ಬಿಂದಿಗೆ ನೀರಿಗೆ ಪಡೆಯುತ್ತಿದ್ದ 7 ರು.ಗಳನ್ನು 8ರಿಂದ 10 ರು.ಗಳಿಗೆ ಏರಿಕೆ ಮಾಡಿದ್ದಾರೆ. ಹೀಗಾಗಿ ಬಡವರು, ಮಧ್ಯಮ ವರ್ಗದವರು ನೀರಿಗಾಗಿ ಪರಿತಪಿಸುವಂತಾಗಿದೆ.
ಎತ್ತಿನಹೊಳೆ ಯೋಜನೆ ಆದಷ್ಟು ಬೇಗನೆ ಅನುಷ್ಠಾನಗೊಂಡಲ್ಲಿ ಮಾತ್ರ ಕೊಂಚ ಮಟ್ಟಿಗೆ ಜನತೆಯ ದಾಹ ತೀರಿಸಲು ಸಾಧ್ಯವಾಗುತ್ತದೆ, ಜನಪ್ರತಿನಿಧಿಗಳು ಮತ್ತು ಸರ್ಕಾರ ನೀರಿನ ಸಮಸ್ಯೆ ನಿವಾರಣೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಜನತೆಯ ಜೀವ ಉಳಿಸಬೇಕೆಂಬುದು ನಾಗರಿಕರ ಒತ್ತಾಸೆಯಾಗಿದೆ.