ನಾಲ್ವರು ಕಳ್ಳರ ಸೆರೆ; 4 ಬೈಕ್, ಉಂಗುರ ವಶ
ದೊಡ್ಡಬಳ್ಳಾಪುರ: ನಾಲ್ವರು ದ್ವಿಚಕ್ರವಾಹನ ಕಳ್ಳರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು ಬಂಧಿತರಿಂದ 4 ಬೈಕ್ಗಳು, 1 ಚಿನ್ನದ ಉಂಗುರ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ದೊಡ್ಡಬಳ್ಳಾಪುರ ಹೊರವಲಯದ ಮುತ್ತೂರು ಗ್ರಾಮದ ಮಂಜುನಾಥ(24), ದೀಪಕ್(21), ಲೋಕೇಶ್(20), ನಾರಾಯಣಸ್ವಾಮಿ(24) ಎಂದು ಗುರುತಿಸಲಾಗಿದೆ.ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಅಪೆರಲ್ಪಾರ್ಕ್, ಟೆಕ್ಸ್ಟೈಲ್ ಪಾರ್ಕ್ ಮತ್ತಿತರ ಕಡೆಗಳಲ್ಲಿ ರಾತ್ರಿ ಪಾಳಿ ಮುಗಿಸಿ ಬರುವ ಕಾರ್ಮಿರನ್ನು ಬೆದರಿಸಿ ನಗನಾಣ್ಯ ಲೂಟಿ ಮಾಡುತ್ತಿದ್ದ ಕುರಿತು ದೂರುಗಳು ದಾಖಲಾಗುತ್ತಿದ್ದದ್ದರ ಬೆನ್ನುಹತ್ತಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬೆಸೆಂಟ್ಪಾರ್ಕ್, ರೈಲುನಿಲ್ದಾಣ, ಮಾಕಳಿದುರ್ಗ ಮತ್ತಿತರ ಪ್ರದೇಶಗಳಲ್ಲಿ ದ್ವಿಚಕ್ರವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು ಎಂದು ವಿವರಿಸಿರುವ ಪೊಲೀಸರು ಈ ಆರೋಪಿಗಳ ವಿರುದ್ಧ ಹಲವು ಪ್ರಕರಣಗಳಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಶಂಕಿ ಡೆಂಘೀ: ಚಾಲಕ ಬಲಿ
ಮಾಗಡಿ: ಶಂಕಿತ ಡೆಂಘೀಜ್ವರಕ್ಕೆ ಗುರುವಾರ ವ್ಯಕ್ತಿಯೊಬ್ಬ ಬಲಿಯಾದ ಘಟನೆ ತಾಲೂಕಿನ ಮರಲಗೊಂಡಲದಲ್ಲಿ ನಡೆದಿದೆ.ಕಳೆದ 4 ದಿನಗಳಿಂದ ಜ್ವರದಿಂದ ಬಳಲುತಿದ್ದ ಮರಲಗೊಂಡಲದ ವಾಸಿ ಸರ್ಕಾರಿ ಬಸ್ ಚಾಲಕ ಶ್ರೀಧರ್ (26) ಡೆಂಘೀಜ್ವರಕ್ಕೆ ಮೃತಪಟ್ಟಿದ್ದಾನೆ.ಜ್ವರ ಕಾಣಿಸಿಕೊಂಡ ಕೂಡಲೇ ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ವಾಸಿಯಾಗದ ಕಾರಣ ರಕ್ತ ಪರೀಕ್ಷೆ ಮಾಡಿಸಿಕೊಂಡು ಶಂಕಿತ ಡೆಂಘೀಜ್ವರ ಎಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಶ್ರೀಧರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಈಗಾಗಲೇ ಶಂಕಿತ ಡೆಂಘೀಜ್ವರಕ್ಕೆ ತಾಲೂಕಿನಲ್ಲಿ 14 ಮಂದಿ ಬಲಿಯಾಗಿದ್ದಾರೆ. ಮರಲಗೊಂಡಲದಲ್ಲಿ ಡೆಂಘೀಜ್ವರಕ್ಕೆ ಇದು 2ನೇ ಬಲಿ. ಶಂಕಿತ ಡೆಂಘೀಗೆ ನಾಗರಿಕರು ಭಯಭೀತರಾಗಿದ್ದಾರೆ. ಮುಂಜಾಗ್ರತವಾಗಿ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲು ಅಗತ್ಯ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿಗ್ರಾಮ ನೈರ್ಮಲ್ಯ ಕಾಪಾಡಲು ಒತ್ತು ನೀಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಜು.2ಕ್ಕೆ ಕಬ್ಬು ಬೆಳೆಗಾರರ ಸಭೆ
ರಾಮನಗರ: ರಾಮನಗರದ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಜು.2ರ ಬೆಳಗ್ಗೆ 10ಕ್ಕೆ ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಕೊಳ್ಳಿಗನಹಳ್ಳಿ ಸಮುದಾಯ ಭವನದಲ್ಲಿ ಕಬ್ಬು ಬೆಳೆಗಾರರ ಹಾಗೂ ರೈತ ಬಾಂಧವರ ಕುಂದುಕೊರತೆ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಂಗಲ್ಯ ಸರ ಅಪಹರಣ
ಚಿಂತಾಮಣಿ: ವಾಯು ವಿಹಾರಕ್ಕೆ ತೆರಳಿದ್ದ ಗೃಹಿಣಿಯೊಬ್ಬರ ಮೈಮೇಲಿದ್ದ ಲಕ್ಷಾಂತರ ರು.ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರವನ್ನು ಅಪರಿಚಿತ ಯುವಕರು ದ್ವಿ ಚಕ್ರವಾಹನದಲ್ಲಿ ಬಂದು ಕಸಿದುಕೊಂಡು ಹೋಗಿರುವ ಘಟನೆ ಪಟ್ಟಣದ ಹೊರವಲಯದ ರೇಲ್ವೆ ಅಂಡರ್ ಪಾಸ್ ಬಳಿ ಇರುವ ವಾಯುಪುತ್ರ ನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಪಟ್ಟಣದಲ್ಲಿನ ರೇಲ್ವೆ ಅಂಡರ್ಪಾಸ್ ಬಳಿ ಇರುವ ವಾಯುಪುತ್ರನಗರ ನಿವಾಸಿ ರತ್ನಮ್ಮ ಕೃಷ್ಣಮೂರ್ತಿ ಎಂಬುವರು ಗುರುವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋಗಿ ಹಿಂತಿರುಗಿ ಮನೆಗೆ ಬರುವಾಗ ಇಬ್ಬರು ಅಪರಿಚಿತ ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ಸುಮಾರು ರು. 2 ಲಕ್ಷ ಮೌಲ್ಯದ 70 ಗ್ರಾಂ ಬಂಗಾರದ ಮಾಂಗಲ್ಯ ಸರ ಕಸಿದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
30 ರಂದು ಯೋಗ ಶಿಬಿರ
ಕೋಲಾರ: ನಗರದ ಪತಂಜಲಿ ಯೋಗಶಿಕ್ಷಣ ಸಮಿತಿ ವತಿಯಿಂದ ಜೂ.30 ರಂದು ಬೆಳಗ್ಗೆ 7.30 ಗಂಟೆಗೆ 76ನೇ ಯೋಗ ವರ್ಗದ ಸಮಾರೋಪ ಮತ್ತು 77ನೇ ಯೋಗ ವರ್ಗದ ಉದ್ಘಾಟನಾ ಕಾಯಕ್ರಮವನ್ನು ರೇಲ್ವೆ ನಿಲ್ದಾಣದ ಸಮೀಪದ ಪತಂಜಲಿ ಯೋಗವುಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಯೋಗ ವರ್ಗವೂ ಪತಂಜಲಿ ಯೋಗ ಮಂದಿರ, ಪ್ರತಿ ನಿತ್ಯ ಬೆಳಗ್ಗೆ ಮತ್ತು ಸಂಜೆ 5.30 ರಿಂದ 7 ಗಂಟೆಯವರಿಗೆ ನಡೆಲಿದೆ. ಪತ್ರಕರ್ತರ ಭವನ, ವಕೀಲರ ಭವನಗಳಲ್ಲಿ ಬೆಳಗ್ಗೆ 5.30ರಿಂದ 7 ರವರೆಗೂ ಪ್ರತಿನಿತ್ಯ ನಡೆಯುತ್ತದೆ. ಸ್ವಾಸ್ಥ್ಯ ರಕ್ಷಣೆ ಮತ್ತು ಆರೋಗ್ಯ ವರ್ಧನೆಗಾಗಿ ಯೋಗ ಮಂದಿರದಲ್ಲಿ ಉಚಿತ ಯೋಗ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಶಿಬಿರದಲ್ಲಿ 14 ವರ್ಷದಿಂದ ಮೇಲ್ಪಟ್ಟ ಎಲ್ಲರೂ ಭಾಗವಹಿಸಬಹುದಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಿಸಪ್ಪಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ವಿ.ವೇಣುಗೋಪಾಲ್ ತಿಳಿಸಿದ್ದಾರೆ. ಆಸಕ್ತರು ಮಾಹಿತಿಗಾಗಿ ಪ್ರಧಾನ ಕಾರ್ಯದರ್ಶಿ ಎಸ್.ವಿ.ವೇಣುಗೋಪಾಲ್-94483-10320, ಮುಖ್ಯ ಶಿಕ್ಷಕ ಶ್ರೀನಿವಾಸ್-97380-53502 ಇವರನ್ನು ಸಂಪರ್ಕಿಸಲು ಕೋರಿದ್ದಾರೆ.
ತಾಲೂಕು ಸಮ್ಮೇಳನ ಅಧ್ಯಕ್ಷರ ಕೃತಜ್ಞತೆ
ಚಿಂತಾಮಣಿ: ಚಿಂತಾಮಣಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಕೋಟಗಲ್ ವಿ.ನಾಗಸುಬ್ರಮಣ್ಯ ತಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ ತಾಲೂಕು ಕಸಾಪ ಅಧ್ಯಕ್ಷ ಎ.ಎಸ್.ನಾಗರಾಜ್ ಮತ್ತು ಪದಾಧಿಕಾರಿಗಳು, ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.