ಮಕ್ಕಳಲ್ಲಿ ಸ್ವಚ್ಛತೆ ಅರಿವು ಮೂಡಿಸಿ:ಚನ್ನಬಸವಣ್ಣ
ಕನ್ನಡಪ್ರಭ ವಾರ್ತೆ ಕೋಲಾರ ಜೂ.27
ಉತ್ತಮ ಆರೋಗ್ಯಕ್ಕಾಗಿ ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆಯ ಅರಿವು ಮೂಡಿಸಬೇಕು ಎಂದು ತಾಲೂಕು ಪಂಚಾಯಿತಿ ಅಧಿಕಾರಿ ಚನ್ನಬಸವಣ್ಣ ಕರೆ ನೀಡಿದರು.ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಶಾಲಾ ಸ್ವಚ್ಛತೆ ಹಾಗೂ ವೈಯಕ್ತಿಕ ಶುಭ್ರತೆಗಾಗಿ ನಿರ್ಮಲ ಭಾರತ ಅಭಿಯಾನ ಹಾಗೂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಶುಭ್ರತೆ ಪ್ರೋತ್ಸಾಹಿಸಿ ಜಿ. ಶ್ರೀನಿವಾಸ್ ನೀಡಿದ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು, ಇದು ಉತ್ತಮ ಪರಿಸರದೊಂದಿಗೆ ಮಕ್ಕಳಲ್ಲಿ ಸದಾ ಗೆಲುವು, ಆತ್ಮಸ್ಥೈರ್ಯ ತುಂಬುತ್ತದೆ ಎಂದರು.ಮಕ್ಕಳಲ್ಲಿ ಸ್ವಚ್ಛತೆ ಕಲಿಕೆಗೂ ಸ್ಫೂರ್ತಿ ತುಂಬುತ್ತದೆ, ಅವರನ್ನು ಸಮಾಜ ಪ್ರೀತಿಯಿಂದ ಕಾಣುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.ನಿರ್ಮಲ ಭಾರತ ಅಭಿಯಾನದ ಸಂಯೋಜಕ ಜಿ. ಶ್ರೀನಿವಾಸ್, ಸ್ವಚ್ಛತೆ ಉತ್ತಮ ಆರೋಗ್ಯದ ಲಕ್ಷಣ ಎಂದು ತಿಳಿಸಿ, ಬಯಲು ಮಲವಿಸರ್ಜನೆ ತ್ಯಜಿಸಿ, ಶೌಚಾಲಯ ಬಳಸಿ ಎಂದು ಕಿವಿಮಾತು ಹೇಳಿದರು. ಶಾಲೆಗಳಲ್ಲಿ ಶೌಚಾಲಯಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ, ನೀರಿನ ಸಮಸ್ಯೆ ಇದ್ದರೆ ಸ್ಥಳೀಯ ಗ್ರಾಮ ಪಂಚಾಯತಿಯ ಸಹಕಾರ ಪಡೆದು ನಿವಾರಿಸಿಕೊಳ್ಳಿ ಎಂದರು. ಮುಖ್ಯೋಪಾಧ್ಯಾಯ ಎಸ್. ಮಂಜುನಾಥ್, ಅರಾಭಿಕೊತ್ತನೂರು ಕ್ಲಸ್ಟರ್ ಸಿ.ಆರ್.ಪಿ ಚಂದ್ರಪ್ಪ, ಶಿಕ್ಷಕರಾದ ಸಾವಿತ್ರಿ, ವೆಸ್ಲಿ, ರೇಖಾ, ಭಾರತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.